ಜಬುವಾದ ಗಾಂಧಿ ಜತೆ ಧಾರವಾಡಿಗರ ಸಂವಾದ

KannadaprabhaNewsNetwork |  
Published : Aug 25, 2025, 01:00 AM IST
ಧಾರವಾಡದ ಹೊಯ್ಸಳ ನಗರದಲ್ಲಿನ ಡಾ. ಪ್ರಕಾಶ ಬಟ್ ದಂಪತಿಯೊಂದಿಗೆ ಪದ್ಮಶ್ರಿ ಮಹೇಶ ಶರ್ಮಾ ಮಾತುಕಥೆ. | Kannada Prabha

ಸಾರಾಂಶ

ಶಿವಗಂಗಾ ಎಂಬ ಸಾಮಾಜಿಕ ಸಂಸ್ಥೆ ಕಟ್ಟಿ ಆ ಮೂಲಕ ಸಮಾಜ ಸುಧಾರಣಾ ಕೈಂಕರ್ಯದಲ್ಲಿ ತೊಡಗಿಕೊಂಡಿರುವ ಮಹೇಶ ಶರ್ಮಾ, ಬಡವರೊಂದಿಗೆ ತಾವೂ ಬಡವರಂತೆ ಬದುಕಲು ವೈಭೋಗದ ಬಟ್ಟೆ ತ್ಯಜಿಸಿ ಕೇವಲ ಸೊಂಟಕ್ಕೊಂದು ಪಂಚೆ, ಹೆಗಲಮೇಲೊಂದು ತುಂಡು ಬಟ್ಟೆಯಲ್ಲೇ ತ್ಯಾಗಜೀವನ ನಡೆಸುತ್ತಿದ್ದಾರೆ.

ಹುಬ್ಬಳ್ಳಿ: ಮಧ್ಯಪ್ರದೇಶದ ಸಾವಿರಾರು ಆದಿವಾಸಿ, ಬುಡಕಟ್ಟುಗಳ ಜನತೆಯನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ತಮ್ಮ ಬದುಕನ್ನೇ ಮುಡುಪಾಗಿಟ್ಟಿರುವ ಜಬುವಾದ ಗಾಂಧಿ ಎಂದೇ ಖ್ಯಾತರಾಗಿರುವ ಪದ್ಮಶ್ರಿ ಮಹೇಶ ಶರ್ಮಾ ಅವರು ಶನಿವಾರ ಧಾರವಾಡದ ಹೊಯ್ಸಳ ನಗರದಲ್ಲಿನ ಗ್ರಾಮಾಭಿವೃದ್ಧಿ ಚಿಂತಕ ಡಾ.ಪ್ರಕಾಶ ಭಟ್‌ ಮನೆಗೆ ಭೇಟಿ ನೀಡಿ ಸ್ಥಳೀಯರೊಂದಿಗೆ ಆತ್ಮೀಯ ಸಂವಾದ ನಡೆಸಿದರು.

ಶಿವಗಂಗಾ ಎಂಬ ಸಾಮಾಜಿಕ ಸಂಸ್ಥೆ ಕಟ್ಟಿ ಆ ಮೂಲಕ ಸಮಾಜ ಸುಧಾರಣಾ ಕೈಂಕರ್ಯದಲ್ಲಿ ತೊಡಗಿಕೊಂಡಿರುವ ಮಹೇಶ ಶರ್ಮಾ, ಬಡವರೊಂದಿಗೆ ತಾವೂ ಬಡವರಂತೆ ಬದುಕಲು ವೈಭೋಗದ ಬಟ್ಟೆ ತ್ಯಜಿಸಿ ಕೇವಲ ಸೊಂಟಕ್ಕೊಂದು ಪಂಚೆ, ಹೆಗಲಮೇಲೊಂದು ತುಂಡು ಬಟ್ಟೆಯಲ್ಲೇ ತ್ಯಾಗಜೀವನ ನಡೆಸುತ್ತಿದ್ದಾರೆ.

ಬುಡಕಟ್ಟು ಜನರ ಸಾಮಾಜಿಕ ಪದ್ಧತಿಯಾದ "ಹೆಲ್ಮಾ " (ಸಂಕಷ್ಟದಲ್ಲಿ ಇರುವವರಿಗೆ ನೆರವು ನೀಡುವ ಪದ್ಧತಿ) ಮೂಲಕ ಗ್ರಾಮೀಣ ಕೆರೆಗಳ ಅಭಿವೃದ್ಧಿ, ಗಿಡ ನೆಡುವುದು ಇತ್ಯಾದಿ ಜನೋಪಯೋಗಿ ಕಾರ್ಯಗಳನ್ನು ಮಾಡಿ ಆ ಬುಡಕಟ್ಟು ಜನರ ಬದುಕಿನಲ್ಲಿ ಬಹು ದೊಡ್ಡ ಬದಲಾವಣೆಯನ್ನು ತಂದಿದ್ದಾರೆ. ಅವರ ಈ ಸಾಧನೆಗೆ ಕೇಂದ್ರ ಸರ್ಕಾರ ಪದ್ಮಶ್ರಿ ನೀಡಿ ಗೌರವಿಸಿದೆ.

ಶರ್ಮಾ ಅವರ ಶಿವಗಂಗಾ ಸಂಸ್ಥೆಯ ಸ್ವಯಂ ಸೇವಕರಾಗಿರುವ ಬೆಳಗಾವಿಯ ವಿಶ್ವನಾಥ ಅವರು ಡಾ.ಪ್ರಕಾಶ ಭಟ್ ಅವರ ಹಳ್ಳಿ ಕಟ್ಟುವ ಕಷ್ಟ ಸುಖ ಕೃತಿಯನ್ನು ಓದಿ, ಶರ್ಮಾ ಅವರನ್ನು ಡಾ.ಭಟ್ ಅವರ ಮನೆಗೆ ಕರೆದುಕೊಂಡು ಬಂದಿದ್ದರು.

ತಮ್ಮ ಈ ಯಶೋಗಾಥೆಯನ್ನು ಮಹೇಶ ಶರ್ಮಾ ಅವರು ಧಾರವಾಡ ಜನತೆಗೂ ಉಣಬಡಿಸಿ ಧನ್ಯತೆ ವ್ಯಕ್ತಪಡಿಸಿದರು. ಸುಮಾರು ಮೂರು ಗಂಟೆಗಳ ಕಾಲ ನಡೆದ ಸಂವಾದದಲ್ಲಿ ಅನೇಕ ಸಂಗತಿಗಳನ್ನು ಮನಮುಟ್ಟುವಂತೆ ಬಿಚ್ಚಿಟ್ಟರು. ಬಡವರು, ಆದಿವಾಸಿಗಳು, ಅನಕ್ಷರಸ್ಥರು, ಶೋಷಿತರ ಸೇವೆಯೇ ನಿಜವಾದ ದೇವರ ಸೇವೆ. ಸಮಾಜದ ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗುವುದೇ ನಿಜವಾದ ಅಭಿವೃದ್ಧಿ. ಇಂಥ ಕಾರ್ಯಕ್ಕೆ ಜನತೆ ಹೆಚ್ಚು ಹೆಚ್ಚು ಆಸಕ್ತಿ ವಹಿಸಿ, ಇದು ಕೂಡ ತಮ್ಮ ಕರ್ತವ್ಯ ಎಂದು ಭಾವಿಸಿ ಸೇವೆಗೆ ಮುಂದಾಗಬೇಕು ಎಂದು ಒತ್ತಿ ಹೇಳಿದರು.

ಶರ್ಮಾ ಅವರ ಜೊತೆ ಡಾ. ಹರ್ಷಿತಾ ಪಾಟೀಲ್, ಆದಿವಾಸಿ ಕಾರ್ಯಕರ್ತರಾದ ರಂಗಾ, ಭಾನು, ವೀಣಾ ಮತ್ತು ವಿಶ್ವನಾಥ ಇದ್ದರು.

ಧಾರವಾಡದ ನಿವೃತ್ತ ಇಂಜಿನೀಯರ್ ಜಿ.ಸಿ.ತಲ್ಲೂರ, ಶ್ರೀನಿವಾಸ ಕುಲಕರ್ಣಿ, ನಿರ್ಮಲಾ ಹಿರೇಗೌಡರ್, ದಿವಾಕರ ಹೆಗಡೆ, ಮಾಧುರಿ, ಜಯಂತ, ಸುನಂದಾ ಭಟ್ ಮತ್ತಿತರರು ಈ ಸಂವಾದದಲ್ಲಿ ಭಾಗಿಯಾಗಿದ್ದರು.

ಡಾ. ಪ್ರಕಾಶ ಭಟ್ ಅವರ ಹಳ್ಳಿ ಕಟ್ಟುವ ಕಥನವನ್ನು ಆಸಕ್ತಿಯಿಂದ ಕೇಳಿ ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ಯಾಲಕ್ಕಿಶೆಟ್ಟರ ಕಾಲನಿಯಲ್ಲಿನ ಸುನಂದಾ ಭಟ್ ಅವರ ದೇಶಿ ಅಂಗಡಿಗೆ ಭೇಟಿ ನೀಡಿದರು.

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ