ಸ್ವಯಂಕೃತ ಅಪರಾಧದಿಂದ ಬದುಕಿನಲ್ಲಿ ಸಂಕಷ್ಟ

KannadaprabhaNewsNetwork | Published : Dec 25, 2023 1:30 AM

ಸಾರಾಂಶ

ಕಳೆದ ೮-೧೦ ವರ್ಷಗಳಿಂದ ಸೃಷ್ಟಿ ನಮಗೆ ಸಾಥ್ ನೀಡುತ್ತಿಲ್ಲ. ಕಾಲಕಾಲಕ್ಕೆ ಮಳೆಯಾಗದೇ ರೈತನ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಸ್ವಯಂಕೃತ ಅಪರಾಧಕ್ಕೆ ನಾವಿಂದು ಬೆಲೆ ತೆರುತ್ತಿದ್ದೇವೆ. ಇನ್ನಾದರೂ ನಾವೆಲ್ಲ ಎಚ್ಚೆತ್ತು ಜಾಗೃತರಾಗದಿದ್ದರೆ ಅಪಾಯ ಮೈ ಮೇಲೆ ಎಳೆದುಕೊಳ್ಳಬೇಕಾಗುತ್ತದೆ ಎಂದು ಶಾಸಕ ಶ್ರೀನಿವಾಸ ಮಾನೆ ಆತಂಕ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಹಾನಗಲ್ಲ

ಕಳೆದ ೮-೧೦ ವರ್ಷಗಳಿಂದ ಸೃಷ್ಟಿ ನಮಗೆ ಸಾಥ್ ನೀಡುತ್ತಿಲ್ಲ. ಕಾಲಕಾಲಕ್ಕೆ ಮಳೆಯಾಗದೇ ರೈತನ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಸ್ವಯಂಕೃತ ಅಪರಾಧಕ್ಕೆ ನಾವಿಂದು ಬೆಲೆ ತೆರುತ್ತಿದ್ದೇವೆ. ಇನ್ನಾದರೂ ನಾವೆಲ್ಲ ಎಚ್ಚೆತ್ತು ಜಾಗೃತರಾಗದಿದ್ದರೆ ಅಪಾಯ ಮೈ ಮೇಲೆ ಎಳೆದುಕೊಳ್ಳಬೇಕಾಗುತ್ತದೆ ಎಂದು ಶಾಸಕ ಶ್ರೀನಿವಾಸ ಮಾನೆ ಆತಂಕ ವ್ಯಕ್ತಪಡಿಸಿದರು.

ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಕೃಷಿ ಇಲಾಖೆ, ಆತ್ಮ ಘಟಕ ಹಾಗೂ ಕೃಷಿಕ ಸಮಾಜದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ರೈತ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಬಿಸಿಲಿನ ತಾಪ ಹೆಚ್ಚುತ್ತಿದೆ. ಚಳಿಗಾಲದ ಅವಧಿಯೂ ಕಡಿಮೆಯಾಗುತ್ತಿದ್ದು, ಪ್ರಕೃತಿಯಲ್ಲಿ ಕಂಡು ಬರುತ್ತಿರುವ ಬದಲಾವಣೆಗಳಿಂದ ರೈತ ಸಮೂಹ ತೀವ್ರ ಆತಂಕಕ್ಕೀಡಾಗುವಂತಾಗಿದೆ. ಇಂಥ ಸಂದರ್ಭದಲ್ಲಿ ಕೆರೆ-ಕಟ್ಟೆ, ಕಾಲುವೆಗಳ ಒತ್ತುವರಿ, ಗಿಡಮರಗಳ ನಾಶದಿಂದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತಿದ್ದು, ಭವಿಷ್ಯಕ್ಕಾಗಿ ಈಗಲೇ ಎಚ್ಚರಗೊಳ್ಳಬೇಕಿದೆ. ಸೌದಿಯಂಥ ರಾಷ್ಟ್ರ, ರಾಜಸ್ಥಾನದಂಥ ಮರಭೂಮಿಯಿಂದ ಕೂಡಿದ ರಾಜ್ಯದಲ್ಲಿ ಜನಜಾಗೃತಿಯ ಫಲವಾಗಿ ಉತ್ತಮ ಮಳೆ ಬೀಳುತ್ತಿದೆ. ನಾವೂ ಕೂಡ ಪರಿಸರದ ಸಂರಕ್ಷಣೆಗೆ ದೃಢಸಂಕಲ್ಪ ತೊಡಬೇಕಿದೆ. ಸರ್ಕಾರದ ಪರಿಹಾರದಿಂದ ಬದುಕುವುದು ಕಷ್ಟ. ರೈತರ ಶ್ರಮಕ್ಕೆ ಫಲ ದೊರಕಬೇಕಾದರೆ, ಸಾಲದ ಹೊರೆಯಿಂದ ಹೊರಬರಬೇಕಾದರೆ ಅರಣ್ಯ ಸಂಪತ್ತನ್ನು ಉಳಿಸಿ, ನೀರಿನ ಅಪವ್ಯಯ ತಡೆಗಟ್ಟಿ, ಅಂತರ್ಜಲ ಮರುಪೂರಣಗೊಳಿಸಿ ಭವಿಷ್ಯವನ್ನು ಸುಂದರಗೊಳಿಸಿಕೊಳ್ಳಬೇಕಿದೆ ಎಂದರು.

ನಿವೃತ್ತ ಜಂಟಿ ಕೃಷಿ ನಿರ್ದೇಶಕ ಆರ್.ಜಿ. ಗೊಲ್ಲರ ಮಾತನಾಡಿ, ನಿತ್ಯವೂ ಕೃಷಿಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾಣುತ್ತಿದ್ದೇವೆ. ಹೊಸ ಪದ್ಧತಿ, ವಿಧಾನಗಳ ಮೂಲಕ ಸಾಧನೆ ತೋರುತ್ತಿರುವ ಸಾಕಷ್ಟು ಸಂಖ್ಯೆಯ ರೈತರು ನಮ್ಮ ನಡುವೆ ಇದ್ದಾರೆ. ಪ್ರಮುಖವಾಗಿ ಕಡಿಮೆ ನಿರ್ವಹಣೆ ವೆಚ್ಚದಲ್ಲಿ ಹೆಚ್ಚು ಇಳುವರಿ, ಆದಾಯ ಪಡೆದುಕೊಳ್ಳುವ ವಿಧಾನಗಳನ್ನು ರೈತರು ಅರಿಯಬೇಕಿದೆ. ಜಾಣತನದಿಂದ ಕೃಷಿಯಲ್ಲಿ ತೊಡಗಿ ಸಾಧನೆ ತೋರಬೇಕಿದೆ ಎಂದರು.

ಸಮಾರಂಭದಲ್ಲಿ ಶಾಸಕ ಶ್ರೀನಿವಾಸ ಮಾನೆ ಜಲಾನಯನ ಯೋಜನೆಯಡಿ ಕೊಪ್ಪರಸಿಕೊಪ್ಪ ಮತ್ತು ಹಿರೇಕಣಗಿ ಗ್ರಾಪಂ ವ್ಯಾಪ್ತಿಯ ೩೫ ಸ್ವಸಹಾಯ ಸಂಘಗಳಿಗೆ ತಲಾ ₹೫೦ ಸಾವಿರ ಸುತ್ತುನಿಧಿ ವಿತರಿಸಿದರು. ಶ್ರೇಷ್ಠ ಕೃಷಿಕರಾದ ಸಂತೋಷ ಆರೇರ, ನಾಗರಾಜ ಹಿತ್ತಲದ, ಶ್ರೀಕಾಂತಗೌಡ ಹೊಸಗೌಡ್ರ, ರವಿ ಗೊಂದಿ, ಸೋಮಣ್ಣ ದೊಡ್ಡಕುರುಬರ ಮತ್ತು ನಾಗವೇಣಿ ಗೊಲ್ಲರ ಅವರನ್ನು ಸನ್ಮಾನಿಸಲಾಯಿತು.

ಸಹಾಯಕ ಕೃಷಿ ನಿರ್ದೇಶಕ ಮೋಹನಕುಮಾರ ಕೆ., ರೈತ ಸಂಘಟನೆಗಳ ಪ್ರಮುಖರಾದ ಮರಿಗೌಡ ಪಾಟೀಲ, ರುದ್ರಪ್ಪ ಬಳಿಗಾರ, ಎಂ.ಎಸ್. ಪಾಟೀಲ, ಬಸಣ್ಣ ಎಲಿ, ಗಾಯಿತ್ರಿ ಕೊಲ್ಲಾಪೂರ, ಎಪಿಎಂಸಿ ಕಾರ್ಯದರ್ಶಿ ಎ.ಪಿ. ಸುಗಂಧಿ, ಕೃಷಿ ಅಧಿಕಾರಿಗಳಾದ ಸಂಗಮೇಶ ಹಕ್ಕಲಪ್ಪನವರ, ಸಂತೋಷ, ಶೌಕತ್ ಅಲಿ ಉಪಸ್ಥಿತರಿದ್ದರು.

Share this article