ಅಮೃತ್ ೨.೦ ಯೋಜನೆಯ ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ನೀರಿನ ಶುಲ್ಕ ವಸೂಲಿಗೆ ಮುಂದಾದ ಪುರಸಭೆ?

KannadaprabhaNewsNetwork |  
Published : Nov 14, 2026, 02:00 AM IST
ಶಿಗ್ಗಾಂವಿ ಪುರಸಭೆಯಲ್ಲಿ ಪಟ್ಟಣದ ಸಾರ್ವಜನಿಕರು ಪುರಸಭೆಯ ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟಿ ಅವರಿಗೆ ಮನವಿ ಅರ್ಪಿಸಿದರು.  | Kannada Prabha

ಸಾರಾಂಶ

ಶಿಗ್ಗಾಂವಿ ಪುರಸಭೆಯಲ್ಲಿ ಪಟ್ಟಣದ ಸಾರ್ವಜನಿಕರು ಪುರಸಭೆಯ ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟಿ ಅವರಿಗೆ ಮನವಿ ಅರ್ಪಿಸಿದರು.

ಶಿಗ್ಗಾಂವಿ: ಪಟ್ಟಣದ ಸಾರ್ವಜನಿಕರಿಗೆ ಸಮರ್ಪಕ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದ ಅಮೃತ್ ೨.೦ ಯೋಜನೆಯಡಿ ಕೈಗೊಂಡಿರುವ ಕುಡಿಯುವ ನೀರಿನ ಕಾಮಗಾರಿ ಇನ್ನೂ ಸಂಪೂರ್ಣವಾಗಿ ಪೂರ್ಣಗೊಳ್ಳದಿದ್ದರೂ, ಮನೆಗಳಿಗೆ ಅಳವಡಿಸಿರುವ ನೀರಿನ ಮೀಟರ್ ಆಧರಿಸಿ ಶುಲ್ಕ ವಸೂಲಿಗೆ ಮುಂದಾಗಿರುವ ಕ್ರಮದ ಕುರಿತು ಆಕ್ಷೇಪ ವ್ಯಕ್ತಪಡಿಸಿ, ನೀರಿನ ಶುಲ್ಕ ವಸೂಲಿಯನ್ನು ಮುಂದೂಡುವಂತೆ ಪುರಸಭೆ ಮಾಜಿ ಉಪಾಧ್ಯಕ್ಷ ಮಂಜುನಾಥ ಬ್ಯಾಹಟ್ಟಿ ನೇತೃತ್ವದಲ್ಲಿ ಸಾರ್ವಜನಿಕರು ಪುರಸಭೆ ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟಿ ಅವರಿಗೆ ಮನವಿ ಅರ್ಪಿಸಿದರು. ಪಟ್ಟಣದ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಸಮರ್ಪಕ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದ ಅಮೃತ್ ೨.೦ ಯೋಜನೆಯಡಿ ಸುಮಾರು ೬೦ ಕೋಟಿ ರು. ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆಯ ಕಾಮಗಾರಿಯನ್ನು ಸುಮಾರು ಶೇ.೯೦ರಷ್ಟು ಪೂರ್ಣಗೊಳಿಸಲಾಗಿದ್ದರೂ, ಪಟ್ಟಣದ ಎಲ್ಲ ಮನೆಗಳಿಗೆ ಸಮರ್ಪಕವಾಗಿ ನೀರಿನ ಸಂಪರ್ಕ ಕಲ್ಪಿಸುವ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಹಲವೆಡೆ ನಲ್ಲಿಗಳ ಸಂಪರ್ಕ ಕಾಮಗಾರಿ ಬಾಕಿ ಉಳಿದಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.ಯೋಜನೆಯಡಿ ನೀರಿನ ಮೀಟರ್‌ಗಳನ್ನು ಅಳವಡಿಸಲಾಗಿದ್ದರೂ, ಕೆಲವು ಮನೆಗಳಿಗೆ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ನೀರಿನ ಶುಲ್ಕ ವಸೂಲಿ ಮಾಡುವುದು ಸಾರ್ವಜನಿಕರಿಗೆ ಹೊರೆಯಾಗಲಿದೆ. ಪ್ರಸ್ತುತ ಪ್ರತಿ ತಿಂಗಳಿಗೆ ಕನಿಷ್ಠ ೫೬ ರು. ಹಾಗೂ ಪ್ರತಿ ಯೂನಿಟ್ ನೀರಿಗೆ ೭ ರು. ದರ ನಿಗದಿಪಡಿಸಲಾಗಿದೆ.ಇದಲ್ಲದೆ, ನೀರಿನ ಸಂಪರ್ಕ ಮತ್ತು ಪೂರೈಕೆ ವ್ಯವಸ್ಥೆ ಸಂಪೂರ್ಣವಾಗಿ ಸುಧಾರಣೆಯಾಗುವ ಮುನ್ನವೇ ಮೀಟರ್ ಆಧಾರಿತ ಶುಲ್ಕ ವಸೂಲಿಗೆ ಮುಂದಾಗಿರುವುದು ಸರಿಯಾದ ಕ್ರಮವಲ್ಲ. ನೀರು ಸಮರ್ಪಕವಾಗಿ ಪೂರೈಕೆಯಾಗದಿದ್ದರೂ ಸಾರ್ವಜನಿಕರು ಶುಲ್ಕ ಪಾವತಿಸುವ ಪರಿಸ್ಥಿತಿ ನಿರ್ಮಾಣವಾಗಬಾರದು ಎಂದಿದ್ದಾರೆ.ಅಮೃತ್ ೨.೦ ಯೋಜನೆಯಡಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ, ಪಟ್ಟಣದ ಪ್ರತಿಯೊಂದು ಮನೆಗೂ ಸಮರ್ಪಕ ನೀರಿನ ಸಂಪರ್ಕ ಕಲ್ಪಿಸಬೇಕು. ಅಲ್ಲಿಯವರೆಗೆ ನೀರಿನ ಮೀಟರ್‌ಗಳ ಯೂನಿಟ್‌ಗಳನ್ನು ಶೂನ್ಯಕ್ಕೆ ಪರಿಗಣಿಸಿ, ಮಾರ್ಚ್ ೨೦೨೭ರವರೆಗೆ ನೀರಿನ ಶುಲ್ಕ ವಸೂಲಿಯನ್ನು ಮುಂದೂಡಬೇಕು. ಅಲ್ಲದೆ, ಈಗಾಗಲೇ ಮೀಟರ್ ಅಳವಡಿಕೆಯಾಗಿರುವ ಮನೆಗಳಿಗೆ ನೀರಿನ ಸಮರ್ಪಕ ಪೂರೈಕೆ ಖಚಿತಪಡಿಸಿದ ನಂತರವೇ ಶುಲ್ಕ ವಸೂಲಿ ಪ್ರಾರಂಭಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.ಮುಖಂಡರಾದ ಜಯಣ್ಣ ಹೆಸರೂರ, ರವಿ ಚೌಹಾಣ್, ಮಾಲತೇಶ ಯಲಿಗಾರ, ಗುರು ಹೊನ್ನಣ್ಣವರ, ಭಾಷಾಸಾಬ್ ಮಾಸನಕಟ್ಟಿ, ಮಜೀದ್ ಮಾಳಗಿಮನಿ, ಹನುಮಂತಪ್ಪ ಬಂಡಿವಡ್ಡರ, ಸಾಧಿಕ್ ಚಿಂದ್ರಿ, ವಿನಾಯಕ ಶ್ಯಾಡಂಬಿ, ಸಚಿನ ಮಡಿವಾಳರ, ಚಂದ್ರಣ್ಣ ಡೊಳ್ಳೇಶ್ವರ, ಶಿವಪುತ್ರಪ್ಪ ಛಲವಾದಿ, ಶಂಕ್ರಪ್ಪ ಉಳ್ಳಟ್ಟಿ, ಮಂಜುನಾಥ ದುಬೆ, ಸಮಿತ ಸೂರ್ಯವಂಶಿ ಸೇರಿದಂತೆ ಸಾರ್ವಜನಿಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಸರ್ವತೋಮುಖ ಪ್ರಗತಿಗೆ ಶ್ರಮಿಸಿ
ಎಸಿಯಾಗಿ ಪದೋನ್ನತಿ ಹೊಂದಿದ ತಹಸೀಲ್ದಾರ್‌ ಬೋಸಗಿ