ಸೊರಬ: ರೈತರಿಗೆ ಮತ್ತು ಜನ ಸಾಮಾನ್ಯರಿಗೆ ಅನುಕೂಲವಾಗುವಂತೆ ಸರ್ಕಾರ ಆಡಳಿತ ಸರಳೀಕರಣ ಮಾಡುವ ಮೂಲಕ ಕಂದಾಯ ದಾಖಲೆಗಳನ್ನು ಡಿಜಿಟಲೀಕರಣ ಮಾಡಿದ್ದು, ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.
ಸೋಮವಾರ ಪಟ್ಟಣದ ತಾಲೂಕು ಕಚೇರಿಯಲ್ಲಿ ಭೂ ಸುರಕ್ಷಾ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.ಭೂ ಸುರಕ್ಷಾ ಯೋಜನೆಯಡಿ ದಾಖಲೆಗಳನ್ನು ಡಿಜಿಟಲೀಕರಣ ಮಾಡಿರುವುದರಿಂದ ದಾಖಲೆಗಳು ಶಿಥಿಲವಾಗುವುದನ್ನು ತಡೆಗಟ್ಟಬಹುದಾಗಿದೆ. ನಕಲಿ ದಾಖಲೆ ಸೃಷ್ಟಿಸುವುದನ್ನು ತಡೆಯಲು ಸಾಧ್ಯವಾಗುತ್ತದೆ. ಸರ್ಕಾರ ಈ ನಿಟ್ಟಿನಲ್ಲಿ ಅಡಳಿತ ಸರಳೀಕರಣ ಮಾಡುವ ಮೂಲಕ ಸಾರ್ವಜನಿಕರಿಗೆ ಮತ್ತು ರೈತರಿಗೆ ಅನುಕೂಲ ಕಲ್ಪಿಸಿಕೊಡಲಾಗಿದೆ. ಆದ್ದರಿಂದ ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಸೊರಬ ಕಚೇರಿಯಲ್ಲಿ ಸುಮಾರು 75 ಲಕ್ಷ ಹಳೆಯ ದಾಖಲೆಗಳನ್ನು ಡಿಜಿಟಲೀಕರಣ ಮಾಡುವ ಕಾರ್ಯವು ಯಶಸ್ವಿಯಾಗಿ ರೈತರಿಗೆ ಮತ್ತು ಜನ ಸಾಮಾನ್ಯರಿಗೆ ಸುಲಭ ರೀತಿಯಲ್ಲಿ ದೊರೆಯುವಂತಾಗಬೇಕು ಎಂದರು.ಉಪ ವಿಭಾಗಾಧಿಕಾರಿ ಡಾ.ಯತೀಶ್ ಪ್ರಾಸ್ತಾವಿಕವಾಗಿ ಮಾತನಾಡಿ, ರೈತರು ಮತ್ತು ಸಾರ್ವಜನಿಕರು ತಮಗೆ ಬೇಕಾದ ಮಾಹಿತಿ ಪಡೆದುಕೊಳ್ಳಲು ಅನುಕೂಲವಾಗಲು ಸರ್ಕಾರವು ಭೂ ಸುರಕ್ಷಾ ಯೋಜನೆ ಜಾರಿಗೆ ತಂದಿದೆ.
ಹಳೆಯ ದುಸ್ಥಿತಿಯಲ್ಲಿರುವ ಭೂ ದಾಖಲೆಗಳನ್ನು ಶಾಶ್ವತ ಡಿಜಿಟಲೀಕರಣ ದಾಖಲೆಗಳಾಗಿ ಪರಿವರ್ತನೆ ಮತ್ತು ಹಳೆಯ ದಾಖಲೆಗಳ ಸಂರಕ್ಷಣೆ, ನೇರವಾಗಿ ಡಿಜಿಟಲ್ ಮಾಧ್ಯಮದಿಂದ ಭೂ ದಾಖಲೆಗಳನ್ನು ಪಡೆದುಕೊಳ್ಳಲು ಮತ್ತು ವಿಳಂಬವಾಗುತ್ತಿರುವುದನ್ನು ತಡೆಗಟ್ಟಿ ತ್ವರಿತ ಅಡಳಿತ ಸೇವೆ ಒದಗಿಸುವ ಯೋಜನೆಯಾಗಿದೆ ಎಂದು ತಿಳಿಸಿದರು.
ಐಎಎಸ್ ಪ್ರೋಬೆಷನರಿ ಅಧಿಕಾರಿ ದೃಷ್ಟಿ ಜೈಶ್ವಾಲ್, ತಹಸೀಲ್ದಾರ್ ಮಂಜುಳಾ ಹೆಗಡಾಳ್, ತಾಪಂ ಕಾರ್ಯನಿರ್ವಾಹಣಾಧಿಕಾರಿ ಡಾ.ಪ್ರದೀಪ್ ಕುಮಾರ್, ಕ್ಷೇತ್ರ ಶಿಕ್ಷಣಾಧೀಕಾರಿ ಆರ್.ಪುಷ್ಪಾ, ನಾಗರಾಜ್, ಶಿವಪ್ರಸಾದ್, ಮಂಜುನಾಥ್ ಎಸ್.ಓಟೂರು, ತಾಲೂಕು ಬಗರ್‌ಹುಕುಂ ಸಮಿತಿ ಅಧ್ಯಕ್ಷ ಎಂ.ಡಿ.ಶೇಖರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ.ಡಿ.ಬಿ, ಮುಖಂಡರಾದ ತಬಲಿ ಬಂಗಾರಪ್ಪ, ಹಿರಿಯಣ್ಣ ಕಲ್ಲಂಬಿ, ಸುರೇಶ್ ಹಾವಣ್ಣನವರ್, ಅತೀಕ್, ಫಯಾಜ್ ಅಹ್ಮದ್, ಬಸವರಾಜ್ ಸಾರೆಕೊಪ್ಪ, ಸಂಜೀವ್, ಪ್ರಮೋದ್, ಜಗದೀಶ್ ಕುಪ್ಪೆ ಮತ್ತಿತರರಿದ್ದರು.