ದಿಂಗಾಲೇಶ್ವರ ಶ್ರೀಗಳ ಹೇಳಿಕೆ ನನಗೆ ಆಶೀರ್ವಾದ

KannadaprabhaNewsNetwork | Published : Mar 30, 2024 12:49 AM

ಸಾರಾಂಶ

ದಿಂಗಾಲೇಶ್ವರ ಸ್ವಾಮೀಜಿಗಳ ಹೇಳಿಕೆ ಕುರಿತು ನಾನು ಪ್ರತಿಕ್ರಿಯೆ ನೀಡಲ್ಲ. ಅವರ ಎಲ್ಲ ಹೇಳಿಕೆಗಳು ನನಗೆ ಆಶೀರ್ವಾದವಿದ್ದಂತೆ. ಅವರ ಆಶೀರ್ವಾದದಿಂದ ನಾನು ಚುನಾವಣೆಯಲ್ಲಿ ಗೆಲ್ಲುವೆ. ಇದಕ್ಕಿಂತ ಹೆಚ್ಚಿಗೆ ನಾನು ಏನೂ ಹೇಳಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ದಿಂಗಾಲೇಶ್ವರ ಸ್ವಾಮೀಜಿಗಳ ಹೇಳಿಕೆ ಕುರಿತು ನಾನು ಪ್ರತಿಕ್ರಿಯೆ ನೀಡಲ್ಲ. ಅವರ ಎಲ್ಲ ಹೇಳಿಕೆಗಳು ನನಗೆ ಆಶೀರ್ವಾದವಿದ್ದಂತೆ. ಅವರ ಆಶೀರ್ವಾದದಿಂದ ನಾನು ಚುನಾವಣೆಯಲ್ಲಿ ಗೆಲ್ಲುವೆ. ಇದಕ್ಕಿಂತ ಹೆಚ್ಚಿಗೆ ನಾನು ಏನೂ ಹೇಳಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ವಿಜಯಪುರ ತಾಲೂಕಿನ ತೊರವಿ ಗ್ರಾಮದಲ್ಲಿರುವ ತಮ್ಮ ಮನೆ ದೇವರಾದ ಶ್ರೀ ನರಸಿಂಹ ದೇವರ ದರ್ಶನ‌ಕ್ಕೆ ಬಂದಿದ್ದ ವೇಳೆ ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಪ್ರಹ್ಲಾದ ಜೋಶಿ ಬದಲಾಗಿ ಬೇರೆಯವರಿಗೆ ಟಿಕೆಟ್ ನೀಡಬೇಕೆಂಬ ದಿಂಗಾಲೇಶ್ವರ ಸ್ವಾಮೀಜಿ ಒತ್ತಾಯ ವಿಚಾರವಾಗಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.

ದೇಶದ ಹಿತದೃಷ್ಟಿಯಿಂದ ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗಬೇಕು. ಅವರ ತಂಡದಿಂದ ಅವರಿಗೆ ಬಹುಮತ ಸಿಗಬೇಕು. ಮೋದಿ ಅವರು ಪ್ರಧಾನಿಯಾಗಿ ಆಯ್ಕೆಯಾಗಲು ಹೆಚ್ಚಿನ ಎಂಪಿಗಳು ಬೇಕು. ಆ ಎಂಪಿಗಳ ಪೈಕಿ ನಾನು ಒಬ್ಬ ಇರಬೇಕು. ಎನ್‌ಡಿಎ ಮೈತ್ರಿಕೂಟದಿಂದ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಶಕ್ತಿಮೀರಿ ಪ್ರಯತ್ನ ಮಾಡುತ್ತೇವೆ. ಮೋದಿ ಅವರ ಹತ್ತು ವರ್ಷದ ಆಡಳಿತದಲ್ಲಿ ದೇಶದಲ್ಲಾದ ಬದಲಾವಣೆಯನ್ನು ಜನ ಗಮನಿಸಿದ್ದಾರೆ. ದುರ್ಬಲ ಆರ್ಥಿಕತೆ ಹೊಂದಿದ್ದ ಭಾರತ ಜಗತ್ತಿನ ಐದನೇ ಬಲಿಷ್ಠ ಆರ್ಥಿಕ ಶಕ್ತಿಯ ದೇಶವಾಗಿದೆ ಎಂದರು.

ಮೂರನೇ ಬಾರಿ ಅಧಿಕಾರಕ್ಕೆ ಬಂದರೆ ಭಾರತವನ್ನು ಜಗತ್ತಿನ ಮೂರನೇ ಆರ್ಥಿಕ ಬಲಿಷ್ಠ ರಾಷ್ಟ್ರವನ್ನಾಗಿಸುವೆ ಎಂದು ಮೋದಿ ಗ್ಯಾರಂಟಿ ಕೊಟ್ಟಿದ್ದಾರೆ. ಮೋದಿ ಅವರ ಅಧಿಕಾರದಲ್ಲಿ ಉಗ್ರವಾದ ಬಹಳ ಕನ್ಸಿಡರಿ ಆಗಿ ಕಡಿಮೆಯಾಗಿದೆ. ಕಾಶ್ಮೀರದಲ್ಲಿ ಒಳ್ಳೆಯ ವಾತಾವರಣ ನಿರ್ಮಾಣವಾಗಿದೆ. ವಿಕಸಿತ ಭಾರತವಾಗಲು ಮೂರನೇ ಬಾರಿಗೆ ಮೋದಿ ಪ್ರಧಾನಿಯಾಗಬೇಕು. ಹೀಗಾಗಿ ರಾಜ್ಯದ 28ಕ್ಕೆ 28 ಸ್ಥಾನಗಳನ್ನು ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ರೌಡಿ ಎಂದು ಮಾತನಾಡಿರುವ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅವರ ಭಾಷೆಯನ್ನೇ ನೋಡಿದರೆ ನಿಮಗೆ ಅರ್ಥವಾಗುತ್ತದೆ. ಬಾಯಿಗೆ ಬಂದಂತೆ ಮನಬಂದಂತೆ ಏಕವಚನದಲ್ಲಿ ಟೀಕೆ ಮಾಡುತ್ತಾರೆ. ಇವರು ಹತಾಶರಾಗಿ ಸರ್ಟಿಫಿಕೇಟ್ ಕೊಡೋ ಮಟ್ಟಕ್ಕೆ ಹೋಗಿದ್ದಾರೆ. ತಮ್ಮ ಎಲ್ಲಾ ದೋಷಗಳಿಗೂ ಸಿದ್ದರಾಮಯ್ಯ ಕೇಂದ್ರವನ್ನು ದೂಷಿಸುವ ಮೂಲಕ ಕಾಲಹರಣ ಮಾಡುತ್ತಾರೆ. ಇದೀಗ ಅವರ ಮಗ ಸರ್ಟಿಫಿಕೇಟ್ ಕೊಡುವ ಹಂತಕ್ಕೆ ಹೋಗಿದ್ದಾರೆ. ಇದಕ್ಕೆ ಜನರೇ ಉತ್ತರ ನೀಡುತ್ತಾರೆ. ಅಮಿತ್ ಶಾ ಹಾಗೂ ಮೋದಿ ಅವರ ನೇತೃತ್ವದಲ್ಲಿ ನಾವು ಎರಡು ಬಾರಿ ಚುನಾವಣೆಗಳನ್ನು ಗೆದ್ದಿದ್ದೇವೆ. ಕರ್ನಾಟಕದಲ್ಲಿ ಚುನಾವಣೆ ಗೆದ್ದಿದ್ದೇವೆ ಎಂಬ ದುರಹಂಕಾರದಲ್ಲಿ ಮೆರೆಯಬೇಡಿ ಎಂದು ಎಚ್ಚರಿಕೆ ನೀಡಿದರು.

ಇಡೀ ದೇಶದಲ್ಲಿ ಮೂರು ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಸರ್ಕಾರವಿದ್ದು, ಹಿಮಾಚಲ ಪ್ರದೇಶದಲ್ಲಿ ನಿಮ್ಮ ಸರ್ಕಾರ ಅಲುಗಾಡುತ್ತಿದೆ. ಕಾಂಗ್ರೆಸ್‌ನವರು ಸೋಲುತ್ತಾರೆಂಬ ಹತಾಶೆಯಿಂದ ಹೀಗೆ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯನವರ ಕ್ಷೇತ್ರದ ಲೋಕಸಭಾ ಅಭ್ಯರ್ಥಿ ಲಕ್ಷ್ಮಣಗೆ ಡಿಪಾಸಿಟ್ ಬಂದರೆ ಸಾಕು ಎನ್ನುವಂತಾಗಿದೆ. ಹತಾಶೆಯಿಂದ ಕೆಟ್ಟ ಭಾಷೆ ಬಳಕೆ ಮಾಡುತ್ತಿದ್ದಾರೆ ಎಂದು ಅವರು ಕುಟುಕಿದರು.

ಬಂಜಾರ ಮತಗಳು ನನಗೆ ಬೇಡ ಎಂದು ಬಿಜೆಪಿ ಅಭ್ಯರ್ಥಿ ರಮೇಶ್ ಜಿಗಜಿಣಗಿ ಹೇಳಿದ್ದಾರೆ ಎಂಬ ಆರೋಪದ ವಿಚಾರವಾಗಿ ಮಾತನಾಡಿ, ಆ ರೀತಿ ಯಾರು ಹೇಳಲು ಸಾಧ್ಯವಿಲ್ಲ. ಹಾಗೆ ಹೇಳಿದ್ದರೆ ಅದನ್ನು ಸರಿಪಡಿಸಲಾಗುತ್ತದೆ. ಎಲ್ಲಾ ವರ್ಗದ ಮತಗಳು ನಮಗೆ ಬೇಕು. ಈ ಸಂದರ್ಭದಲ್ಲಿ ಒಡಕಿನ ಮಾತುಗಳು, ತಪ್ಪು ತಿಳಿವಳಿಕೆಗಳು ಬರಬಾರದು. ಎಲ್ಲವನ್ನು ಸರಿ ಮಾಡಿಕೊಂಡು ಹೋಗಬೇಕೆಂದು ಅವರು ಸಲಹೆ ನೀಡಿದರು.

---

ಬಾಕ್ಸ್....

15ರಂದು ನಾಮಪತ್ರ ಸಲ್ಲಿಕೆ

ಲೋಕಸಭಾ ಚುನಾವಣೆ ಕಾವು ಏರತೊಡಗಿದ ಹಿನ್ನೆಲೆಯಲ್ಲಿ ರಾಜಕೀಯ ನಾಯಕರ ಟೆಂಪಲ್ ರನ್ ಶುರುವಾಗಿದೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಿಜಯಪುರ ತಾಲೂಕಿನ ತೊರವಿ ಗ್ರಾಮದಲ್ಲಿರುವ ತಮ್ಮ ಮನೆ ದೇವರಾದ ಶ್ರೀ ನರಸಿಂಹ ದೇವರ ದರ್ಶನ‌ ಮಾಡಿ, ವಿಶೇಷ ಪೂಜೆ ಸಲ್ಲಿಸಿದರು. ದೇವರ ದರ್ಶನದ ಬಳಿಕ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಚುನಾವಣೆಗೂ ಮುನ್ನ ಹಾಗೂ ಬಳಿಕ ಅಲ್ಲದೆ ನಮ್ಮ ಮನೆಯಲ್ಲಿ ಯಾವುದೇ ಶುಭ ಸಮಾರಂಭ ನಡೆದರೂ ಕುಟುಂಬ ಸಮೇತವಾಗಿ ಮನೆ ದೇವರ ದರ್ಶನ ಮಾಡುತ್ತೇವೆ. ಇದೀಗ ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಬಳಿಕ ಮುಂಬರುವ 15ರಂದು ನಾಮಪತ್ರ ಸಲ್ಲಿಸುತ್ತಿದ್ದು, ನಾಮಪತ್ರ ಸಲ್ಲಿಕೆಗೂ ಮುನ್ನ ನಮ್ಮ ಮನೆ ದೇವರು ನರಸಿಂಹ ದೇವರ ದರ್ಶನ ಮಾಡುವುದನ್ನು ಪಾಲಿಸಿಕೊಂಡು ಬಂದಿದ್ದೇನೆ. ಹಾಗಾಗಿ ದೇವರ ದರ್ಶನ ಪಡೆಯುತ್ತಿದ್ದೇನೆ ಎಂದರು.

Share this article