ಕನ್ನಡಪ್ರಭ ವಾರ್ತೆ ಬೀದರ್
ಮರಾಠಾ ಸಮಾಜದ ಹಲವು ಸುತ್ತಿನ ಮಾತುಕತೆ ನಡೆಸಿದ ಬಳಿಕ ಡಾ.ದಿನಕರ ಮಾಧವರಾವ ಮೋರೆ ಅವರನ್ನು ಸರ್ವಾನುಮತದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಂತೆ ಸೂಚಿಸಲಾಗಿದೆ ಎಂದು ಮಾಜಿ ಜಿಪಂ ಅಧ್ಯಕ್ಷ ಹಾಗೂ ಮರಾಠಾ ಸಮುದಾಯದ ಮುಖಂಡರಾದ ಪದ್ಮಾಕರ ಪಾಟೀಲ ಹೇಳಿದರು.ಅವರು ಸೋಮವಾರ ಬೀದರ ಸ್ವಾಭಿಮಾನಿ ಆಘಾಡಿ ವತಿಯಿಂದ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಪಕ್ಷಗಳಾದ ಭಾರತೀಯ ಜನತಾ ಪಕ್ಷ ಹಾಗೂ ಕಾಂಗ್ರೆಸ್ ಪಕ್ಷಗಳು ಸದ್ಯಕ್ಕೆ ಅಷ್ಟೊಂದು ಜನಪ್ರಿಯತೆ ಹಾಗೂ ಜನರ ದೃಷ್ಟಿಯಲ್ಲಿ ವಿನಯತೆ ಹೊಂದಿಲ್ಲ. ಹೀಗಾಗಿ ನಾಮಪತ್ರ ಹಿಂಪಡೆಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ನಾವು ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದರಲ್ಲದೆ ಮರಾಠಾ ಸಮಾಜದ ವತಿಯಿಂದ ಒಟ್ಟು 4 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು.
ಲೋಕಸಭಾ ಚುನಾವಣೆಯ ಸ್ವತಂತ್ರ ಅಭ್ಯರ್ಥಿ ಡಾ. ದಿನಕರ ಮೋರೆ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಾಗೂ ಲೋಕಸಭಾ ಚುನಾವಣೆಯಲ್ಲ್ಲಿಮರಾಠಾ ಸಮುದಾಯಕ್ಕೆ ಟಿಕೆಟ್ ನೀಡುವಲ್ಲಿ ರಾಷ್ಟ್ರೀಯ ಪಕ್ಷಗಳು ಎಡವಿದ ಪ್ರಯುಕ್ತ ಸಮುದಾಯಕ್ಕೆ ಹಾಗೂ ಸಮುದಾಯದ ಜನರಿಗೆ ನ್ಯಾಯ ಒದಗಿಸಲು ಲೋಕಸಭಾ ಚುನಾವಣೆಗೆ ಬೀದರ್ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.ಪರಮೇಶ್ವರ ಕಿಶನರಾವ ಪಾಟೀಲ, ರಾಮರಾವ ರಾವಣಗಾಂವೆ, ನರೇಶ ಭೋಸ್ಲೆ ಹಾಗೂ ಡಾ.ದಿನಕರ ಮೋರೆ ಏ.19 ರಂದು ಸಲ್ಲಿಸಲಿದ್ದಾರೆ. ಕೊನೆಗೆ ಮೂವರು ನಾಮಪತ್ರ ವಾಪಸ್ ಪಡೆಯಲಿದ್ದು, ಡಾ.ದಿನಕರ ಮೋರೆ ಅಂತಿಮವಾಗಿ ಸ್ಪರ್ಧೆ ಮಾಡಲಿದ್ದಾರೆ. ನಾಮಪತ್ರ ಸಲ್ಲಿಸಿದ ಬಳಿಕವೇ ನಾನು ಭಾರತೀಯ ಜನತಾ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಲಿದ್ದೇನೆ. ನನ್ನ ಜೊತೆ ಸುಮಾರು 20 ರಿಂದ 25 ಜನ ಮುಖಂಡರು ರಾಜೀನಾಮೆ ಸಲ್ಲಿಸಲಿದ್ದು, ರಾಷ್ಟ್ರೀಯ ಪಕ್ಷಗಳ ಅಹಂಕಾರ ಮುರಿದು ಮರಾಠಾ ಸಮಾಜಕ್ಕೆ ನ್ಯಾಯ ಒದಗಿಸುವುದು ನಮ್ಮ ಮೂಲ ಧ್ಯೇಯವಾಗಿದೆ ಎಂದು ಪದ್ಮಾಕರ ಪಾಟೀಲ ತಿಳಿಸಿದರು.
ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವ ವಿಚಾರ ಮೊದಲಿನಿಂದಲೂ ಇತ್ತು. ಆದ್ದರಿಂದ ಪ್ರಯತ್ನ ಮಾಡುತ್ತಲೇ ಬಂದಿದ್ದೇನೆ. ಮರಾಠಾ ಸಮುದಾಯ ಹಾಗೂ ಎಲ್ಲಾ ಹಿತೈಷಿಗಳ ಜೊತೆ ಹಲವು ಸುತ್ತಿನ ಮಾತುಕತೆ ನಡೆಸಿ, ಹಿರಿಯರ ಹಾಗೂ ಗಣ್ಯರ ಪ್ರೇರಣೆಯಿಂದ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.ಏ.19ರಂದು ನಾಮಪತ್ರ ಸಲ್ಲಿಸಲು ನಿರ್ಧರಿಸಲಾಗಿದೆ. ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಅರ್ಹತೆ ಹೊಂದಿದ್ದೇನೆ ಎಂಬುದನ್ನು ಸಾಬೀತು ಮಾಡಿ ತೋರಿಸುತ್ತೇನೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಡಾ. ಬಾಲಾಜಿ ಸಾವಳೆಕರ್, ಜನಾರ್ಧನ ಬಿರಾದಾರ, ರಾಮರಾವ ರಾವಣಗಾಂವೆ, ರಾವುಸಾಹೇಬ ಬಿರಾದಾರ, ಯುವರಾಜ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.