ಹುಬ್ಬಳ್ಳಿ : ರಾಜ್ಯ ಸರ್ಕಾರ ಸೆ.22ರಿಂದ ಜಾತಿಗಣತಿಗೆ ಮುಂದಾಗಿರುವ ಹಿನ್ನೆಲೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ‘ವೀರಶೈವ-ಲಿಂಗಾಯತ ಏಕತಾ ಸಮಾವೇಶ’ದಲ್ಲಿ ಪಂಚಪೀಠಾಧಿಶ್ವರರ ಆದಿಯಾಗಿ ಸಾವಿರಾರು ಗುರು-ವಿರಕ್ತ ಸ್ವಾಮೀಜಿಗಳು ಪಾಲ್ಗೊಂಡು ನಾವೇಲ್ಲರೂ ಒಂದು ಎಂದು ಒಗ್ಗಟ್ಟು ಪ್ರದರ್ಶಿಸಿದರು. ಇದಕ್ಕೆ ನೆಹರೂ ಮೈದಾನದಲ್ಲಿ ಸೇರಿದ್ದ ಸಮುದಾಯದ ಲಕ್ಷಾಂತ ಜನರು ಸಾಕ್ಷಿಯಾಗಿ ವೀರಶೈವ ಲಿಂಗಾಯತ ಎರಡೂ ಒಂದೇ ಎಂಬ ಸಂದೇಶ ಸಾರಿದರು.
ಈ ವೇಳೆ ಮಾತನಾಡಿದ ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಜಗದ್ಗುರುಗಳು, ಸಂವಿಧಾನದಲ್ಲಿ 6 ಧರ್ಮಗಳಿಗೆ ಮಾನ್ಯತೆ ನೀಡಲಾಗಿದೆ. ವೀರಶೈವ ಲಿಂಗಾಯತ ಸ್ವತಂತ್ರ ಧರ್ಮವಾಗಬೇಕು ಎಂದು ಪ್ರಯತ್ನ ನಡೆದಿದ್ದು, ಇದಕ್ಕೆ ಕೇಂದ್ರ ಸರ್ಕಾರ ಇನ್ನೂ ಮಾನ್ಯತೆ ನೀಡಿಲ್ಲ. ಹೀಗಿರುವಾಗ ಈ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆದು ಧರ್ಮದ ಕಾಲಂನಲ್ಲಿ ಏನೆಂದು ನಮೂದಿಸಬೇಕು ಎಂಬುದನ್ನು ಅಖಿಲ ಭಾರತ ವೀರಶೈವ ಮಹಾಸಭಾ ನಿರ್ಧರಿಸಬೇಕು ಎಂದು ಸಲಹೆ ನೀಡಿದರು. ಎಲ್ಲರೂ ಇದೇ ರೀತಿ ಒಂದಾಗಿ ಹೋದರೆ ಸಮಾಜಕ್ಕೆ ಉಜ್ವಲ ಭವಿಷ್ಯವಿದೆ ಎಂದರು.
ಶಿರಹಟ್ಟಿ ಫಕೀರ ದಿಂಗಾಲೇಶ್ವರ ಶ್ರೀಗಳು ಮಾತನಾಡಿ, ಇದು ಪ್ರಥಮ ಸಮಾವೇಶ ಆಗಿರುವುದರಿಂದ ಯಾವುದೇ ನಿರ್ಣಯ ತೆಗೆದುಕೊಳ್ಳುವುದಿಲ್ಲ. ನಮ್ಮ ಸಮುದಾಯದ ಗಣ್ಯರ ಜತೆಯಲ್ಲಿ ಚರ್ಚಿಸಿ ಮುಂದಿನ ಸಮಾವೇಶಗಳಲ್ಲಿ ನಿರ್ಣಯ ತೆಗೆದುಕೊಳ್ಳುತ್ತೇವೆ. ಈ ಸಮಾವೇಶದಲ್ಲಿ ವೀರಶೈವ ಲಿಂಗಾಯತ ಒಂದೇ ಎಂಬ ನಿರ್ಣಯ ಮಾತ್ರ ತೆಗೆದುಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.
ಪಂಚಪೀಠಗಳಿಂದ ಏಕತಾ ಸಂದೇಶ:
ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ವೀರಶೈವ ಲಿಂಗಾಯತ ಸಮಾಜದ ಏಕತೆಗಾಗಿ ಸಮಾನವಾಗಿ ಕುಳಿತುಕೊಳ್ಳಲು ಹಿಂದೇಟು ಹಾಕುವುದಿಲ್ಲ ಎಂಬ ಸಂದೇಶವನ್ನು ಪಂಚ ಪೀಠಾಧಿಪತಿಗಳು ನೀಡಿದ್ದಾರೆ. ಸಮುದಾಯದವರು ನಾವೇಲ್ಲರೂ ಒಂದೇ ಎಂಬುದನ್ನು ಮರೆಯಬೇಡಿ ಎಂದರು.
ತುಮಕೂರು ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಇಲ್ಲಿ ಸೇರಿರುವುದು ಶಕ್ತಿ ಪ್ರದರ್ಶನವಲ್ಲ. ಭಕ್ತಿ ಪ್ರದರ್ಶನ. ಈ ರೀತಿಯ ವಾತಾವರಣ ಹೆಚ್ಚುತ್ತಾ ಹೋಗಬೇಕಿದೆ ಎಂದರು.
ಸ್ವಾಮೀಜಿಗಳ ಪಾದಯಾತ್ರೆ:
ಸಮಾವೇಶದ ವೇದಿಕೆ ಕಾರ್ಯಕ್ರಮ ಆರಂಭಕ್ಕೂ ಮುನ್ನ 1000ಕ್ಕೂ ಅಧಿಕ ಮಠಾಧೀಶರು ಹುಬ್ಬಳ್ಳಿಯ ಮೂರುಸಾವಿರ ಮಠದಿಂದ ನೆಹರೂ ಮೈದಾನದವರೆಗೆ ಪಾದಯಾತ್ರೆ ನಡೆಸಿದರು. ಈ ವೇಳೆ ಸಾವಿರಾರು ಭಕ್ತರು, ಗಣ್ಯರು ಇದ್ದರು.
ಜಾತಿ ಗಣತಿ ಪಾರದರ್ಶಕ
ಆಗಿರಲಿ: ಗದೀಶ ಶೆಟ್ಟರ್
ಜನಗಣತಿ ಕೇಂದ್ರ ಸರ್ಕಾರದ ಕೆಲಸ. ಆದರೆ, ಇದೀಗ ರಾಜ್ಯ ಸರ್ಕಾರ ಮಾಡಲು ಮುಂದಾಗಿದ್ದು, ಅದು ಪಾರದರ್ಶಕವಾಗಿರಬೇಕು. ಸಮೀಕ್ಷೆ ತಪ್ಪಾದರೆ ಸರ್ಕಾರ ಜನಪ್ರಿಯತೆ ಕಳೆದುಕೊಳ್ಳುತ್ತದೆ. ಧರ್ಮದ ವಿಚಾರದಲ್ಲಿ ವೀರಶೈವ-ಲಿಂಗಾಯತ ಹಿಂದೂ ಧರ್ಮದ ಭಾಗವೇ ಆಗಿದೆ. ವೀರಶೈವ ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ಸಿಕ್ಕಿಲ್ಲ. ಮಹಾರಾಷ್ಟ್ರದಲ್ಲಿ 2 ಕೋಟಿಗೂ ಅಧಿಕ ಜನಸಂಖ್ಯೆ ಇದೆ. ಆದರೆ ಕರ್ನಾಟಕದಲ್ಲಿ ಲಕ್ಷಗಳ ಲೆಕ್ಕದಲ್ಲಿ ತೋರಿಸಲಾಗುತ್ತಿದೆ. ಆದ ಕಾರಣ ಎಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕಿದೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿದರು.
ಎಲ್ಲರೂ ಒಂದು ಎಂದು
ಹೇಳೋಣ: ಬೊಮ್ಮಾಯಿ
ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಹತ್ತಾರು ವರ್ಷಗಳ ಹೋರಾಟವಿದ್ದು, ನಮ್ಮ ಪ್ರಯತ್ನಕ್ಕೆ ಮುಂದೆ ಜಯ ಸಿಕ್ಕೇ ಸಿಗುತ್ತದೆ. ಆದರೆ, ನಾವೀಗ ಸಂವಿಧಾನದಲ್ಲಿರುವ ಧರ್ಮವನ್ನಷ್ಟೇ ನಮೂದಿಸಬೇಕು. ಜಾತಿಯ ವಿಚಾರದಲ್ಲಿ ವೀರಶೈವ-ಲಿಂಗಾಯತರು ಎಲ್ಲರೂ ಒಂದು ಎಂದು ಹೇಳೋಣ. ರಾಜ್ಯದ ನಂತರ ಕೇಂದ್ರದ ಜನಗಣತಿಯೂ ನಡೆಯಲಿದೆ. ಹೀಗಾಗಿ ಎಲ್ಲರನ್ನೂ ಸೇರಿಸಿ ಒಂದು ನಿರ್ಣಯ ತೆಗೆದುಕೊಳ್ಳಬೇಕು. ನಾವು ತೆಗೆದುಕೊಳ್ಳುವ ನಿರ್ಣಯ ಸಂವಿಧಾನ ಬದ್ಧವಾಗಿರಬೇಕು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.