ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ವಿವಾದ

Published : Jan 08, 2026, 06:19 AM IST
hubli

ಸಾರಾಂಶ

ಮತದಾರರ ಪರಿಷ್ಕರಣೆ ಪೂರ್ವದ ಸಮೀಕ್ಷೆ ವೇಳೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿಯನ್ನು ಬಂಧಿಸುವ ವೇಳೆ, ಪೊಲೀಸರು ಆಕೆಯನ್ನು ವಿವಸ್ತ್ರಗೊಳಿಸಿ, ಥಳಿಸಿದ ಆರೋಪ ಕೇಳಿ ಬಂದಿದೆ.

 ಹುಬ್ಬಳ್ಳಿ :  ಮತದಾರರ ಪರಿಷ್ಕರಣೆ ಪೂರ್ವದ ಸಮೀಕ್ಷೆ ವೇಳೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿಯನ್ನು ಬಂಧಿಸುವ ವೇಳೆ, ಪೊಲೀಸರು ಆಕೆಯನ್ನು ವಿವಸ್ತ್ರಗೊಳಿಸಿ, ಥಳಿಸಿದ ಆರೋಪ ಕೇಳಿ ಬಂದಿದೆ. ಇದರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಘಟನೆ ಖಂಡಿಸಿ ಬಿಜೆಪಿಗರು ಬೀದಿಗಿಳಿದಿದ್ದಾರೆ ಹಾಗೂ ಸುಜಾತಾ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ಹಾಗೂ ಹುಬ್ಬಳ್ಳಿ-ಧಾರವಾಡ ಪೊಲೀಸ್‌ ಆಯುಕ್ತ ಶಶಿಕುಮಾರ್‌ ಇದನ್ನು ನಿರಾಕರಿಸಿದ್ದು, ‘ಮಹಿಳೆಯೇ ಸ್ವತಃ ವಿವಸ್ತ್ರಗೊಂಡು ಮಹಿಳಾ ಪೊಲೀಸರನ್ನು ಕಚ್ಚಿದ್ದಾಳೆ. ಪೊಲೀಸರ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ’ ಎಂದಿದ್ದಾರೆ.

ಘಟನೆ ಖಂಡಿಸಿ, ತಪ್ಪಿತಸ್ಥ ಪೊಲೀಸ್‌ ಅಧಿಕಾರಿಯ ಅಮಾನತ್ತಿಗೆ ಆಗ್ರಹಿಸಿ ಬುಧವಾರ ಬಿಜೆಪಿ ಕಾರ್ಯಕರ್ತರು ಕೇಶ್ವಾಪುರ ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕೂಡ ಘಟನೆ ಖಂಡಿಸಿದ್ದಾರೆ.

ಘಟನೆಯೇನು?:

ಹುಬ್ಬಳ್ಳಿಯಲ್ಲಿ ಮತದಾರರ ಪರಿಷ್ಕರಣೆ ಪೂರ್ವದ ಸಮೀಕ್ಷೆ ನಡೆಸಲಾಗುತ್ತಿದ್ದು, ನಾಲ್ಕೈದು ದಿನಗಳ ಹಿಂದೆ ಚಾಲುಕ್ಯ ನಗರದಲ್ಲಿ ಬಿಎಲ್‌ಒ (ಮತಗಟ್ಟೆ ಅಧಿಕಾರಿ) ನಂದಿನಿ ಸಮೀಕ್ಷೆ ನಡೆಸಿದ್ದರು. ಈ ವೇಳೆ, ಬಿಜೆಪಿಯ ಸುಜಾತಾ ಹಂಡಿ ಸಮೀಕ್ಷಾ ಅಧಿಕಾರಿಯೊಂದಿಗೆ ಇದ್ದು ಮಾಹಿತಿ ನೀಡಿದ್ದರು. ಇದಕ್ಕೆ ಪಾಲಿಕೆಯ ಕಾಂಗ್ರೆಸ್‌ ಸದಸ್ಯೆ ಸುವರ್ಣ ಕಲ್ಲಕುಂಟ್ಲಾ ಹಾಗೂ ಇತರರು ಆಕ್ಷೇಪಿಸಿದ್ದರು. ಆಗ ಇಬ್ಬರ ನಡುವೆ ವಾಗ್ವಾದ ನಡೆದು ಕೈಕೈ ಮಿಲಾಯಿಸುವ ಹಂತಕ್ಕೂ ತಲುಪಿತ್ತು. ಬಳಿಕ ಕೇಶ್ವಾಪುರ ಪೊಲೀಸ್‌ ಠಾಣೆಯಲ್ಲಿ ದೂರು-ಪ್ರತಿ ದೂರು ನೀಡಲಾಗಿತ್ತು.

ಆದರೆ, ಸುಜಾತಾ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆಂದು ಸುವರ್ಣ ಕಲ್ಲಕುಂಟ್ಲಾ ನೀಡಿದ ದೂರಿನನ್ವಯ ಪೊಲೀಸರು ಎಫ್‌ಐಆರ್‌ ದಾಖಲಿಸಿ 3 ದಿನದ ಹಿಂದೆಯೇ ಸುಜಾತಾ ಅವರನ್ನು ಬಂಧಿಸಿದ್ದರು. ಬಂಧನದ ವೇಳೆ ಅವರನ್ನು ವಿವಸ್ತ್ರಗೊಳಿಸಿ ಅವಮಾನ ಮಾಡಿದ್ದಾರೆ. ಕಾಂಗ್ರೆಸ್‌ ನಾಯಕರ ಕುಮ್ಮಕ್ಕಿನಿಂದ ಪೊಲೀಸರು ಅಮಾನುಷವಾಗಿ ನಡೆದುಕೊಂಡಿದ್ದಾರೆ ಎಂದು ಬಿಜೆಪಿ ನಾಯಕರು ಹಾಗೂ ಸುಜಾತಾ ತಾಯಿ ಕಮಲಮ್ಮ ಆರೋಪಿಸಿದ್ದಾರೆ.

ಪೊಲೀಸರೇ ವಿವಸ್ತ್ರಗೊಳಿಸಿದ್ದಾರೆ: ಕಮಲಮ್ಮ

ಸುಜಾತಾ ಹಂಡಿ ಅವರ ತಾಯಿ ಕಮಲಮ್ಮ ಮಾತನಾಡಿ, ‘ನನ್ನ ಪುತ್ರಿಯನ್ನು ಪೊಲೀಸರೇ ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದಾರೆ. ನನ್ನ ಕುಟುಂಬಕ್ಕೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಪಾಲಿಕೆ ಸದಸ್ಯೆ ಸುವರ್ಣ ಕಲ್ಲಕುಂಟ್ಲಾ ಅವರಿಂದ ನಮ್ಮ ಕುಟುಂಬಕ್ಕೆ ನಿರಂತರವಾಗಿ ಕಿರುಕುಳ ನೀಡಲಾಗುತ್ತಿದೆ. ತಕ್ಷಣವೇ ಸುವರ್ಣ ಅವರನ್ನು ಬಂಧಿಸಿ, ಹಲ್ಲೆ ನಡೆಸಿದ ಪೊಲೀಸರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಈ ಸಂಬಂಧ ಕೇಶ್ವಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಬಿಜೆಪಿ ಪ್ರತಿಭಟನೆ; ಠಾಣೆಗೆ ಮುತ್ತಿಗೆ ಯತ್ನ:

ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಆಕ್ರೋಶಗೊಂಡ ಬಿಜೆಪಿಗರು, ಬುಧವಾರ ಮಧ್ಯಾಹ್ನ ಕೇಶ್ವಾಪುರ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ಮಹಿಳೆ ಅವಮಾನಿಸಿದ ಠಾಣಾಧಿಕಾರಿ ಕೆ‌.ಎಸ್.ಹಟ್ಟಿ ಹಾಗೂ ಭಾಗಿಯಾಗಿರುವ ಸಿಬ್ಬಂದಿಯನ್ನು ಅಮಾನತು ಮಾಡಬೇಕು. ಸುವರ್ಣ ಕಲ್ಲಕುಂಟ್ಲಾ ಅವರನ್ನು ಬಂಧಿಸಬೇಕು ಎಂದು ಪಟ್ಟು ಹಿಡಿದರು. ಪೊಲೀಸರು ಅವರನ್ನು ತಡೆಯಲು ಯತ್ನಿಸಿದಾಗ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ, ಮೇಯರ್‌-ಉಪಮೇಯರ್‌ ಸೇರಿದಂತೆ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿ, ನಂತರ ಬಿಡುಗಡೆ ಮಾಡಲಾಯಿತು.

ಮಹಿಳೆಯೇ ವಿವಸ್ತ್ರಗೊಂಡಿದ್ದಾಳೆ: ಸಿಎಂ

ಈ ಬಗ್ಗೆ ಹಾವೇರಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ’ಸುಜಾತಾ ಹಂಡಿ ಎಂಬುವರ ವಿರುದ್ಧ ಎಫ್ಐಆರ್ ಆಗಿದ್ದು, ಅವರನ್ನು ಬಂಧಿಸಲು ಹೋದಾಗ ಮಹಿಳೆಯೇ ಸ್ವತಃ ವಿವಸ್ತ್ರಗೊಂಡು ಮಹಿಳಾ ಪೊಲೀಸರನ್ನು ಕಚ್ಚಿದ್ದಾರೆ. ಆ ವೇಳೆ, ಹತ್ತುಕ್ಕೂ ಹೆಚ್ಚು ಮಹಿಳಾ ಪೊಲೀಸರಿದ್ದರು. ಕಾನೂನನ್ನು ಯಾರೂ ಕೈಗೆ ತೆಗೆದುಕೊಳ್ಳಬಾರದು. ಹಾಗೆ ಮಾಡಿದವರ ಮೇಲೆ ಕಾನೂನಿನ ರೀತಿಯ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಪೊಲೀಸರು ಮಹಿಳೆಯನ್ನು ವಿವಸ್ತ್ರಗೊಳಿಸಿಲ್ಲ. ಅವರೇ ವಿವಸ್ತ್ರಗೊಂಡಿದ್ದಾರೆ. ಜತೆಗೆ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದಾರೆ. ಆದರೂ ಈ ಕುರಿತಂತೆ ತಾಯಿ ನೀಡಿರುವ ದೂರಿನ್ವಯ ಪ್ರಕರಣ ದಾಖಲಿಸಿಕೊಂಡು ಡಿಸಿಪಿ ನೇತೃತ್ವದಲ್ಲಿ ಸಮಗ್ರ ತನಿಖೆ ನಡೆಸಲಾಗುವುದು.

- ಶಶಿಕುಮಾರ್‌, ಹುಬ್ಬಳ್ಳಿ-ಧಾರವಾಡ ಪೊಲೀಸ್‌ ಕಮಿಷನರ್‌

ಆಗಿದ್ದೇನು?

- ಹುಬ್ಬಳ್ಳಿಯಲ್ಲಿ ಮತದಾರ ಪಟ್ಟಿ ಪರಿಷ್ಕರಣೆ ಪೂರ್ವ ಸಮೀಕ್ಷೆ ವೇಳೆ ಗಲಾಟೆ

- ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿ-ಕಾಂಗ್ರೆಸ್ಸಿಗರ ಮಧ್ಯೆ ಭಾರಿ ಜಗಳ

- ಈ ವೇಳೆ ಸುಜಾತಾ ಹಂಡಿ ಹಲ್ಲೆ ಮಾಡಿದ್ದಾಳೆ ಎಂದು ಕಾಂಗ್ರೆಸ್ಸಿಗರ ದೂರು

- ಸುಜಾತಾ ಬಂಧನ ವೇಳೆ ಪೊಲೀಸರು ವಿವಸ್ತ್ರ ಮಾಡಿದ್ದಾರೆ: ತಾಯಿ ದೂರು

- ವಿಡಿಯೋ ವೈರಲ್‌, ಘಟನೆ ಖಂಡಿಸಿ ಪೊಲೀಸ್‌ ಠಾಣೆಗೆ ಬಿಜೆಪಿ ಮುತ್ತಿಗೆ ಯತ್ನ

PREV
Stay updated with the latest news, developments and happenings from Dharwad district (ಧಾರವಾಡ ಸುದ್ದಿ) — including politics, local governance, civic issues, education, crime, social events and more. All in Kannada, from Kannada Prabha.
Read more Articles on

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಯುವ ಜನಾಂಗ ದೇಸಿ ಪರಂಪರೆಯತ್ತ ಮರಳಲಿ