ವಲಸೆ ಹೋದ ಕನ್ನಡಿಗನ ಕಥೆ’ ಡಾ. ಹಿರೇಮಲ್ಲೂರ ಈಶ್ವರನ್ ಅವರ ಅತ್ಮಕಥೆ ಕೃತಿಯಾಗಿದ್ದು ಇದರಲ್ಲಿ ಅವರ ಜೀವನ, ಸಾಧನೆ, ಬದುಕು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರು ಬೆಳೆದುಬಂದ ಯಶೋಗಾಥೆಯನ್ನು ಕಟ್ಟಿಕೊಟ್ಟಿದ್ದಾರೆ.

ಧಾರವಾಡ:

ವಲಸೆ ಹೋದ ಕನ್ನಡಿಗನ ಕಥೆ’ ಡಾ. ಹಿರೇಮಲ್ಲೂರ ಈಶ್ವರನ್ ಅವರ ಅತ್ಮಕಥೆ ಕೃತಿಯಾಗಿದ್ದು ಇದರಲ್ಲಿ ಅವರ ಜೀವನ, ಸಾಧನೆ, ಬದುಕು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರು ಬೆಳೆದುಬಂದ ಯಶೋಗಾಥೆಯನ್ನು ಕಟ್ಟಿಕೊಟ್ಟಿದ್ದಾರೆ. ಇಂದಿನ ವಿದ್ಯಾರ್ಥಿಗಳು ಹಾಗೂ ಯುವಕರಿಗೆ ಮಾದರಿ ವ್ಯಕ್ತಿತ್ವ ಕಟ್ಟಿಕೊಳ್ಳಲು ಮಹತ್ವದ ಕೃತಿ ಎಂದು ಡಾ. ಎಂ.ಎಂ. ಕಲಬುರ್ಗಿ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಡಾ. ವೀರಣ್ಣ ರಾಜೂರ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘವು ಡಾ. ಹಿರೇಮಲ್ಲೂರ ಈಶ್ವರನ್ ಸ್ಮರಣೆಯ ದತ್ತಿ ಅಂಗವಾಗಿ ಇಲ್ಲಿಯ ಕಲ್ಯಾಣನಗರದ ಡಾ. ಹಿರೇಮಲ್ಲೂರ ಈಶ್ವರನ್ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ `ವಲಸೆಹೋದ ಕನ್ನಡಿಗನ ಕಥೆ’ ಪುಸ್ತಕ ಬಿಡುಗಡೆಗೊಳಿಸಿದ ಅವರು, ಅವರು ಕಲಿಯುವ ಸಂದರ್ಭದಲ್ಲಿ ಶಿಕ್ಷಕರು ವಿದ್ಯಾರ್ಥಿಗಳನ್ನು ಜಾತ್ಯತೀತವಾಗಿ ಕಾಣುತ್ತಿದ್ದರು. ಆ ಸಂದರ್ಭದ ಮೂಢಂನಂಬಿಕೆ, ಜಾತಿ ವ್ಯವಸ್ಥೆ ಹಾಗೂ ವೈಚಾರಿಕತೆ ಕುರಿತಂತೆ ತಮ್ಮ ಅನುಭವಗಳನ್ನು ಈ ಕೃತಿಯಲ್ಲಿ ಬಿಚ್ಚಿಟ್ಟಿದ್ದಾರೆ. ಧರ್ಮ, ದೇವರ ಬಗ್ಗೆ ನಂಬಿಕೆ ಮೀರಿ ವೈಚಾರಿಕತೆ ಕುರಿತಂತೆ ಮೂರು ಧರ್ಮಗಳ ಅಧ್ಯಯನ ಮಾಡಿದವರು. ಸಾಹಿತ್ಯದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ ಇವರು ಸಾರಸ್ವತ ಲೋಕಕ್ಕೆ ಹಲವಾರು ಶ್ರೇಷ್ಠ ಕೃತಿಗಳನ್ನು ನೀಡಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಬಸವಪ್ರಭು ಹೊಸಕೇರಿ, ಶೈಕ್ಷಣಿಕ ಪಠ್ಯದ ಜತೆಗೆ ಜೀವನದ ಪಾಠವನ್ನೂ ಕಲಿಯಬೇಕು ಎಂದರು. ಡಾ. ಹಿರೇಮಲ್ಲೂರ ಈಶ್ವರನ್ ಸೇರಿದಂತೆ ಅನೇಕ ಕನ್ನಡಿಗರು ನಮಗೆ ಮಾದರಿಯಾಗಿದ್ದಾರೆ ಎಂದರು.

ಕೆ.ಎಂ. ಅಂಗಡಿತ ಹಾಗೂ ದತ್ತಿದಾನಿ ಮಹಾವಿದ್ಯಾಲಯದ ಪ್ರಾಚಾರ್ಯ ಶಶಿಧರ ತೋಡಕರ ದತ್ತಿ ಆಶಯ ಕುರಿತು ಮಾತನಾಡಿದರು. ಶಂಕರ ಕುಂಬಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕ ಮಾತನಾಡಿದರು. ಡಾ. ಜಿನದತ್ತ ಹಡಗಲಿ ನಿರೂಪಸಿದರು. ಗಾಯತ್ರಿ ದೇಶಪಾಂಡೆ ಪ್ರಾರ್ಥಿಸಿದರು. ಆನಂದ ಗೊಣ್ಣಾಗರ ಪರಿಚಯಿಸಿದರು.