ಕುಕನೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿ ಯೋಜನೆಗಳ ಮೂಲಕ 1 ಲಕ್ಷ 20 ಸಾವಿರ ಕೋಟಿ ಹಣವನ್ನು ನೇರವಾಗಿ ಜನರಿಗೆ ತಲುಪಿಸುತ್ತಿದ್ದೇವೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರಿಂದ ಮಹತ್ತರ ಯೋಜನೆಗಳು ಜನರಿಗೆ ತಲುಪಿವೆ. ಗ್ಯಾರಂಟಿ ಯೋಜನೆಗಳು ಜನರಿಗೆ ಅನುಕೂಲ ಆಗಿವೆ. ಶಕ್ತಿ ಯೋಜನೆಯಲ್ಲಿ 900 ಕೋಟಿ ಮಹಿಳೆಯರು ಪ್ರಯಾಣ ಬೆಳೆಸಿ ಗಿನ್ನಿಸ್ ದಾಖಲೆ ಆಗಿದೆ. ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಯುವನಿಧಿಯಿಂದ ಜನರಿಗೆ ಯೋಜನೆಗಳು ತಲುಪಿವೆ. ರಾಜ್ಯದಲ್ಲಿ 36 ಲಕ್ಷ 10 ಸಾವಿರ ರೈತರ ಪಂಪ್‌ಸೆಟ್ಟಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಐದು ಲಕ್ಷದ ವರೆಗೆ ರೈತರಿಗೆ ಕೃಷಿ ಸಾಲ ವಿಸ್ತರಣೆ ಆಗಿದೆ. 11 ಸಾವಿರ ಕೋಟಿ ಸಾಮಾಜಿಕ ಭದ್ರತಾ ಯೋಜನೆಗಳ ಮಾಶಾಸನ ನೀಡಲಾಗುತ್ತಿದೆ. 46 ಸಾವಿರ ಕೋಟಿ ಹಣ ಶಾಲೆ, ಬಿಸಿಯೂಟ, ಪುಸ್ತಕಗಳಿಗೆ ಖರ್ಚಾಗುತ್ತದೆ. ಯಲಬುರ್ಗಾ ತಾಲೂಕಿನ ಬೇವೂರಿನಲ್ಲಿ ₹24 ಕೋಟಿ ವೆಚ್ಚದ ಬಿ.ಸಿ.ಎ. ವಸತಿ ಕಾಲೇಜು ಮಂಜೂರಾಗಿದ್ದು, ಈ ವಾರದಲ್ಲಿ ಕ್ಯಾಬಿನೆಟ್ ಅನುಮೋಧನೆ ಸಹ ಸಿಗಲಿದೆ. ಕ್ಷೇತ್ರಕ್ಕೆ ಇನ್ನೊಂದು ಕೌಶಲ್ಯ ಅಭಿವೃದ್ಧಿ ಕೇಂದ್ರ ಮಂಜೂರಾಗಲಿದೆ. ಕಾರ್ಮಿಕರ ಮಕ್ಕಳಿಗೆ ಕಾರ್ಮಿಕ ವಸತಿ ಶಾಲೆ ಕಟ್ಟಡ ನಿರ್ಮಾಣ ಆಗುತ್ತಿದೆ. 18 ಮೊರಾರ್ಜಿ ವಸತಿ ಶಾಲೆಗಳು ಕ್ಷೇತ್ರದಲ್ಲಿವೆ. ಬೇವೂರಿಗೆ ವಸತಿ ಬಿಸಿಎ ಕಾಲೇಜು ಮಂಜೂರು ಮಾಡಿಸಿದ್ದೇನೆ. ಕೊಪ್ಪಳ ವಿವಿ ಕಟ್ಟಡ ಬಗ್ಗೆ ಮಾಹಿತಿ ಇಲ್ಲ, ಅದರ ಬಗ್ಗೆ ತಿಳಿದುಕೊಳ್ಳುತ್ತೇನೆ ಎಂದು ಹೇಳಿದರು.
ತಾಪಂ ಇಒಗಳಾದ ಬೆಟದಪ್ಪ ಮಾಳೆಕೊಪ್ಪ, ನೀಲಂ, ಎಂಜಿನೀಯರ್‌ಗಳಾದ ಮಲ್ಲಿಕಾರ್ಜುನ, ಅನಿಲ ಪಾಟೀಲ್, ಆಹಾರ ಇಲಾಖೆಯ ಅಧಿಕಾರಿಗಳಾದ ಮಲ್ಲಯ್ಯ, ಮಂಜುನಾಥ ಮೇಗಳಮನಿ, ಕೆಇಬಿ ಅಧಿಕಾರಿ ನಾಗರಾಜ, ಯಲಬುರ್ಗಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಸುಧೀರ ಕೊರ್ಲಹಳ್ಳಿ, ಬಿಇಒ, ಪ್ರಭಾರಿ ಡಿಡಿಪಿಯು, ಪ್ರಮುಖರಾದ ಕೆ.ಎಂ. ಸಯ್ಯದ್, ವೀರನಗೌಡ ಬಳೂಟಗಿ, ಶಿವನಗೌಡ ದಾನರೆಡ್ಡಿ, ಈರಪ್ಪ ಕುಡಗುಂಟಿ, ಫಕೀರಸಾಬ್ ರಾಜೂರು, ಅಧಿಕಾರಿ ವರ್ಗದವರು ಹಾಗೂ ಗ್ರಾಮಸ್ಥರಿದ್ದರು.