ಕನ್ನಡಪ್ರಭ ವಾರ್ತೆ ಮಂಗಳೂರು
ಡಿಜಿಟಲ್ ಸಾಕ್ಷರತೆಯ ಇಂದಿನ ದಿನಗಳಲ್ಲಿ ಕೃತಕಬುದ್ಧಿಮತ್ತೆ(ಎಐ) ಸವಾಲಾಗಿದ್ದು, ಸಾರ್ವಜನಿಕ ಸಂಪರ್ಕದಲ್ಲಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇವುಗಳನ್ನು ಮರು ವ್ಯಾಖ್ಯಾನಿಸಬೇಕಾದ ಅಗತ್ಯವಿದೆ ಎಂದು ಭಾರತದ ನಾಲ್ವರು ಮಾಜಿ ಪ್ರಧಾನ ಮಂತ್ರಿಗಳ ವಾರ್ತಾ ಸಲಹೆಗಾರರಾಗಿದ್ದ ನಿವೃತ್ತ ಐಎಎಸ್ ಅಧಿಕಾರಿ ಎಸ್.ನರೇಂದ್ರ ಅಭಿಪ್ರಾಯಪಟ್ಟಿದ್ದಾರೆ.ಅಖಿಲ ಭಾರತ ಸಾರ್ವಜನಿಕ ಸಂಪರ್ಕ ಮಂಡಳಿ(ಪಿಆರ್‌ಸಿಐ) ಮಂಗಳೂರಲ್ಲಿ ಆಯೋಜಿಸಿದ ಎರಡು ದಿನಗಳ 18ನೇ ವಿಶ್ವ ಸಂಪರ್ಕ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಶುಕ್ರವಾರ ಅವರು ದಿಕ್ಸೂಚಿ ಭಾಷಣ ಮಾಡಿದರು.
ಕೃತಕಬುದ್ಧಿಮತ್ತೆ ಹಾಗೂ ಯಾಂತ್ರಿಕತೆಯ ಈ ಯುಗದಲ್ಲಿ ಎಲ್ಲವೂ ಸ್ವಯಂಚಾಲಿತವಾಗಿ ನಡೆಯುತ್ತದೆ ಎಂಬ ಭಾವನೆ ಬಂದುಬಿಟ್ಟಿದೆ. ಇದರಿಂದಾಗಿ ಮೂಲ ಸತ್ವಗಳು ಹೊರಟುಹೋಗುತ್ತಿವೆ. ಸಂಪರ್ಕ ಸಾಧನಗಳಲ್ಲಿ ಮೊಬೈಲ್ ಫೋನ್‌ಗಳ ಬಳಕೆ ಎಂಬುದು ಒಂದು ಪಾಕೆಟ್ ಬಿಸಿನೆಸ್ ಎಂಬಂತಾಗಿದೆ. ತಾಂತ್ರಿಕತೆಯನ್ನು ಬದಲಾಯಿಸುವಲ್ಲಿ ಡಿಜಿಕಲ್ಚರ್ ವ್ಯವಸ್ಥೆ ಮಹತ್ತರ ಪಾತ್ರ ವಹಿಸುತ್ತಿದೆ. ಅಲ್ಲದೆ ಸಂಪ್ರದಾಯಕತೆ, ಸಂಸ್ಕೃತಿಯ ಬದಲಾವಣೆಗೂ ಡಿಜಿಟಲ್ ತಾಂತ್ರಿಕತೆ ಕಾರಣವಾಗಿದೆ. ಹಿಂದೆ 16 ಸಾವಿರ ಪದ ಮಾತನಾಡುತ್ತಿದ್ದ ಮಗು ಈಗ ಕೇವಲ 5 ಸಾವಿರ ಪದ ಮಾತನಾಡುತ್ತಿದೆ. ಅಷ್ಟರ ಮಟ್ಟಿಗೆ ಡಿಜಿಟಲ್ ಮಾಧ್ಯಮ ಜನಜೀವನದಲ್ಲಿ ಹಾಸುಹೊಕ್ಕಾಗಿದೆ ಎಂದರು.ನಿವೃತ್ತ ಐಎಎಸ್ ಅಧಿಕಾರಿ ಚಕ್ರವರ್ತಿ ಮೋಹನ್ ಅವರು ಸಂಪರ್ಕ ಹಾಗೂ ಮರು ಸಂಪರ್ಕ ಸಾಧ್ಯತೆಗಳ ಬಗ್ಗೆ ಮಾತನಾಡಿದರು.
ಪಿಆರ್‌ಸಿಐ ರಾಷ್ಟ್ರೀಯ ಅಧ್ಯಕ್ಷೆ ಗೀತಾ ಶಂಕರ್ ಅಧ್ಯಕ್ಷತೆ ವಹಿಸಿದ್ದರು.ಈ ಸಂದರ್ಭ ವಿವಿಧ ರಂಗಗಳ ಸಾಧಕರಾದ ವಿಜಯ ಕುಮಾರ್ ಕೊಡಿಯಾಲಬೈಲ್, ಡಾ.ದೇವದಾಸ್ ಕಾಪಿಕಾಡ್, ಶಿವಧ್ವಜ್, ರಮೇಶ್ಚಂದ್ರ, ಬಾಲಸುಬ್ರಹ್ಮಣ್ಯ ಮತ್ತಿತರರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿವಿಧ ಮ್ಯಾಗಝಿನ್‌ಗಳನ್ನು ಅನಾವರಣಗೊಳಿಸಲಾಯಿತು.
ಮಹಾನಗರ ಪಾಲಿಕೆ ಮೇಯರ್ ಮನೋಜ್ ಕುಮಾರ್, ಎಡಿ ಫ್ಯಾಕ್ಟರೀಸ್ ಎಂಡಿ ಮದನ್ ಬೇಲ್, ಚೆನ್ನೈನ ಸೆಂಟರ್ ಫಾರ್ ಎಐ ಲಿಬಾ ಅಧ್ಯಕ್ಷ ಪ್ರೊ.ಡಾ.ಎಂ.ಜೆ.ಕ್ಸೇವಿಯರ್, ಎಮಿರೇಟ್ಸ್ ಅಧ್ಯಕ್ಷ ಎಂ.ಬಿ.ಜಯರಾಮ್, ಜಿಸಿ ಅಧ್ಯಕ್ಷ ಶ್ರೀನಿವಾಸ ಮೂರ್ತಿ, ವೈಸಿಸಿ ಮುಖ್ಯಸ್ಥೆ ಚಿನ್ಮಯಿ ಪ್ರವೀಣ್, ಸಮ್ಮೇಳನ ಸಮಿತಿ ಅಧ್ಯಕ್ಷ ಡಾ.ರಾಘವೇಂದ್ರ ಹೊಳ್ಳ, ರಾಜ್ಯ ಅಧ್ಯಕ್ಷ ಪಶುಪತಿ ಶರ್ಮಾ, ಪ್ರಧಾನ ಕಾರ್ಯದರ್ಶಿ ಸುರೇಂದ್ರನ್ ಉನ್ನಿ, ಬೆಂಗಳೂರು ಚಾಪ್ಟರ್ ಅಧ್ಯಕ್ಷ ಎಚ್.ಎಲ್.ರಾಮಕೃಷ್ಣ, ಪ್ರೊ.ರಾಧಾಕೃಷ್ಣ ಮತ್ತಿತರರಿದ್ದರು. ನಿಖಿಲ್ ನಿರೂಪಿಸಿದರು.