ವಾಯವ್ಯ ಸಾರಿಗೆಯ ಆರ್ಥಿಕ ಹೊರೆ ಹೆಚ್ಚಿಸಿದ ಡೀಸೆಲ್‌ ದರ

KannadaprabhaNewsNetwork |  
Published : Jul 04, 2024, 01:13 AM ISTUpdated : Jul 04, 2024, 12:34 PM IST
1132 | Kannada Prabha

ಸಾರಾಂಶ

ಪ್ರತಿನಿತ್ಯ ₹ 6ರಿಂದ ₹ 6.50 ಕೋಟಿ ಆದಾಯ ಸಂಸ್ಥೆಯದ್ದು. ಆದರೆ ನಿರ್ವಹಣೆ ವೆಚ್ಚವೆ ₹ 7 ಕೋಟಿಗೂ ಅಧಿಕವಾಗುತ್ತದೆ. ಹೀಗಾಗಿ ನಷ್ಟ ಎನ್ನುವುದು ಇಲ್ಲಿ ನಿತ್ಯ ನಿರಂತರ. ಸಂಸ್ಥೆ ಪ್ರಾರಂಭವಾಗಿ 25 ವರ್ಷವಾದರೂ ಒಂದು ಬಾರಿ ಕೂಡ ಲಾಭದಲ್ಲಿ ಬಂದ ಉದಾಹರಣೆಯೇ ಇಲ್ಲ.

ಶಿವಾನಂದ ಗೊಂಬಿ

ಹುಬ್ಬಳ್ಳಿ:  ರಾಜ್ಯ ಸರ್ಕಾರ ಡೀಸೆಲ್‌ ಮೇಲಿನ ತೆರಿಗೆ ಹೆಚ್ಚಳ ಮಾಡಿರುವುದರಿಂದ ಮೊದಲೇ ನಷ್ಟದಲ್ಲಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಮತ್ತಷ್ಟು ಆರ್ಥಿಕ ಹೊರೆಯಾಗುತ್ತಿದೆ. ಇದರಿಂದ ಹೊರಬರಲು ದಾರಿ ಹುಡುಕಾಟದಲ್ಲಿ ಸಂಸ್ಥೆ ಇದೆ.

ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯೂ ಆರು ಜಿಲ್ಲೆಗಳ 9 ವಿಭಾಗಗಳನ್ನು ಹೊಂದಿರುವ ದೊಡ್ಡ ನಿಗಮ. ಬೆಳಗಾವಿ, ಚಿಕ್ಕೋಡಿ, ಹುಬ್ಬಳ್ಳಿ-ಧಾರವಾಡ ನಗರ, ಧಾರವಾಡ, ಹುಬ್ಬಳ್ಳಿ ಗ್ರಾಮಾಂತರ, ಶಿರಸಿ, ಗದಗ, ಹಾವೇರಿ, ಬಾಗಲಕೋಟೆ ವಿಭಾಗಗಳು ಇದರ ವ್ಯಾಪ್ತಿಯಲ್ಲಿ ಬರುತ್ತವೆ. 4500ಕ್ಕೂ ಅಧಿಕ ಬಸ್‌ಗಳು ಪ್ರತಿನಿತ್ಯ ಸಂಚರಿಸುತ್ತಿದ್ದರೆ, 24-25 ಲಕ್ಷ ಜನ ಪ್ರತಿನಿತ್ಯ ಬಸ್‌ಗಳನ್ನೇ ಅವಲಂಬಿಸಿರುವುದು ಗೋಚರವಾಗುತ್ತವೆ. 22500ಕ್ಕೂ ಅಧಿಕ ಅಧಿಕಾರ ವರ್ಗ ಸೇರಿದಂತೆ ನೌಕರರು ಇದರಡಿ ಕೆಲಸ ಮಾಡುತ್ತಾರೆ.

ಪ್ರತಿನಿತ್ಯ ₹ 6ರಿಂದ ₹ 6.50 ಕೋಟಿ ಆದಾಯ ಸಂಸ್ಥೆಯದ್ದು. ಆದರೆ ನಿರ್ವಹಣೆ ವೆಚ್ಚವೆ ₹ 7 ಕೋಟಿಗೂ ಅಧಿಕವಾಗುತ್ತದೆ. ಹೀಗಾಗಿ ನಷ್ಟ ಎನ್ನುವುದು ಇಲ್ಲಿ ನಿತ್ಯ ನಿರಂತರ. ಸಂಸ್ಥೆ ಪ್ರಾರಂಭವಾಗಿ 25 ವರ್ಷವಾದರೂ ಒಂದು ಬಾರಿ ಕೂಡ ಲಾಭದಲ್ಲಿ ಬಂದ ಉದಾಹರಣೆಯೇ ಇಲ್ಲ. ಹೀಗಾಗಿ ನಿವೃತ್ತರಿಗೆ ಕೊಡಬೇಕಾದ ಗ್ರ್ಯಾಚುಟಿ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಸರಿಯಾದ ಸಮಯಕ್ಕೆ ನೀಡಲು ಸಾಧ್ಯವಾಗದೇ ಸಂಸ್ಥೆ ಪರದಾಡುತ್ತಿದೆ. ಸರ್ಕಾರದಿಂದ ಬರಬೇಕಾದ ಶಕ್ತಿ ಯೋಜನೆಯ ದುಡ್ಡಿನಲ್ಲೂ ಶೇ.60-70ರಷ್ಟು ಮಾತ್ರ ಬರುತ್ತದೆ. ಕಳೆದ ತಿಂಗಳಿನ ವರೆಗೆ ಲೆಕ್ಕ ಹಾಕಿದರೆ ₹ 300 ಕೋಟಿ ಶಕ್ತಿ ಯೋಜನೆಯದ್ದು ಸಂಸ್ಥೆಗೆ ಬರುವುದು ಬಾಕಿಯಿದೆ ಎಂದು ಮೂಲಗಳು ತಿಳಿಸುತ್ತವೆ. ಇದರ ನಡುವೆ ಇದೀಗ ಡೀಸೆಲ್‌ ದರ ಏರಿಕೆಯ ಬಿಸಿ ಸಂಸ್ಥೆಯ ತಟ್ಟಿದ್ದು, ಆರ್ಥಿಕ ಹೊರೆ ಅನುಭವಿಸುವಂತಾಗಿದೆ.

ಡೀಸೆಲ್‌ ಖರ್ಚೆಷ್ಟು; ಹೊರೆ ಎಷ್ಟು?

ಸಂಸ್ಥೆಯಲ್ಲಿರುವ 4500ಕ್ಕೂ ಅಧಿಕ ಬಸ್‌ಗಳು ಪ್ರತಿನಿತ್ಯ ಸರಿಸುಮಾರು 15.5 ಲಕ್ಷದಿಂದ 16 ಲಕ್ಷ ಕಿಮೀ ಓಡಾಡುತ್ತವೆ. ಪ್ರತಿನಿತ್ಯ ಕನಿಷ್ಠವೆಂದರೆ 3 ಲಕ್ಷ ಲೀಟರ್‌ ಡೀಸೆಲ್‌ ಬಸ್‌ಗಳಿಗೆ ಬೇಕಾಗುತ್ತದೆ. ಕೆಲ ಸಲ ಇದು 3.25 ಲಕ್ಷ ಲೀಟರ್‌ ಕೂಡ ಆಗುತ್ತದೆ. 3 ಲಕ್ಷ ಲೀಟರ್‌ ಲೆಕ್ಕ ಹಿಡಿದರೂ ಪ್ರತಿನಿತ್ಯ ₹ 9 ಲಕ್ಷ ಹೆಚ್ಚುವರಿ ಹಣ ಖರ್ಚಾಗುತ್ತಿದೆ. ಅಂದರೆ ತಿಂಗಳಿಗೆ ₹ 2.70 ರಿಂದ ₹ 3 ಕೋಟಿವರೆಗೂ ಡೀಸೆಲ್‌ಗೆ ಇದೀಗ ಹೆಚ್ಚುವರಿ ಖರ್ಚಾಗುತ್ತಿದೆ.

ದರ ಪರಿಷ್ಕರಣೆಗೆ ಪ್ರಸ್ತಾವನೆ:

ಸಂಸ್ಥೆಯ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ತಗ್ಗಿಸಲು ದರ ಪರಿಷ್ಕರಣೆ ಮಾಡುವಂತೆ ಸಂಸ್ಥೆಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಸರ್ಕಾರ ಇನ್ನೂ ನಿರ್ಧಾರ ಮಾಡಿಲ್ಲ. ಶೇ.20-25ರಷ್ಟು ಟಿಕೆಟ್‌ ದರ ಹೆಚ್ಚಳ ಆದರೆ ಸಂಸ್ಥೆಗೆ ಕೊಂಚ ಅನುಕೂಲವಾಗುತ್ತದೆ ಎಂಬುದು ಅಧಿಕಾರಿ ವರ್ಗದ್ದು. ಆದರೆ ದರ ಪರಿಷ್ಕರಣೆ ನಿರ್ಧಾರ ಸರ್ಕಾರದ್ದಾಗಿದ್ದರಿಂದ ಎಷ್ಟು ಮಾಡುತ್ತದೆಯೋ ನೋಡಬೇಕು. ಸಾಧ್ಯವಾದರೆ ಸಾರಿಗೆ ಸಂಸ್ಥೆಯ ಬಸ್‌ಗಳಿಗೆ ಡೀಸೆಲ್‌ ತೆರಿಗೆಯಿಂದ ಮುಕ್ತಿ ನೀಡಿ ಸಬ್ಸಿಡಿ ನೀಡಿದರೆ ಇನ್ನೂ ಉತ್ತಮ. ಈ ನಿಟ್ಟಿನಲ್ಲಿ ಸರ್ಕಾರ ಯೋಚಿಸಬೇಕು ಎಂಬುದು ನೌಕರ ವರ್ಗದ ಅಂಬೋಣ.

ಪ್ರತ್ಯೇಕ ಪ್ರಾಧಿಕಾರವಾಗಲಿ:

ಸಾರಿಗೆ ಸಂಸ್ಥೆಯಲ್ಲಿ ಪ್ರತಿ ನಾಲ್ಕೈದು ವರ್ಷಕ್ಕೊಮ್ಮೆ ದರ ಪರಿಷ್ಕರಣೆ ಕುರಿತು ಚಿಂತನೆಯಾಗುತ್ತದೆ. ಜತೆಗೆ ಶೇ.20-25ರಷ್ಟು ದರ ಪರಿಷ್ಕರಣೆ ಆಗುವುದುಂಟು. ಆಗ ಸಾರ್ವಜನಿಕರಿಗೂ ಅದು ಹೊರೆಯೆನಿಸುತ್ತದೆ. ಇದರ ಬದಲು ವಿದ್ಯುತ್‌ ಪ್ರಸರಣ ಕಂಪನಿಗಳಿಗೆ (ಹೆಸ್ಕಾಂ, ಮೆಸ್ಕಾಂ ಸೇರಿದಂತೆ ವಿವಿಧ ಸಂಸ್ಥೆ ) ಮಾದರಿಯಲ್ಲಿ ಸ್ವತಂತ್ರ ಸಾರಿಗೆ ಸಂಸ್ಥೆ ದರ ಪರಿಷ್ಕರಣೆ ಪ್ರಾಧಿಕಾರ ರಚಿಸಬೇಕು. ಅದು ಪ್ರತಿವರ್ಷ ಶೇ.2-3ರಿಂದ 5ರ ವರೆಗೆ ದರ ಪರಿಷ್ಕರಣೆ ಮಾಡಬೇಕು. ಆಗ ಸಂಸ್ಥೆಗಾಗಲಿ ಸಾರ್ವಜನಿಕರಿಗಾಗಲಿ ಅಷ್ಟೊಂದು ಹೊರೆ ಎನಿಸುವುದಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಯೋಚಿಸಿ ಕ್ರಮ ಕೈಗೊಳ್ಳಬೇಕು ಎಂಬುದು ನೌಕರರ ಅಳಲು. ಈ ನಿಟ್ಟಿನಲ್ಲಿ ನೌಕರರ ಸಂಘದಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲು ಸಿದ್ಧತೆ ನಡೆಸಿದೆ ಎಂದು ಹೇಳಲಾಗಿದೆ.

ಒಟ್ಟಿನಲ್ಲಿ ಡೀಸೆಲ್‌ ತೆರಿಗೆ ಹೆಚ್ಚಳವಾಗಿರುವುದು ಮೊದಲೇ ನಷ್ಟದಲ್ಲಿರುವ ವಾಯವ್ಯ ಸಾರಿಗೆ ಸಂಸ್ಥೆಗೆ ಮತ್ತಷ್ಟು ಆರ್ಥಿಕ ಹೊರೆಯಾದಂತಾಗಿರುವುದಂತೂ ಸತ್ಯ. ಸರ್ಕಾರ ಹೊರೆ ಇಳಿಸಲು ಏನು ಮಾಡುತ್ತದೆ ಎಂಬುದನ್ನು ಕಾಯ್ದು ನೋಡಬೇಕಷ್ಟೇ!ವಾಯವ್ಯ ಸಾರಿಗೆ ಸಂಸ್ಥೆಯಲ್ಲಿ ನಿತ್ಯ 3 ಲಕ್ಷ ಲೀಟರ್‌ ಡೀಸೆಲ್‌ ಬಳಸುತ್ತೇವೆ. ಡೀಸೆಲ್‌ ತೆರಿಗೆ ಹೆಚ್ಚಳವಾಗಿದ್ದರಿಂದ ತಿಂಗಳಿಗೆ ₹ 2.70 ಕೋಟಿಗೂ ಅಧಿಕ ಆರ್ಥಿಕ ಹೊರೆ ಹೆಚ್ಚಾಗಿದೆ. ದರ ಪರಿಷ್ಕರಣೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ದರ ಪರಿಷ್ಕರಣೆ ಬಗ್ಗೆ ಸರ್ಕಾರವೇ ನಿರ್ಧಾರ ಕೈಗೊಳ್ಳುತ್ತದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಎಂ. ಪ್ರಿಯಾಂಗಾ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪೌರಕಾರ್ಮಿಕರ ಉಪಹಾರ ಭತ್ಯೆ ₹70ಕ್ಕೆ ಏರಿಕೆ: ಸಿಎಂ
ಬಿಜೆಪಿ, ಮೋದಿಗೆ ಬೈಯುತ್ತಿರುವೆ, ಬಂಧಿಸಲು ಧಮ್ ಬೇಕು : ಪ್ರಕಾಶ್‌