ಕೆಲವೆಡೆಗಳಲ್ಲಿ ಮಾತ್ರ ಜೀವಂತ । ಆಧುನಿಕತೆಯ ಪ್ರಭಾವಕ್ಕೆ ಒಳಗಾಗಿ ಕಲೆಗಳಿಂದ ದೂರ ಉಳಿದ ಯುವಜನತೆ
ಪರಶಿವಮೂರ್ತಿ ದೋಟಿಹಾಳ
ಕನ್ನಡಪ್ರಭ ವಾರ್ತೆ ಕುಷ್ಟಗಿಭಾವೈಕ್ಯದ ಮೊಹರಂ ಹಬ್ಬ ಬಂತೆಂದರೆ ಹೆಜ್ಜೆ ಮೇಳ, ರಿವಾಯಿತಿ ಪದಗಳು, ಹುಲಿವೇಷದಂತ ಹಲವು ಜನಪದ ಕಲೆಗಳು ಮೇಳೈಸುತ್ತಿದ್ದವು. ಆದರೆ ಇತ್ತೀಚೆಗೆ ಈ ಕಲೆಗಳು ಮರೆಯಾಗುತ್ತಿವೆ.
ಮಹಮ್ಮದ ಪೈಗಂಬರ, ಹಸೇನ್-ಹುಸೇನ್ ಅವರ ಜೀವನ ಚರಿತ್ರೆ ತಿಳಿಸುವ ರಿವಾಯಿತಿ ಪದಗಳ ತಯಾರಿ ನಡೆಯುತ್ತಿತ್ತು. ಆದರೆ ಇಂದಿನ ಯುವಜನತೆ ಆಧುನಿಕತೆಯ ಪ್ರಭಾವಕ್ಕೆ ಒಳಗಾಗಿ ಇಂತಹ ಚರಿತ್ರೆಯನ್ನು ಸಾರುವ ಕಲೆಗಳಿಂದ ದೂರ ಉಳಿಯುತ್ತಿದ್ದಾರೆ. ಕೆಲವು ಹಳ್ಳಿಗಳಲ್ಲಿ ಮಾತ್ರ ಇಂತಹ ಕಲೆಗಳನ್ನು ಉಳಿಸಿ, ಬೆಳೆಸಲು ಹೆಜ್ಜೆ ಮೇಳ, ರಿವಾಯಿತಿ ಪದಗಳ ಸ್ಪರ್ಧೆ ಏರ್ಪಡಿಸುವುದು ಕಂಡು ಬರುತ್ತಿದೆ.
ಮನೆಯಲ್ಲಿ ಯಾವುದೇ ತೊಂದರೆ ಬರಬಾರದು ಎಂದು ಮೊಹರಂನಲ್ಲಿ ಇಷ್ಟಾರ್ಥಗಳು ಸಿದ್ಧಿಸಲಿ ಎಂದು ಪಂಜಾ ದೇವರಿಗೆ (ಅಲಾಯಿ ದೇವರಿಗೆ) ಹರಕೆ ಹೊತ್ತ ಸರ್ವ ಧರ್ಮದವರು ಹಬ್ಬ ಮುಗಿಯುವವರೆಗೂ ಹುಲಿವೇಷ ಹಾಕಿಕೊಂಡು ಕುಣಿದು ಹರಕೆ ತೀರಿಸುತ್ತಿರುವುದು ಕಂಡು ಬರುತ್ತಿದೆ. ಹುಲಿವೇಷದ ಬಣ್ಣ ಬಳಿಸಿಕೊಳ್ಳಲು ಹಣ ಇಲ್ಲದವರು ಮೈಗೊಂದು ಹಳೆಯ ಕಂಬಳಿ ಸುತ್ತಿಕೊಂಡು ಮೈತುಂಬ ಮಸಿ ಬಳಿದುಕೊಂಡು ತಲೆಗೊಂದು ಉದ್ದನೆ ಟೋಪಿ ಹಾಕಿಕೊಳ್ಳುತ್ತಾರೆ. ಇನ್ನೂ ಕೆಲವರು ಐದು ದಿನ ನಡೆಯುವ ಮೊಹರಂ ಹಬ್ಬದಲ್ಲಿ ಹೊಸ ಬಟ್ಟೆ ಧರಿಸಿ ಕೊರಳಿಗೆ, ಕೈಗೆ ಲಾಡಿ ಕಟ್ಟಿಕೊಂಡು ಹರಕೆ ತೀರಿಸುತ್ತಾರೆ. ಐದು ದಿನಗಳ ಕಾಲ ನಡೆಯುವ ಮೊಹರಂ ಹಬ್ಬದಲ್ಲಿ ಕತಲ್ ರಾತ್ರಿಗಳಲ್ಲಿ ಅಲಾಯಿ ದೇವರ ಸವಾರಿ ಹಾಗೂ ಪವಾಡ ನಡೆಯುತ್ತವೆ.
ತಿಂಗಳಾನುಗಟ್ಟಲೆ ಗುಮರಿ, ಗೆಜ್ಜೆ ಕಟ್ಟಿಕೊಂಡು ಓಣಿಗೊಂದು ಹೆಜ್ಜೆ ಮೇಳ ಮಾಡಿಕೊಂಡು ತಯಾರಿ ನಡೆಸಿ ಕತ್ತಲ ರಾತ್ರಿ ದಿನ ಜೋಡ ಹಲಿಗಿಯೊಂದಿಗೆ ಮಸೀದಿ ಮುಂದೆ ಹೆಜ್ಜೆ ಆಡುತ್ತಾ ಬಂದರೆ ಮಂದಿ ನಿಂತು ನೋಡುತ್ತಿದ್ದರು. ಆದರೆ ಈಗಿನವರು ಸಿನೆಮಾ ಹಾಡಿಗೆ ಮಾತ್ರ ಕುಣಿಯುತ್ತಾರೆ ಎನ್ನುತ್ತಾರೆ