ಚುನಾ‍ವಣಾ ಕಣದಿಂದ ಹಿಂದೆ ಸರಿದ ದಿಂಗಾಲೇಶ್ವರ ಸ್ವಾಮೀಜಿ

KannadaprabhaNewsNetwork | Updated : Apr 23 2024, 09:34 AM IST

ಸಾರಾಂಶ

ಸ್ವಾಮೀಜಿಯ ಅಧಿಕೃತ ಚುನಾವಣಾ ಏಜೆಂಟ್‌ರಾದ ಸಚಿನ್ ಪಾಟೀಲ, ವಕೀಲ ಅಮೃತ ಬಳ್ಳೊಳ್ಳಿ ಅವರನ್ನು ಜಿಲ್ಲಾ ಚುನಾವಣಾಧಿಕಾರಿ ಕಚೇರಿಗೆ ಕಳುಹಿಸಿ ನಾಮಪತ್ರ ವಾಪಸ್‌ ಪಡೆಯುವ ಪ್ರಕ್ರಿಯೆ ಪೂರ್ಣಗೊಳಿಸಿದರು.

ಧಾರವಾಡ :  ಧಾರವಾಡ ಲೋಕಸಭಾ ಕ್ಷೇತ್ರದ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ದ ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮೀಜಿ ತಮ್ಮ ಉಮೇದುವಾರಿಕೆಯನ್ನು ಸೋಮವಾರ ಹಿಂಪಡೆದಿದ್ದಾರೆ.

ಸೋಮವಾರ ಮಧ್ಯಾಹ್ನ 1ರ ಸುಮಾರಿಗೆ ಧಾರವಾಡಕ್ಕೆ ಆಗಮಿಸಿದ ಸ್ವಾಮೀಜಿ, ಸ್ವತಃ ಚುನಾವಣಾಧಿಕಾರಿ ಕಚೇರಿಗೆ ಬಂದು ನಾಮಪತ್ರ ವಾಪಸ್‌ ಪಡೆಯಲಿದ್ದಾರೆ ಎನ್ನಲಾಗಿತ್ತು. ಅದರೆ, ಕಲ್ಯಾಣನಗರದ ಭಕ್ತರೊಬ್ಬರ ಕಚೇರಿಯಲ್ಲಿ ನಾಮಪತ್ರ ವಾಪಸ್‌ ಪಡೆಯಲು ಬೇಕಾದ ಪ್ರಕ್ರಿಯೆ ಪೂರ್ಣಗೊಳಿಸಿದರು. ಸ್ವಾಮೀಜಿಯ ಅಧಿಕೃತ ಚುನಾವಣಾ ಏಜೆಂಟ್‌ರಾದ ಸಚಿನ್ ಪಾಟೀಲ, ವಕೀಲ ಅಮೃತ ಬಳ್ಳೊಳ್ಳಿ ಅವರನ್ನು ಜಿಲ್ಲಾ ಚುನಾವಣಾಧಿಕಾರಿ ಕಚೇರಿಗೆ ಕಳುಹಿಸಿ ನಾಮಪತ್ರ ವಾಪಸ್‌ ಪಡೆಯುವ ಪ್ರಕ್ರಿಯೆ ಪೂರ್ಣಗೊಳಿಸಿದರು.

ಸ್ವಾಮೀಜಿ ನಾಮಪತ್ರ ವಾಪಸ್‌ ಪಡೆಯಲು ಹೇಳಿದರು. ಅಂತೆಯೇ, ಅದಕ್ಕೆ ಬೇಕಾದ ಪ್ರಕ್ರಿಯೆ ಮುಗಿಸಿ ಮರಳುತ್ತಿದ್ದೇವೆ. ಉಳಿದ ವಿಷಯ ಸ್ವಾಮೀಜಿಯವರನ್ನೇ ಕೇಳಿ ಎಂದು ಚುನಾವಣಾ ಏಜೆಂಟ್‌ ಸಚಿನ್ ಪಾಟೀಲ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಹಿರಿಯ ಶ್ರೀಗಳ ಆದೇಶದಂತೆ ನಾಮಪತ್ರ ಹಿಂದಕ್ಕೆ: ದಿಂಗಾಲೇಶ್ವರ ಶ್ರೀ

ನಮ್ಮ ಪೀಠದ ಹಿರಿಯ ಗುರುಗಳ ಸೂಚನೆ ಮೇರೆಗೆ ಚುನಾವಣೆ ಕಣದಿಂದ ನಾಮಪತ್ರ ಹಿಂಪಡೆದಿದ್ದೇನೆಯೇ ಹೊರತು ಯಾವುದೇ ರಾಜಕೀಯ ವ್ಯಕ್ತಿಗಳ ಒತ್ತಡದಿಂದಲ್ಲ ಎಂದು ಸ್ಪಷ್ಟಪಡಿಸಿದ ಶಿರಹಟ್ಟಿ ಶ್ರೀ ಫಕೀರ ದಿಂಗಾಲೇಶ್ವರ ಶ್ರೀಗಳು, ಧರ್ಮಯುದ್ಧ ಮಾತ್ರ ನಿಲ್ಲುವುದಿಲ್ಲ. ಹೋರಾಟದಿಂದ ಹಿಂದೆ ಸರಿದಿಲ್ಲ. ನನ್ನ ಹೋರಾಟ ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿದರು.

ಲಿಂಗಾಯತ ಸಮುದಾಯದ ಹಾಗೂ ಕಾಂಗ್ರೆಸ್‌ ಮುಖಂಡ ಮೋಹನ ಲಿಂಬಿಕಾಯಿ ಅವರ ಮನೆಯಲ್ಲಿ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರನ್ನು ಬೆಂಬಲಿಸಬೇಕೆಂಬುದನ್ನು ಭಕ್ತರ ಸಭೆ ನಡೆಸಿ ನಿರ್ಧರಿಸುತ್ತೇನೆ ಎಂದು ತಿಳಿಸಿದರು.ನಾಮಪತ್ರ ಹಿಂಪಡೆದಿರುವುದರ ಹಿಂದೆ ಯಾವುದೇ ಪಕ್ಷದ, ಯಾರ ನಾಯಕರ ಕೈವಾಡಗಳಿಲ್ಲ. ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಮೊದಲಿನಿಂದಲೂ ಕಾಂಗ್ರೆಸ್‌ ಹಾಗೂ ಬಿಜೆಪಿ ನಾಯಕರು ನನ್ನೊಂದಿಗೆ ಸುದೀರ್ಘವಾಗಿ ಮಾತನಾಡಿದ್ದರು ಎಂದರು.

ಸೋಮವಾರ ಬೆಳಗ್ಗಿನವರೆಗೂ ಎರಡೂ ಪಕ್ಷದ ನಾಯಕರು ನನ್ನೊಂದಿಗೆ ಮಾತನಾಡಿದ್ದಾರೆ. ಆದರೆ ಎಲ್ಲ ನಾಯಕರಿಗೂ ಸ್ಪರ್ಧೆಯ ಕುರಿತು ಸ್ಪಷ್ಟ ಉತ್ತರ ನೀಡಿ ಮುಂದುವರಿದಿದ್ದೆ. ಆದರೆ ನಮ್ಮ ಪೀಠದ ಹಿರಿಯ ಶ್ರೀಗಳು, ನಾಮಪತ್ರ ಹಿಂಪಡೆಯುವಂತೆ ಆದೇಶಿಸಿದರು. ಈ ಹಿನ್ನೆಲೆಯಲ್ಲಿ ಹಿಂದೆ ಪಡೆದಿದ್ದೇನೆ. ನಾನು ಯಾವುದೇ ಪಕ್ಷದ ಪರ ಹಾಗೂ ವಿರುದ್ಧವಿಲ್ಲ. ನನ್ನ ಸಂಬಂಧ ಎರಡು ಪಕ್ಷದ ನಾಯಕರೊಂದಿಗಿದೆ ಎಂದು ತಿಳಿಸಿದರು.ಅಲಕ್ಷ್ಯ- ಚುನಾವಣೆ ಅಸ್ತ್ರ:

ನೇಹಾಳಿಗೆ ನ್ಯಾಯ ಸಿಗುವವರೆಗೂ ನನ್ನ ಹೋರಾಟ ಇರಲಿದೆ. ಇವಳ ವಿಚಾರದಲ್ಲಿ ಒಂದು ಸರ್ಕಾರ ಅಲಕ್ಷ್ಯ ತೋರಿದೆ. ಇನ್ನೊಂದು ಪಕ್ಷ ಚುನಾವಣಾ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ ಎಂದರು.ಸ್ಪರ್ಧೆಗಾಗಿ ಪೇಮೆಂಟ್‌ ಬಂದಿದೆ ಎನ್ನುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆಗೆ ಪ್ರತಿಕ್ರಿಯಿಸಿದ ಶ್ರೀಗಳು, ಅವರ ಪಕ್ಷ ಹಾಗೂ ಪಕ್ಷದ ನಾಯಕರು ವಿರುದ್ಧ ಮಾತನಾಡಿದ ವ್ಯಕ್ತಿ ಇನ್ನೊಬ್ಬರ ಬಗ್ಗೆ ಮಾತನಾಡಿದರೆ ಅಚ್ಚರಿಪಡಬೇಕಾಗಿಲ್ಲ. ಅವರ ಯೋಗ್ಯತೆ ಇಡೀ ರಾಜ್ಯಕ್ಕೆ ಗೊತ್ತಿದೆ ಎಂದರು.

ಸ್ಪರ್ಧೆಗೆ, ಹಿಂಪಡೆಯಲು ಹಣ ಕೊಟ್ಟಿದ್ದೇನೆ ಎನ್ನುವ ವ್ಯಕ್ತಿಯಿದ್ದರೆ ಜನರ ಮುಂದೆ ಬಂದು ಹೇಳಲಿ ಎಂದು ದಿಂಗಾಲೇಶ್ವರ ಸ್ವಾಮೀಜಿ ಸವಾಲು ಹಾಕಿದರು.

Share this article