ಮಕ್ಕಳಲ್ಲಿ ಅತಿಸಾರ, ಭೇದಿ ಮರಣ ಪ್ರಮಾಣ ಶೂನ್ಯಕ್ಕೆ ತರಲು ಡಿಎಚ್‌ಒ ಕರೆ

KannadaprabhaNewsNetwork |  
Published : Jun 18, 2025, 03:51 AM IST
16ಡಿಎಚ್ಓ | Kannada Prabha

ಸಾರಾಂಶ

ಜಿಲ್ಲೆಯಾದ್ಯಂತ ಜೂ.16 ರಿಂದ ಜು.31 ರ ವರೆಗೆ ನಡೆಯುವ ತೀವ್ರತರ ಅತಿಸಾರ ಭೇದಿ ಕೊನೆಗೊಳಿಸುವ ಅಭಿಯಾನ ಕಾರ್ಯಕ್ರಮದ ಮೂಲಕ 5 ವರ್ಷದೊಳಗಿನ ಮಕ್ಕಳಲ್ಲಿ ಅತಿಸಾರ ಭೇದಿಯಿಂದ ಸಂಭವಿಸುವ ಮರಣ ಪ್ರಮಾಣವನ್ನು ಶೂನ್ಯಕ್ಕೆ ತರಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕರೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಜಿಲ್ಲೆಯಾದ್ಯಂತ ಜೂ.16 ರಿಂದ ಜು.31 ರ ವರೆಗೆ ನಡೆಯುವ ತೀವ್ರತರ ಅತಿಸಾರ ಭೇದಿ ಕೊನೆಗೊಳಿಸುವ ಅಭಿಯಾನ ಕಾರ್ಯಕ್ರಮದ ಮೂಲಕ 5 ವರ್ಷದೊಳಗಿನ ಮಕ್ಕಳಲ್ಲಿ ಅತಿಸಾರ ಭೇದಿಯಿಂದ ಸಂಭವಿಸುವ ಮರಣ ಪ್ರಮಾಣವನ್ನು ಶೂನ್ಯಕ್ಕೆ ತರಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಬಸವರಾಜ ಜಿ. ಹುಬ್ಬಳ್ಳಿ ಕರೆ ನೀಡಿದ್ದಾರೆ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಷ್ಟ್ರೀಯ ಆರೋಗ್ಯ ಅಭಿಯಾನ ಆಶ್ರಯದಲ್ಲಿ ನಡೆದ ತೀವ್ರತರ ಅತಿಸಾರ ಕೊನೆಗೊಳಿಸುವ ಅಭಿಯಾನ-2025 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಈ ಅಭಿಯಾನದಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಿಬ್ಬಂದಿ 5 ವರ್ಷದೊಳಗಿನ ಮಕ್ಕಳಿರುವ ಮನೆಗಳನ್ನು ಭೇಟಿ ಮಾಡಿ, ಎರಡು ಓ.ಆರ್.ಎಸ್ ದ್ರಾವಣದ ಪ್ಯಾಕ್ ಹಾಗೂ 14 ಜಿಂಕ್ ಮಾತ್ರೆಗಳನ್ನು ವಿತರಿಸಲಿದ್ದಾರೆ. ಇದರೊಂದಿಗೆ ಕೈತೊಳೆಯುವ ವಿಧಾನ, ಓ.ಆರ್.ಎಸ್ ದ್ರಾವಣವನ್ನು ತಯಾರಿಸುವ ಕುರಿತು ತಾಯಂದಿರಿಗೆ ಮಾಹಿತಿ ನೀಡಬೇಕು ಎಂದರು.

ಮಕ್ಕಳಲ್ಲಿ ಅತಿಸಾರ ಭೇದಿ ಉಂಟಾದಾಗ ಓ.ಆರ್.ಎಸ್ ದ್ರಾವಣ ಹಾಗೂ ಜಿಂಕ್ ಮಾತ್ರೆಗಳನ್ನು ನೀಡುವುದರಿಂದ ಇದು ನಿರ್ಜಲೀಕರಣವನ್ನು ತಡೆಗಟ್ಟುವುದರೊಂದಿಗೆ, ರೋಗನಿರೋಧಕ ಶಕ್ತಿ ಹೆಚ್ಚಿಸಿ, ಮಕ್ಕಳು ವೇಗವಾಗಿ ಚೇತರಿಕೆ ಕಂಡುಕೊಳ್ಳುತ್ತಾರೆ. ತೀವ್ರ ನಿರ್ಜಲೀಕರಣ ಇರುವ ಪ್ರಕರಣಗಳಿದ್ದಲ್ಲಿ ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಗುವುದು ಎಂದರು.

ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಅಮರನಾಥ ಶಾಸ್ತ್ರೀ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿ, ಬೇಸಿಗೆಯ ಕೊನೆಯಲ್ಲಿ ಹಾಗೂ ಮಳೆಗಾಲದ ಪ್ರಾರಂಭದಲ್ಲಿ ಸಾಮಾನ್ಯವಾಗಿ 5 ವರ್ಷದ ಮಕ್ಕಳಲ್ಲಿ ಕಲುಷಿತ ನೀರು ಹಾಗೂ ಆಹಾರ ಸೇವನೆಯಿಂದ ವಾಂತಿಭೇದಿಯಂತಹ ಪ್ರಕರಣಗಳು ಸರ್ವೇಸಾಮಾನ್ಯ ಕಂಡುಬರುತ್ತದೆ. ಇಂತಹ ಅಪಾಯಗಳನ್ನು ತಡೆಗಟ್ಟಲು ಆರೋಗ್ಯ ಇಲಾಖೆಯ ಜೊತೆಗೆ ಸಾರ್ವಜನಿಕರು ಹಾಗೂ ಪೋಷಕರು ಪರಿಸರ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಮಕ್ಕಳಿಗೆ ಕುದಿಸಿ, ಆರಿಸಿದ ನೀರನ್ನು ಸೇವಿಸಲು ನೀಡಬೇಕು. ಆಗ ಮಾತ್ರ ರೋಗಗಳಿಂದ ದೂರ ಉಳಿಯಲು ಸಾಧ್ಯ ಎಂದರು.ಜಿಲ್ಲಾ ಸರ್ಜನ್ ಡಾ. ಅಶೋಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತೀವ್ರತರ ಅತಿಸಾರ ಭೇದಿ ಕೊನೆಗೊಳಿಸುವ ಅಭಿಯಾನ ಕುರಿತ ಮಾಹಿತಿಯನ್ನು ಒಳಗೊಂಡ ಭಿತ್ತಿಪತ್ರವನ್ನು ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ರಾಜಗೋಪಾಲ್ ಭಂಡಾರಿ, ಪ್ರಸೂತಿ ತಜ್ಞೆ ಡಾ. ಉಷಾ ಭಟ್, ಮಕ್ಕಳ ತಜ್ಞರಾದ ಡಾ. ಸಂದೀಪ್, ಡಾ. ಮಹಾದೇವ ಭಟ್, ಆಶಾ ಕಾರ್ಯಕರ್ತೆಯರು, ತಾಯಂದಿರು ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲಾ ಆರ್. ಸಿ. ಹೆಚ್ ಅಧಿಕಾರಿ ಡಾ. ಜ್ಯೋತ್ಸಾ ಬಿ.ಕೆ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಪ್ರಭಾರ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್ ಎಚ್ ನಿರೂಪಿಸಿ, ಪ್ರಭಾರ ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ ವಂದಿಸಿದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ