ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ದ್ವಿತೀಯ ಪಿಯುಸಿ ಫಲಿತಾಂಶ ಮಂಗಳವಾರ ಪ್ರಕಟಗೊಂಡಿದ್ದು ಸಂತ ಮೇರಿ ಆಂಗ್ಲ ಮಾಧ್ಯಮ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಡಿಂಪಲ್ ತಮ್ಮಯ್ಯ ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಸುಂಟಿಕೊಪ್ಪಕ್ಕೆ ಕೀರ್ತೀ ತಂದಿದ್ದಾರೆ.ಕಳೆದ ಬಾರಿಯಂತೆ ಈ ಬಾರಿಯು ಸುಂಟಿಕೊಪ್ಪ ವ್ಯಾಪ್ತಿಯಲ್ಲಿನ ಸರ್ಕಾರಿ ಮತ್ತು ಖಾಸಗಿ ಪದವಿ ಪೂರ್ವ ಕಾಲೇಜುಗಳು ಉತ್ತಮ ಸಾಧನೆ ಮಾಡಿರುವುದು ಪೋಷಕರಲ್ಲಿ ಮತ್ತು ಕಾಲೇಜಿನ ಉಪನ್ಯಾಸಕರಲ್ಲಿ ಹರ್ಷ ಉಂಟು ಮಾಡಿದೆ.
ಸುಂಟಿಕೊಪ್ಪ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಇಲ್ಲಿನ ಸಂತ ಮೇರಿ ಆಂಗ್ಲ ಸಂಯುಕ್ತ ಪದವಿ ಪೂರ್ವ ಕಾಲೇಜಿಗೆ ಶೇ.95.74 ಫಲಿತಾಂಶ ಪಡೆದುಕೊಂಡಿದೆ.ಪರೀಕ್ಷೆಗೆ ಹಾಜರಾದ 47 ವಿದ್ಯಾರ್ಥಿಗಳ ಪೈಕಿ 7 ಮಂದಿ ಉನ್ನತ ಶ್ರೇಣಿ, 29 ಮಂದಿಗೆ ಪ್ರಥಮ ಶ್ರೇಣಿ, 6 ದ್ವಿತೀಯ ಶ್ರೇಣಿ ಹಾಗೂ ಸಾಮಾನ್ಯ ಶ್ರೇಣಿಯಲ್ಲಿ ಉತ್ತೀರ್ಣರಾದವರು 3 ಮಂದಿ ಆ ಪೈಕಿ ಡಿಂಪಲ್ ತಮ್ಮಯ್ಯ ಸಿ.ಎನ್. 591 ಅಂಕಗಳನ್ನು ಗಳಿಸಿ ಶೇ. 98.5 ಸಾಧನೆ ಮಾಡಿದ್ದಾರೆ, ಸೃಜನ ಡಿ.ಡಿ 587 ಅಂಕಗಳನ್ನು ಪಡೆದಿದ್ದು ಶೇ. 97.83 ಸಾಧನೆ ತೋರಿದ್ದಾರೆ. ಸಂಸ್ಥೆಯ ವ್ಯವಸ್ಥಾಪಕರಾದ ರೆ.ಫಾ. ವಿಜಯ್‌ಕುಮಾರ್ ಮತ್ತು ಕಾಲೇಜು ಪ್ರಾಂಶುಪಾಲರಾದ ಸೆಲ್ವರಾಜ್ ಅವರು ಮಕ್ಕಳ ಸಾಧನೆಯನ್ನು ಪ್ರಶಂಸಿದ್ದಾರೆ.
ಸುಂಟಿಕೊಪ್ಪ ಸರ್ಕಾರಿ ಪದವಿಪೂರ್ವ ಕಾಲೇಜಿನ 48 ವಿದ್ಯಾರ್ಥಿಗಳಲ್ಲಿ ಕಲಾ ವಿಭಾಗದಲ್ಲಿ ಶೇ. 87.5 ಸಾಧನೆ ವಾಣಿಜ್ಯ ವಿಭಾಗದಲ್ಲಿ ಶೇ. 81.48 ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ. 75 ಸಾಧನೆ ಮಾಡಿದ್ದಾರೆ. ಪ್ರಥಮ ದರ್ಜೆಯಲ್ಲಿ 32 ದ್ವಿತೀಯ ದರ್ಜೆಯಲ್ಲಿ 8 ಮತ್ತು ಸಾಮಾನ್ಯ ಶ್ರೇಣಿಯಲ್ಲಿ 6 ಮಂದಿ ಉತ್ತೀರ್ಣರಾಗಿದ್ದು ಕಾಲೇಜು ಒಟ್ಟಾರೆಯಾಗಿ ಶೇಕಡ ಶೇ. 81.35 ಸಾಧನೆಯನ್ನು ಮಾಡಿದೆ ಎಂದು ಕಾಲೇಜಿನ ಪ್ರಾಚಾರ್ಯ ಶ್ರೀಲತಾ ಮಾಹಿತಿ ನೀಡಿದ್ದಾರೆ.ಕಾಲೇಜಿನ ಅಭಿವೃದ್ಧಿ ಸಮಿತಿ, ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವೃಂದವು ಮಕ್ಕಳ ಸಾಧನೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.
ಮಾದಾಪುರ ಡಿ.ಚೆನ್ನಮ್ಮ ಪದವಿ ಪೂರ್ವಕಾಲೇಜು ಶೇ. 80.03 ಫಲಿತಾಂಶ ಪಡೆದಿದ್ದು ಅತ್ಯುನ್ನತ ಶ್ರೇಣಿಯಲ್ಲಿ 6 ಮಂದಿ ಉತ್ತೀರ್ಣರಾಗಿದ್ದಾರೆ. ಕಾಲೇಜಿನ 67 ವಿದ್ಯಾರ್ಥಿಗಳ ಪೈಕಿ 54 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 80.03 ಸಾಧನೆ ಮಾಡಿದೆ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಎ.ಕೆ.ಸರಸ್ವತಿ 554 ಅಂಕಗಳನ್ನು ಗಳಿಸುವ ಮೂಲಕ ಕಾಲೇಜಿಗೆ ಮೊದಲಿಗರಾಗಿದ್ದಾರೆ.ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಮಕ್ಕಳ ಸಾಧನೆಯನ್ನು ಶ್ಲಾಘಿಸಿದ್ದಾರೆ.
ಗರಗಂದೂರಿನಲ್ಲಿರುವ ಮೊರಾರ್ಜಿ ದೇಸಾಯಿ ಪದವಿಪೂರ್ವ ಕಾಲೇಜಿನ 78 ಮಕ್ಕಳು ಪರೀಕ್ಷೆಯನ್ನು ಎದುರಿಸಿದ್ದು, ಶೇ. 97.04 ಫಲಿತಾಂಶವನ್ನು ಪಡೆದಿದೆ. ಉನ್ನತ ಶ್ರೇಣಿಯಲ್ಲಿ 17 ಮಂದಿ 58 ಮಂದಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು ಓರ್ವ ವಿದ್ಯಾರ್ಥಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.ಮಕ್ಕಳ ಸಾಧನೆಯನ್ನು ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಅಭಿನಂದಿಸಿದ್ದಾರೆ.