ಜನಾಂಗ, ಜಾತಿ, ಸಮುದಾಯ ಹಾಗೂ ಅಂತಸ್ತು ಭೇದವಿಲ್ಲದೆ ದೇಶದ ಎಲ್ಲಾ ನಾಗರಿಕರಿಗೂ ಸಂವಿಧಾನದ ಮೂಲಕ ಮತದಾನದ ಹಕ್ಕು ಕಲ್ಪಿಸಿದ ಮಹಾತ್ಮ ಡಾ. ಬಿ.ಆರ್. ಅಂಬೇಡ್ಕರ್ ಎಂದು ಬೆಂಗಳೂರು ಹೈಕೋರ್ಟ್ ಹಿರಿಯ ನ್ಯಾಯವಾದಿ, ಪ್ರೊ. ಹರಿರಾಮ ಹೇಳಿದರು.
ಕನ್ನಡಪ್ರಭ ವಾರ್ತೆ ಶಹಾಪುರ
ಜನಾಂಗ, ಜಾತಿ, ಸಮುದಾಯ ಹಾಗೂ ಅಂತಸ್ತು ಭೇದವಿಲ್ಲದೆ ದೇಶದ ಎಲ್ಲಾ ನಾಗರಿಕರಿಗೂ ಸಂವಿಧಾನದ ಮೂಲಕ ಮತದಾನದ ಹಕ್ಕು ಕಲ್ಪಿಸಿದ ಮಹಾತ್ಮ ಡಾ. ಬಿ.ಆರ್. ಅಂಬೇಡ್ಕರ್ ಎಂದು ಬೆಂಗಳೂರು ಹೈಕೋರ್ಟ್ ಹಿರಿಯ ನ್ಯಾಯವಾದಿ, ಪ್ರೊ. ಹರಿರಾಮ ಹೇಳಿದರು.
ನಗರದ ಸಿ.ಪಿ.ಎಸ್. ಶಾಲಾ ಮೈದಾನದಲ್ಲಿ ಡಾ. ಬಿ.ಆರ್. ಅಂಬೇಡ್ಕರ ಅವರ 133ನೇ ಜಯಂತ್ಯುತ್ಸವ ಸಮಿತಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬ ಭಾರತೀಯನಿಗೂ ಮತ ಚಲಾಯಿಸುವ ಹಕ್ಕನ್ನು ದೊರಕಿಸಿಕೊಟ್ಟಿದ್ದು, ಡಾ. ಬಿ.ಆರ್. ಅಂಬೇಡ್ಕರ್. ಆದರೆ ಅದನ್ನು ದುರ್ಬಳಕೆ ಮಾಡಿಕೊಂಡವರೇ ಹೆಚ್ಚಾಗಿದ್ದಾರೆ ಎಂದು ವಿಷಾದಿಸಿದರು.
ನಾವು ಹಣ ಹೆಂಡಕ್ಕಾಗಿ ನಮ್ಮ ಪವಿತ್ರ ಮತವನ್ನು ಮಾರಿಕೊಂಡು ಬೀದಿಗೆ ಬಂದರೂ ನಮಗೆ ಬುದ್ಧಿ ಬಂದಿಲ್ಲ. ಎಲ್ಲಿವರೆಗೂ ನಮಗೆ ಬುದ್ಧಿ ಬರುವುದಿಲ್ಲವೋ ಅಲ್ಲಿಯವರೆಗೆ ನಾವು ಬೇರೆಯವರ ಬಳಿ ಕೈ ಚಾಚುವ ಪರಸ್ಥಿತಿ ತಪ್ಪುವುದಿಲ್ಲ ಎಂದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರಗತಿಪರ ಚಿಂತಕರಾದ ಮಲ್ಲಿಕಾರ್ಜುನ ಪೂಜಾರಿ, ಸಮಾಜದಲ್ಲಿನ ಅಸಮಾನತೆಗಳನ್ನು ಹೋಗಲಾಡಿಸಿ ಸಮಾನತೆ ಸಮಾಜದ ನಿರ್ಮಾಣಕ್ಕೆ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಅಂಬೇಡ್ಕರ್ ದೂರದೃಷ್ಟಿಯ ಮಹಾನಾಯಕರಾಗಿದ್ದಾರೆ. ಅಂಬೇಡ್ಕರ್ ಅವರ ವಿಚಾರಗಳು ಅನೇಕ ಶೋಷಣೆಗಳಿಂದ ವಿಮೋಚನೆಯತ್ತ ಕೊಂಡೊಯ್ಯುತ್ತವೆ ಎಂದು ತಿಳಿಸಿದರು.
ಡಾ. ಬಿ.ಆರ್. ಅಂಬೇಡ್ಕರ್ 133ನೇ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಹೊನ್ನಪ್ಪ ಗಂಗನಾಳ ಅಧ್ಯಕ್ಷತೆ ವಹಿಸಿ,ಈ ದೇಶದ ಪ್ರತಿಯೊಬ್ಬ ನಾಗರಿಕ ನೆಮ್ಮದಿ ಉಸಿರಾಡುತ್ತಿರುವುದು ಸಂವಿಧಾನದಿಂದ. ವಿಶ್ವಮಾನ್ಯ ಡಾ. ಬಾಬಾ ಸಾಹೇಬ್ ಅವರನ್ನು ಕೆಲವರು ಒಪ್ಪಿಕೊಳ್ಳದೆ ಇರುವುದು ದುರಂತ ಎಂದರು.
ಸಾರಿಪುತ್ರ ಬುದ್ಧವಿಹಾರ ಧಮ್ಮಗಿರಿಯ ಪೂಜ್ಯ ಭಂತೆ ಆದಿತ್ಯ ಪೂಜ್ಯರು ಸಾನಿಧ್ಯ ವಹಿಸಿದ್ದರು. ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ರಾಯಪ್ಪ ಸಾಲಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.