ಇಂದು ಧಾರವಾಡ ತಾಲೂಕು ಸಾಹಿತ್ಯ ಸಮ್ಮೇಳನ

KannadaprabhaNewsNetwork | Published : Feb 27, 2024 1:35 AM

ಸಾರಾಂಶ

ಫೆ. 27ರ ಮಂಗಳವಾರ ಇಲ್ಲಿಯ ಆಲೂರು ವೆಂಕಟರಾವ್ ಭವನದಲ್ಲಿ ಧಾರವಾಡ ತಾಲೂಕು 10ನೇ ಸಾಹಿತ್ಯ ಸಮ್ಮೇಳನ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಧಾರವಾಡ

ಸಂಶೋಧಕ ಡಾ. ಸಂತೋಷ ಹಾನಗಲ್ಲ ಸರ್ವಾಧ್ಯಕ್ಷತೆಯಲ್ಲಿ ಫೆ. 27ರ ಮಂಗಳವಾರ ಇಲ್ಲಿಯ ಆಲೂರು ವೆಂಕಟರಾವ್ ಭವನದಲ್ಲಿ ಧಾರವಾಡ ತಾಲೂಕು 10ನೇ ಸಾಹಿತ್ಯ ಸಮ್ಮೇಳನ ನಡೆಯಲಿದೆ.

ಬೆಳಗ್ಗೆ 9ಕ್ಕೆ ವಿವಿಧ ವಾದ್ಯಮೇಳ ಜೊತೆಗೆ ಕಡಾಪ ಮೈದಾನದಿಂದ ಸಮ್ಮೇಳನಾಧ್ಯಕ್ಷರ ದಿಬ್ಬಣ ಹಾಗೂ ಕನ್ನಡಕ್ಕಾಗಿ ನಡಿಗೆ ಜರುಗಲಿದೆ. ಮಾಜಿ ಮೇಯರ್ ಈರೇಶ ಅಂಚಟಗೇರಿ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ. ಬೆಳಗ್ಗೆ 10.30ಕ್ಕೆ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ವೆಂಕಟೇಶ ಸಮ್ಮೇಳನ ಉದ್ಘಾಟಿಸಲಿದ್ದು, ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಆಶಯ ನುಡಿಯುವರು. ಶ್ರೀಧರ ಗಸ್ತಿ ವಿರಚಿತ ''''ಏನಾದವೂ ಆ ದಿನಗಳು'''' ಕವನ ಸಂಕಲನ ಸಾಹಿತಿ ಡಾ. ವೀರಣ್ಣ ರಾಜೂರ ಬಿಡುಗಡೆ ಮಾಡುವರು. ಕೇಂದ್ರ ಕಸಪಾ ನಿಟಕಪೂರ್ವ ಗೌರವ ಕಾರ್ಯದರ್ಶಿ ವ.ಚ. ಚೆನ್ನೇಗೌಡ, ಶಂಕರ ಹಲಗತ್ತಿ ಪಾಲ್ಗೊಳ್ಳಲಿದ್ದಾರೆ.

ನಿಕಟಪೂರ್ವ ಸಮ್ಮೇಳನಾಧ್ಯಕ್ಷೆ ಲೀಲಾ ಕಲಕೋಟಿ ಮಾತಿನ ಬಳಿಕ ಡಾ. ಸಂತೋಷ ಹಾನಗಲ್ಲ ಅವರ ಸಮ್ಮೇಳನಾಧ್ಯಕ್ಷರ ಭಾಷಣ ನಡೆಯಲಿದೆ. ''''''''ಸಾಹಿತ್ಯದಲ್ಲಿ ರಾಷ್ಟ್ರೀಯ ಪ್ರಜ್ಞೆ'''''''', ''''''''ಕನ್ನಡ ಸಾಹಿತ್ಯದಲ್ಲಿ ತಾಯಿ'''''''' ಗೋಷ್ಠಿಗಳು ನಡೆಯಲಿವೆ. ಡಾ. ರಾಜೇಶ್ವರಿ ಮಹೇಶ್ವರಯ್ಯ ಅಧ್ಯಕ್ಷತೆ ವಹಿಸುವರು. ನಂತರ ಕವಿಗೋಷ್ಠಿ, ದತ್ತಿದಾನಿಗಳಿಗೆ ಸನ್ಮಾನ ಹಾಗೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಸರ್ವಾಧ್ಯಕ್ಷರ ಕುರಿತು

ಸಂಶೋಧನಾ ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಅಭಿರುಚಿ ಹಾಗೂ ಇತಿಹಾಸ ಉಪನ್ಯಾಸಕರಾದ ಡಾ. ಸಂತೋಷ ಹಾನಗಲ್ಲ, ಕವಿವಿಯಿಂದ ಸ್ನಾತಕೋತ್ತರ ಪದವಿಧರರು. ಅತಿಥಿ ಉಪನ್ಯಾಸಕರಾಗಿ ಸೇವೆ ಪ್ರಾರಂಭಿಸಿ ಪ್ರಾಚಾರ್ಯರಾಗಿ, ಉಪನಿರ್ದೇಶಕರಾಗಿ, ಸಂಶೋಧನಾ ಕೇಂದ್ರದ ಸಂಯೋಜಕರಾಗಿ ವಿವಿಧ ಮಜಲುಗಳಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿ ಸದ್ಯ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯಾಗಿದ್ದಾರೆ. ಜೊತೆಗೆ ಕನ್ನಡ ಸಾಹಿತ್ಯಕ್ಕೆ ಸಾಕಷ್ಟು ಸಂಶೋಧನಾ ಗ್ರಂಥಗಳನ್ನೂ ನೀಡಿದ್ದಾರೆ. ಪ್ರಮುಖವಾಗಿ ಬೆಳಗಾವಿ ಜಿಲ್ಲೆಯ ವಾಡೆಗಳು, ಉತ್ತರ ಕರ್ನಾಟಕದ ಸ್ಥಳನಾಮಗಳು, ಕರ್ನಾಟಕ ಏಕೀಕರಣ, ಧಾರವಾಡ ಜಿಲ್ಲೆಯ ಶಾಸನಗಳು, ಕನ್ನಡ ಭಾಷೆ, ಕರ್ನಾಟಕದ ಕೋಟೆಗಳು, ಚಿತ್ರ ಮಾಲಿಕೆಗಳು, ಸರ್ಕಾರದ ಶಾಲಾ ಪಠ್ಯ ಪುಸ್ತಕಗಳ ಸಲಹಾ ಸಮಿತಿಯಲ್ಲಿ ವಿಶೇಷ ತಜ್ಞರಾಗಿಯೂ ಕೆಲಸ ಮಾಡಿದ ಅನುಭವ ಇದೆ. ಅವರ ಸಾಹಿತ್ಯ ಕೃಷಿಗೆ ಹಲವು ಪ್ರಶಸ್ತಿಗಳು ಅರಸಿ ಬಂದಿವೆ.

Share this article