ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್‌!

Published : Nov 06, 2026, 10:05 AM IST
Railway

ಸಾರಾಂಶ

ಐಟಿ-ಬಿಟಿ ಕ್ಷೇತ್ರದಲ್ಲಿ ಕನ್ನಡಿಗರು ಹಾಗೂ ಕನ್ನಡವನ್ನು ಕಡೆಗಣಿಸಲಾಗುತ್ತಿದೆ ಎಂದು ಕನ್ನಡಪರ ಸಂಘಟನೆಗಳು ಆರೋಪಿಸುತ್ತಿರುವ ಬೆನ್ನಲ್ಲೇ ರೈಲ್ವೆ ನೇಮಕಾತಿ ಮತ್ತು ಮುಂಬಡ್ತಿಯಲ್ಲಿ ಕನ್ನಡಿಗರಿಗೆ ಮತ್ತೆ ಅನ್ಯಾಯ ಎಸಗಲಾಗುತ್ತಿದೆ.

ಅಜೀಜ ಅಹ್ಮದ ಬಳಗಾನೂರ 

ಹುಬ್ಬಳ್ಳಿ : ಐಟಿ-ಬಿಟಿ ಕ್ಷೇತ್ರದಲ್ಲಿ ಕನ್ನಡಿಗರು ಹಾಗೂ ಕನ್ನಡವನ್ನು ಕಡೆಗಣಿಸಲಾಗುತ್ತಿದೆ ಎಂದು ಕನ್ನಡಪರ ಸಂಘಟನೆಗಳು ಆರೋಪಿಸುತ್ತಿರುವ ಬೆನ್ನಲ್ಲೇ ರೈಲ್ವೆ ನೇಮಕಾತಿ ಮತ್ತು ಮುಂಬಡ್ತಿಯಲ್ಲಿ ಕನ್ನಡಿಗರಿಗೆ ಮತ್ತೆ ಅನ್ಯಾಯ ಎಸಗಲಾಗುತ್ತಿದೆ. ಕರ್ನಾಟಕದಲ್ಲಿ ನಡೆಯುವ ಎಲ್ಲಾ ಪರೀಕ್ಷೆಗಳನ್ನು ಕನ್ನಡದಲ್ಲಿ ನಡೆಸಲಾಗುವುದು ಎಂದು ಈ ಹಿಂದೆ ಸ್ವತಃ ಕನ್ನಡಿಗರೇ ಆಗಿರುವ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ ಅವರೇ ಭರವಸೆ ನೀಡಿದ್ದ ಹೊರತಾಗಿಯೂ ಮತ್ತೆ ಕನ್ನಡಿಗರಿಗೆ ಅನ್ಯಾಯ ಎಸಲಾಗುತ್ತಿದೆ.

ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಅ.19ರಂದು Station Master against 15% LDCE (ಎಸ್ಸಿ-10, ಎಸ್ಟಿ-5 ಸೇರಿ ಒಟ್ಟು 15 ಹುದ್ದೆ) ಅಧಿಸೂಚನೆ ಹೊರಡಿಸಿದ್ದು, ನ 22ರವರೆಗೆ ಅರ್ಜಿ ಹಾಕಲು ಕಾಲಾವಕಾಶ ನೀಡಲಾಗಿದೆ. ಜು.9ರಂದು Chief Controller in Level-07 against 50% LDCE (ಎಸ್ಸಿ-2, ಎಸ್ಟಿ-1, ಯುಆರ್‌-9 ಸೇರಿ ಒಟ್ಟು 12 ಹುದ್ದೆ)ಯ ಮುಂಬಡ್ತಿಗಾಗಿ ಅಧಿಸೂಚನೆ ಹೊರಡಿಸಿದ್ದು, ಇನ್ನೂ ಪರೀಕ್ಷೆ ನಡೆದಿಲ್ಲ. ಈ ಎರಡರಲ್ಲೂ ಕನ್ನಡಕ್ಕೆ ಅವಕಾಶ ನೀಡಿಲ್ಲ. ಅಭ್ಯರ್ಥಿಗಳು ಹಿಂದಿ ಅಥವಾ ಇಂಗ್ಲಿಷ್‌ನಲ್ಲಷ್ಟೇ ಪರೀಕ್ಷೆ ಬರೆಯಬೇಕೆಂದು ಸೂಚಿಸಲಾಗಿದೆ.

ರೈಲ್ವೆ ನೌಕರರು ಮುಂಬಡ್ತಿ ಪರೀಕ್ಷೆಯನ್ನು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಬರೆಯುವಂತೆ ಸೂಚಿಸಿರುವುದು ಕನ್ನಡಿಗರ ಅಸಮಾಧಾನಕ್ಕೆ ಕಾರಣವಾಗಿದೆ. ಕನ್ನಡದಲ್ಲಿ ಪರೀಕ್ಷೆ ನಡೆಸುವ ಭರವಸೆ, ಕನ್ನಡಪರ ಸಂಘಟನೆಗಳ ಹೋರಾಟದ ನಡುವೆಯೂ ರೈಲ್ವೆ ಬೋರ್ಡ್ ತನ್ನ ನಿಲುವು ಬದಲಿಸದಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಈಡೇರದ ಭರವಸೆ:

ಮಾ.17ರಂದು ವಿವಿಧ ಮುಂಬಡ್ತಿ ಹುದ್ದೆಗಳಿಗೆ ಮಾತೃಭಾಷೆ ಸೇರಿ 3 ಭಾಷೆಗಳಲ್ಲಿ ಪರೀಕ್ಷೆ ನಡೆಸುವುದಾಗಿ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ, ಪರೀಕ್ಷೆಗೆ 4 ದಿನ ಬಾಕಿ ಇರುವಾಗ ಕನ್ನಡಕ್ಕೆ ಕೊಕ್‌ ನೀಡಲಾಗಿತ್ತು. ಇದನ್ನು ಖಂಡಿಸಿ ಕನ್ನಡಪರ ಸಂಘಟನೆಗಳು ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿಯ ಪರೀಕ್ಷಾ ಕೇಂದ್ರಗಳಿಗೆ ಮುತ್ತಿಗೆ ಹಾಕಿದ್ದವು. ಹೋರಾಟಕ್ಕೆ ಮಣಿದ ಆರ್‌ಆರ್‌ಬಿ ಅಧ್ಯಕ್ಷರು, ಮಾತೃಭಾಷೆಯಲ್ಲಿ ಪರೀಕ್ಷೆಗೆ ಅವಕಾಶ ಕಲ್ಪಿಸುವವರೆಗೆ ಪರೀಕ್ಷೆ ನಡೆಸುವುದಿಲ್ಲ ಎಂದು ಭರವಸೆ ನೀಡಿದ್ದರು.

ಬಳಿಕ ಜೂ.25ರಂದು ಪರೀಕ್ಷೆ ನಡೆಸುವ ಅಧಿಸೂಚನೆ ಹೊರಬಂದಾಗ ಮತ್ತೆ ಆಕ್ರೋಶ ವ್ಯಕ್ತವಾಗಿ ಪ್ರತಿಭಟನೆ ಎಚ್ಚರಿಕೆ ನೀಡಲಾಗಿತ್ತು. ಆದರೆ ಪ್ರತಿಭಟನೆಯಿಂದ ಪರೀಕ್ಷೆ ಮುಂದೂಡಿಕೆ ಆಗಬಹುದು ಎಂಬ ಆತಂಕದಿಂದ ನೂರಾರು ಅಭ್ಯರ್ಥಿಗಳು ಹೋರಾಟ ಕೈಬಿಡುವಂತೆ ಸಂಘಟನೆಗಳ ಮುಖಂಡರಿಗೆ ಪತ್ರ ಬರೆದು ಮನವಿ ಮಾಡಿದ್ದರು. ಜತೆಗೆ ಕನ್ನಡಪರ ಸಂಘಟನೆಯ ಮುಖಂಡರೊಂದಿಗೆ ಹುಬ್ಬಳ್ಳಿ ರೈಲುಸೌಧದಲ್ಲಿ ನೈಋತ್ಯ ರೈಲ್ವೆ ವ್ಯವಸ್ಥಾಪಕರೊಂದಿಗೆ ಸಭೆ ಕರೆದು ಪರೀಕ್ಷೆಗೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ್ದ ಹೋರಾಟಗಾರರು ಪ್ರತಿಭಟನೆಯಿಂದ ಹಿಂದೆ ಸರಿದಿದ್ದರು. ಈಗ ಮತ್ತೆ ಮಾತೃಭಾಷೆ ಹೊರತುಪಡಿಸಿ ಆಂಗ್ಲ, ಹಿಂದಿಯಲ್ಲಿ ಮಾತ್ರ ಪರೀಕ್ಷೆ ನಡೆಸುವುದಾಗಿ ಅಧಿಸೂಚನೆ ಹೊರಡಿಸಿರುವುದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.

1992ರ ಆದೇಶಕ್ಕೆ ಅರ್ಥವೇನು?

ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ನಡೆಸುವ ಕುರಿತು 1992ರಲ್ಲಿ ಹೊರಡಿಸಿರುವ ಆದೇಶದ ಆಶಯವಿದ್ದರೂ, ಅದರ ಅನುಷ್ಠಾನದ ವಿಚಾರದಲ್ಲಿ ರೈಲ್ವೆ ಮಂಡಳಿ ನಿರ್ಲಕ್ಷ್ಯ ವಹಿಸುತ್ತಿದೆ ಎಂಬುದು ಕನ್ನಡಪರ ಸಂಘಟನೆಗಳ ಆಕ್ಷೇಪ. ಜೊತೆಗೆ ಮುಂಬಡ್ತಿ ಪರೀಕ್ಷೆಯ ಅಧಿಸೂಚನೆಯಲ್ಲೇ ಕನ್ನಡಕ್ಕೆ ಅವಕಾಶ ಕಲ್ಪಿಸಬೇಕು. ಹೈದರಾಬಾದ್ ವಿಭಾಗದಲ್ಲಿ ಅನುಸರಿಸಿರುವ ಮಾದರಿಯನ್ನು ಕರ್ನಾಟಕದಲ್ಲೂ ಜಾರಿಗೊಳಿಸಬೇಕು ಎಂಬುದು ರೈಲ್ವೆ ನೌಕರರು ಹಾಗೂ ಕನ್ನಡಪರ ಸಂಘಟನೆಗಳ ಒತ್ತಾಯ ಮಾಡಿವೆ.

ರಾಜ್ಯದ ಐಟಿ ಬಿಟಿಯಲ್ಲಿ ಕನ್ನಡಿಗರ ಕಡೆಗಣನೆ ಬಗ್ಗೆ ಸರ್ಕಾರದ ಆಕ್ಷೇಪ

ಅದರ ಬೆನ್ನಲ್ಲೇ ರೈಲ್ವೆ ಮಂಡಳಿಯಿಂದ ಪರೀಕ್ಷೇಲಿ ಕನ್ನಡಿಗರಿಗೆ ಅನ್ಯಾಯ

ರೈಲ್ವೆ ಮುಂಬಡ್ತಿ ಪರೀಕ್ಷೆ ಇಂಗ್ಲಿಷ್‌, ಹಿಂದೀಲಿ ಮಾತ್ರ ನಡೆಸಲು ನಿರ್ಧಾರ

ಪರೀಕ್ಷೆಗೆ ಅ.19ರಂದು ಅಧಿಸೂಚನೆ. ನ.22ರವರೆಗೆ ಅರ್ಜಿಗೆ ಅವಕಾಶ

ಈ ಹಿಂದೆ ಕನ್ನಡಕ್ಕೆ ಅನ್ಯಾಯ ಆಗಲು ಬಿಡಲ್ಲ ಎಂದಿದ್ದ ಸಚಿವ ಸೋಮಣ್ಣ

ಅದರ ಹೊರತಾಗಿಯೂ ಪರೀಕ್ಷೇಲಿ ಕನ್ನಡಿಗ ಅಭ್ಯರ್ಥಿಗಳಿಗೆ ಅನ್ಯಾಯ

ಹೈದರಾಬಾದ್‌ಗೆ ತೆಲುಗು, ಕರ್ನಾಟಕಕ್ಕೆ ಕನ್ನಡವಿಲ್ಲ?

ಸಿಬಿಟಿ ಆಧಾರಿತ ಮುಂಬಡ್ತಿ ಪರೀಕ್ಷೆಗಳಲ್ಲಿ ಬೇರೆ ರಾಜ್ಯಗಳಲ್ಲೂ ಪ್ರಾದೇಶಿಕ ಭಾಷೆಗೆ ಅವಕಾಶವಿಲ್ಲ. ಹಿಂದಿ, ಇಂಗ್ಲಿಷ್‌ನಲ್ಲಷ್ಟೇ ಪರೀಕ್ಷೆ ನಡೆಯುತ್ತದೆ ಎಂಬುದು ಅಧಿಕಾರಿಗಳ ಸಮರ್ಥನೆ. ಆದರೆ, ಜು.18ರಿಂದ 23ರವರೆಗೆ ಹೈದರಾಬಾದ್ ವಿಭಾಗದಲ್ಲಿ ನಡೆದ ಮುಂಬಡ್ತಿ ಪರೀಕ್ಷೆಗಳಲ್ಲಿ ತೆಲುಗು, ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು. ಇದರ ಪ್ರತಿಗಳು ‘ಕನ್ನಡಪ್ರಭ’ಕ್ಕೆ ಲಭ್ಯವಾಗಿವೆ. ಹಾಗಾದರೆ ಕರ್ನಾಟಕದಲ್ಲಿ ಕನ್ನಡಕ್ಕೆ ಏಕೆ ಅವಕಾಶವಿಲ್ಲ? ಎಂಬುದು ನೌಕರರ ಪ್ರಶ್ನೆ.

PREV
Stay updated with the latest news, developments and happenings from Dharwad district (ಧಾರವಾಡ ಸುದ್ದಿ) — including politics, local governance, civic issues, education, crime, social events and more. All in Kannada, from Kannada Prabha.
Read more Articles on

Recommended Stories

ಕಸಾಪ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಜಾಣಗೆರೆ ವೆಂಕಟರಾಮಯ್ಯ ಸ್ಪರ್ಧೆ
ಮಾದರಿ ವ್ಯಕ್ತಿತ್ವ ಕಟ್ಟಿಕೊಡುವ ವಲಸೆ ಹೋದ ಕನ್ನಡಿಗನ ಕಥೆ