ಕನ್ನಡಪ್ರಭ ವಾರ್ತೆ ಕಲಬುರಗಿ
ಶ್ರದ್ಧೆ, ತತ್ವ, ನಿಷ್ಠೆ ಹಾಗೂ ಬದ್ಧತೆಯೊಂದಿಗೆ ಬಸವ ತತ್ವದ ಮೇಲೆ ನಂಬಿಕೆ ಇಟ್ಟಂತಹ ಬಿಆರ್ ಪಾಟೀಲರು ಯಾವುದಕ್ಕೂ ಅಂಜದವರು. ಅವರಿಂದ ಆರ್ಥಿಕ ಸ್ಥಿರತೆ ಹಾಗೂ ಸಾಮಾಜಿಕ ನ್ಯಾಯ ಜನರಿಗೆ ದೊರಕಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಗುಣಗಾನ ಮಾಡಿದರು.ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರಾಗಿ ನೇಮಕವಾದ ಶಾಸಕ ಬಿಆರ್ ಪಾಟೀಲ್ ಅವರ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ನೇರ ನುಡಿಗೆ ಹೆಸರಾದ ಪಾಟೀಲರು, ತಮ್ಮ ವಾಹನದ ಮೇಲೆ ನಿರ್ಭಯ ಎಂದು ಬರೆಸಿದ್ದಾರೆ. ಯಾರು ನೇರವಾಗಿದ್ದು, ಯಾರಿಗೂ ಅಂಜದೆ ಇರುತ್ತಾರೋ ಅಂತವರು ಮಾತ್ರ ಹಾಗೇ ಬರೆಸಲು ಸಾಧ್ಯ ಎಂದ ಸಚಿವರು, ಸಿಎಂ ಅವರಿಗೆ ಕೂಡಾ ನೇರವಾಗಿ ಹೇಳುವಂತ ಛಾತಿ ಪಾಟೀಲರಿಗಿದೆ. ಮದ್ಯ ಮಾರಾಟದಿಂದ ಬಂದ ಪಾಪದ ಹಣದಿಂದ ಸರ್ಕಾರದ ಯೋಜನೆಗಳು ಜಾರಿಯಾಗಬೇಕೆ? ಎಂದು ಅವರು ಪ್ರಶ್ನಿಸಿದ್ದು, ಅವರ ಗಟ್ಟಿತನಕ್ಕೆ ಕಾರಣ. ಸಿಎಂ ರಾಜಕೀಯ ಸಲಹೆಗಾರರಾಗಿದ್ದು, ಈ ಭಾಗದ ಜನರಿಗೆ ಗಟ್ಟಿ ಧ್ವನಿ ಸಿಕ್ಕಂತಾಗಿದೆ ಎಂದರು.ಸಿರಿಧಾನ್ಯವನ್ನು ಬಿಸಿಯೂಟಕ್ಕೆ ಬಳಸಲಾಗುವುದು ಎಂದು ಸಿಎಂ ಹೇಳಿದ್ದರ ಹಿಂದೆ ಪಾಟೀಲರ ಸಲಹೆ ಕಾರಣ ಎಂದ ಪ್ರಿಯಾಂಕ್ ಖರ್ಗೆ, ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರ ದೊರಕಲಿ ಎನ್ನುವ ಕಾಳಜಿ ಅಡಗಿದೆ. ಸಮಾಜವಾದದ ಹಿನ್ನೆಲೆ ಬಂದಿರುವ ಪಾಟೀಲರ ಅನುಭವ ಹಾಗೂ ಬದ್ಧತೆಯಿಂದಾಗಿ ಜನರಿಗೆ ಸಾಮಾಜಿಕವಾಗಿ ನ್ಯಾಯ ದೊರಕುವಂತ ಕಾರ್ಯಕ್ರಮಗಳು ಸರ್ಕಾರದಿಂದ ದೊರಕಲಿವೆ ಎಂದರು.
ಸೈದ್ಧಾಂತಿಕ ಸ್ಪಷ್ಟತೆಗಾಗಿ ಶಾಸಕರಿಗೆ ಪಾಟೀಲರಿಂದ ಪಾಠದ ಅವಶ್ಯಕತೆ ಇದೆ ಎಂದು ಸಚಿವರು ಒತ್ತಿ ಹೇಳಿದರು. ಅವರ ಅನುಭವ ಬಳಸಿಕೊಂಡು ಸರ್ಕಾರ ಆರ್ಥಿಕ ಸದೃಢತೆಯ ಕಾರ್ಯಕ್ರಮ ರೂಪಿಸಲಿದೆ ಎಂದರು.ಪಾನನಿಷೇಧಕ್ಕೆ ರಾಷ್ಟ್ರ ಮಟ್ಟದಲ್ಲಿ ಕ್ರಮ ಅಗತ್ಯ: ಪಾನನಿಷೇಧಕ್ಕೆ ರಾಷ್ಟ್ರ ಮಟ್ಟದಲ್ಲಿ ಕ್ರಮ ಆಗಬೇಕಿದೆ. ಈ ನಿಟ್ಟಿನಲ್ಲಿ ನಾವೆಲ್ಲ ಪ್ರಧಾನಿರನ್ನ ಒತ್ತಾಯಿಸೋಣ ಎಂದು ಸಿಎಂ ರಾಜಕೀಯ ಸಲಹೆಗಾರ ಹಾಗೂ ಶಾಸಕ ಬಿ.ಆರ್.ಪಾಟೀಲ್ ಅವರು ಹೇಳಿದರು.
ಕಾಂಗ್ರೆಸ್ ಪಕ್ಷದ ಕಚೇರಿ ಆವಣರದಲ್ಲಿ ನಡೆ ನಡೆದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ರಾಜ್ಯದಲ್ಲಿ ಪಾನನಿಷೇಧಕ್ಕೆ ನಾನು ಪ್ರಸ್ತಾಪಿಸಿದ್ದೆ. ಆಗ ಸಿಎಂ, ಪಾನ ನಿಷೇಧ ಒಂದು ರಾಜ್ಯದಿಂದ ಆಗುವಂತದಲ್ಲ. ಒಂದು ರಾಜ್ಯ ನಿಷೇಧ ಮಾಡಿದರೆ ಪಕ್ಕದ ರಾಜ್ಯದಿಂದ ಅಕ್ರಮವಾಗಿ ಒಳಬರುವ ಸಾಧ್ಯತೆ ಇರುತ್ತದೆ. ಆಗ ಮತ್ತಷ್ಟು ಸಮಸ್ಯೆಯಾಗುತ್ತದೆ ಎಂದಾಗ ನನಗೆ ಮನವರಿಕೆಯಾಯಿತು ಎಂದು ಪಾಟೀಲ್ ಹೇಳಿದರು.ತಾವು ಸಿಎಂ ಸಲಹೆಗಾರರಾಗಿದ್ದು, ಅವರಿಗೆ ರಾಜಕೀಯ ಜ್ಞಾನ ಇಲ್ಲ ಎಂದರ್ಥವಲ್ಲ. ಅವರಿಗೆ ಬಡವರ ಬಗ್ಗೆ, ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಬಗ್ಗೆ ಅಪಾರ ಕಾಳಜಿ ಇದೆ. ಈ ನಿಟ್ಟಿನಲ್ಲಿ ಸದಾ ಚಿಂತನೆಯಲ್ಲಿ ಇರುತ್ತಾರೆ. ಆದರೂ ಅವರಿಗೆ ಸಲಹೆ ನೀಡುತ್ತೇನೆ. ಸ್ವೀಕರಿಸುವುದು ಅವರಿಗೆ ಬಿಟ್ಟಿದ್ದು. ಆದರೆ ನನ್ನ ಎಲ್ಲ ಸಲಹೆ ಅವರು ಸ್ವೀಕರಿಸುತ್ತಾರೆ ಎನ್ನುವ ಆಸೆ ನನಗಿಲ್ಲ. ನನಗೆ ಕೊಟ್ಟಿರುವ ಜವಾಬ್ಧಾರಿಯನ್ನು ಕಟ್ಟುನಿಟ್ಟಾಗಿ ನಿಭಾಯಿಸುತ್ತೇನೆಂದರು.
ಲೋಕಸಭೆಗೆ ಖರ್ಗೆ ಕಣಕ್ಕಿಳಿಯಬೇಕೆಂದ ಪಾಟೀಲ್: ಮುಂಬುರುವ ಲೋಕಸಭಾ ಚುನಾವಣೆಗೆ ಮತ್ತೆ ಮಲ್ಲಿಕಾರ್ಜುನ ಖರ್ಗೆ ಅವರನ್ನ ಕಲಬುರಗಿಯಿಂದ ಸ್ಪರ್ಧಿಸುವಂತೆ ನಾವೆಲ್ಲ ಒತ್ತಾಯಿಸೋಣ. ಮತದಾರರ ಕೈ ಕಾಲು ಹಿಡಿದಾದರೂ ಮತ ಹಾಕಿಸೋಣ ಎಂದು ಪಾಟೀಲ್ ಅಭಿಪ್ರಾಯಪಟ್ಟರು. ಬುದ್ಧ, ಬಸವ, ಅಂಬೇಡ್ಕರ ನಾಡಿನಲ್ಲಿ ಹೊಸ ಚೈತನ್ಯ ಮೂಡಿಸಬೇಕಿದೆ. ಸಂವಿಧಾನ ಉಳಿಯಬೇಕು. ಸೈದ್ಧಾಂತಿಕ ಅರಿವು ಮೂಡಿಸಬೇಕಿದೆ. ಇಲ್ಲದಿದ್ದರೆ ಅಪಾಯ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ ಪಾಟೀಲ್‌ರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾವೆಲ್ಲರೂ ಸೇರಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು. ದಕ್ಷಿಣ ಭಾರತದಲ್ಲಿ ಬಿಜೆಪಿ ಬೆಳೆಯಲು ಸಾಧ್ಯವಿಲ್ಲ. ಕರ್ನಾಟಕದಲ್ಲಿ ಬಾಗಿಲು ಬಂದ್ ಮಾಡಿದ್ದೇವೆ. ಕೇಜ್ರಿವಾಲ್, ರಾಹುಲ್, ಮತ್ತು ಮಮತಾ ಒಂದೇ ವೇದಿಕೆಗೆ ಬಂದಿದ್ದಾರೆ. ಬಿಜೆಪಿ ಮನೆಗೆ ಕಳಿಸುವುದೇ ಎಲ್ಲರ ಉದ್ದೇಶ, ಈ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡೋಣ, ನಾನು ಒಬ್ಬ ಸಾಮಾನ್ಯ ಕಾರ್ಯಕರ್ತನಂತೆ ಕೆಲಸ ಮಾಡಲು ಸಿದ್ಧನಿದ್ದೇನೆ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೀರ್ತಿ ತರುವ ಮೂಲಕ ಬಿಜೆಪಿ ಸೋಲಿಸೋಣ ಎಂದರು.