ನವಲಗುಂದ:

ಪಟ್ಟಣದ ರಾಮಲಿಂಗ ಕಾಮದೇವರ ದರ್ಶನಕ್ಕೆ 4ನೇ ದಿನವಾದ ಮಂಗಳವಾರವೂ ಜನಸಾಗರ ಹರಿದು ಬಂದಿತ್ತು. ಇಷ್ಟಾರ್ಥ ಸಿದ್ಧಿ ಕಾಮಣ್ಣ ಎಂದೇ ಖ್ಯಾತಿಯಾಗಿರುವ ರಾಮಲಿಂಗ ಕಾಮಣ್ಣ ದೇವರಿಗೆ ಭಕ್ತರೊಬ್ಬರು ಬಂಗಾರದ ತೊಟ್ಟಿಲು ನೀಡುವ ಮೂಲಕ ಹರಕೆ ತೀರಿಸಿದರು. ಈ ನಡುವೆ ಗ್ರಹಣದ ಛಾಯೆ ಕಾಮಣ್ಣ ದೇವರಿಗೆ ತಟ್ಟಲಿಲ್ಲ. ಎಂದಿನಂತೆ ಬೆಳಗಿನಿಂದಲೇ ದರ್ಶನಕ್ಕೆ ಸರತಿ ಸಾಲಿನಲ್ಲಿ ಭಕ್ತರು ಆಗಮಿಸಿ ದರ್ಶನ ಪಡೆದರು.

ಮಂಗಳವಾರ ಚಂದ್ರಗ್ರಹಣದ ಮಧ್ಯೆಯೂ ಲಕ್ಷಾಂತರ ಭಕ್ತರು ರಾಮಲಿಂಗ ಕಾಮದೇವರ ದರ್ಶನ ಪಡೆದರು. ದೇವಸ್ಥಾನದ ವತಿಯಿಂದ ನಿತ್ಯ 30 ಕ್ವಿಂಟಲಗಿಂತಲೂ ಹೆಚ್ಚು ಪ್ರಸಾದ ತಯಾರಿಸಿ ವಿತರಿಸಲಾಯಿತು. ಇದಲ್ಲದೇ ಬೇರೆ ಬೇರೆ ಸಂಘಟನೆ, ಅಭಿಮಾನಿಗಳು ಭಕ್ತರಿಗೆ ನೀರು, ಮಜ್ಜಿಗೆ ಸೇರಿದಂತೆ ಹಲವು ಪ್ರಸಾದ ಸೇವೆ ಕೈಗೊಂಡಿದ್ದರು.

ಬಂಗಾರದ ತೊಟ್ಟಿಲು:

ಹುಣ್ಣಿಮೆ ದಿನವಾಗಿದ್ದರಿಂದ ಬೆಳಗಿನ ಜಾವ 3ರಿಂದ 11ರ ವರೆಗೆ ಮಹಿಳೆಯರು. ಮಕ್ಕಳು ಸೇರಿದಂತೆ ದೀರ್ಘದಂಡ ನಮಸ್ಕಾರ ಹಾಕುವ ಮೂಲಕ ಹರಕೆ ತೀರಿಸಿದರು. ಜತೆಗೆ ಕಳೆದ ವರ್ಷ ಅಥವಾ ಹಿಂದಿನ ವರ್ಷ ಬೇಡಿಕೊಂಡು ತೆರಳಿದ್ದ ಭಕ್ತರು ಬಂದು ಹರಕೆ ತೀರಿಸಿದರು. ಈ ನಡುವೆ ಭಕ್ತರೊಬ್ಬರು ಇಲ್ಲಿಂದ ತೊಟ್ಟಿಲು ತೆಗೆದುಕೊಂಡು ಹೋಗಿ ಪೂಜಿಸಿ ಮಗು ದಯಪಾಲಿಸಲೆಂದು ಬೇಡಿಕೊಂಡಿದ್ದರು. ಅದು ಈಡೇರಿದ ಪರಿಣಾಮ ಬಂಗಾರದ ತೊಟ್ಟಿಲನ್ನು ಹರಕೆಯಾಗಿ ತೀರಿಸಿದರು..


ಗಣ್ಯರ ದರ್ಶನ:

ಶಾಸಕ ಎನ್.ಎಚ್. ಕೋನರಡ್ಡಿ, ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಕೆಪಿಸಿಸಿ ಸದಸ್ಯ ವಿನೋದ ಅಸೂಟಿ, ತಹಸೀಲ್ದಾರ್‌ ಸುಧೀರ್ ಸಾಹುಕಾರ್, ಎಸ್ಪಿ ಗುಂಜನ್ ಆರ್ಯ ಸೇರಿದಂತೆ ವಿವಿಧ ಗಣ್ಯರು, ಅಧಿಕಾರಿಗಳೂ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನಾಶೀರ್ವಾದ ಪಡೆದರು.

ಈ ವೇಳೆ ದೇವಸ್ಥಾನ ಟ್ರಸ್ಟ್‌ ಕಮಿಟಿ ಕಾರ್ಯದರ್ಶಿ ಯಲ್ಲಪ್ಪ ಭೋವಿ ಅವರನ್ನು ದೇವಸ್ಥಾನದ ಪರವಾಗಿ ಸತ್ಕರಿಸಲಾಯಿತು. ಯುವ ಮುಖಂಡ ದೇವರಾಜ ದಾಡಿಭಾವಿ ತಮ್ಮ ಸಂಗಡಿಗರೊಂದಿಗೆ ಸಾವಿರಾರು ಮಜ್ಜಿಗೆ ಪಾಕೆಟ್‌ ವಿತರಿಸಿದರು.

ಇಂದು ಬಣ್ಣದಾಟ:

ಮಾ. 4ರ ಸಂಜೆವರೆಗೂ ದರ್ಶನಕ್ಕೆ ಅವಕಾಶವಿದೆ. ಜತೆಗೆ ಸಂಜೆ ವೇಳೆಗೆ ಕಾಮದಹನವಾಗಲಿದ್ದು, ಬಣ್ಣದಾಟವೂ ನಡೆಯಲಿದೆ.