ಮುಂಡಗೋಡ: ಪಪಂನಿಂದ ರಸ್ತೆ, ಚರಂಡಿ, ನೀರು ಸೇರಿದಂತೆ ಅಗತ್ಯ ಮೂಲ ಸೌಕರ್ಯ ಒದಗಿಸಿದ ಮೇಲೆ ಕಡ್ಡಾಯವಾಗಿ ತೆರಿಗೆ ಪಾವತಿಸಿಕೊಳ್ಳಿ ಎಂದು ಶಾಸಕ ಶಿವರಾಮ ಹೆಬ್ಬಾರ ಪಪಂ ಮುಖ್ಯಾಧಿಕಾರಿಗೆ ಸೂಚಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪಪಂ ಸಿಬ್ಬಂದಿ, ದಾಖಲೆ ಇಲ್ಲದ ಆಸ್ತಿಗಳಿಂದ ತೆರಿಗೆ ಪಡೆಯಲು ಅವಕಾಶವಿಲ್ಲ. ನಾವು ಕರ ತುಂಬಿಸಿಕೊಂಡರೆ ಪಹಣಿ ಪತ್ರ ನೀಡಬೇಕಾಗುತ್ತದೆ. ಹಾಗಾಗಿ ಈ ಸಮಸ್ಯೆ ಎದುರಾಗಿದೆ ಎಂದರು.
ಪಪಂನಿಂದ ಮೂಲ ಸೌಲಭ್ಯ ಒದಗಿಸಿದ ಮೇಲೆ ತೆರಿಗೆ ವಸೂಲಿ ಮಾಡುವುದರಲ್ಲಿ ತಪ್ಪೇನಿದೆ. ಅದಕ್ಕೆ ಏನು ಅವಕಾಶವಿದೆ ಎಂದು ನೋಡಿ ತೆರಿಗೆ ಸಂಗ್ರಹ ಮಾಡಿ ಎಂದು ಶಾಸಕರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಪ್ರಸಕ್ತ ಸಾಲಿನಲ್ಲಿ ಮಳೆಯ ಕೊರತೆಯಿಂದಾಗಿ ಮುಂಡಗೋಡ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಸನವಳ್ಳಿ ಜಲಾಶಯದ ನೀರಿನ ಮಟ್ಟ ಕಡಿಮೆಯಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಪಟ್ಟಣಕ್ಕೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಹಾಗಾಗಿ ಚಿಕ್ಕ ನೀರಾವರಿ ಇಲಾಖೆಯೊಂದಿಗೆ ಚರ್ಚಿಸಿ ಜಲಾಶಯದಿಂದ ನೀರು ಪೋಲಾಗದಂತೆ ಹಾಗೂ ಯಾವುದೇ ರೀತಿ ಕೃಷಿ ಚಟುವಟಿಕೆಗೆ ನೀರು ಪೂರೈಸದಂತೆ ಸೂಕ್ತ ಕ್ರಮ ಕೈಗೊಳ್ಳಲು ಪಪಂ ಮುಖ್ಯಾಧಿಕಾರಿ ಸಂತೋಷ ಹಾಲಕಲ್ಲಾಪುರ ಅವರಿಗೆ ಸೂಚಿಸಿದರು.
ಪಟ್ಟಣದಲ್ಲಿ ನಾಯಿ ಹಾವಳಿ ಹೆಚ್ಚಿದ್ದು, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿರುವ ಬಗ್ಗೆ ಕೆಲ ಸದಸ್ಯರು ದೂರಿದರು. ನಾಯಿ ಹಿಡಿಯಲು ೩ ಬಾರಿ ಟೆಂಡರ್ ಕರೆದರೂ ಕೂಡ ಯಾರೂ ಬಂದಿಲ್ಲ. ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಾಧಿಕಾರಿಗಳು ತಿಳಿಸಿದರು.