ಕನಕಪುರ: ನಗರಸಭೆಯಲ್ಲಿ ಕೆಲಸ ಮಾಡಲು ಸಾಧ್ಯ ವಾಗದ ಸಿಬ್ಬಂದಿ ಜಾಗ ಖಾಲಿ ಮಾಡುವಂತೆ ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ನಗರಸಭಾ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ನಗರಸಭೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರದ ಆಶಯದಂತೆ ನಗರದ ನಾಗರಿಕರಿಗೆ ಉತ್ತಮ ರಸ್ತೆ, ಚರಂಡಿ, ಒಳಚರಂಡಿ, ಕುಡಿಯಲು ಶುದ್ಧ ನೀರು ಸರಬರಾಜು, ಕಸವಿಲೇವಾರಿ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸುವುದು ಸಿಬ್ಬಂದಿಯ ಕರ್ತವ್ಯ. ನಗರಸಭೆ ಸಿಬ್ಬಂದಿ ನಗರ ವ್ಯಾಪ್ತಿಯಲ್ಲೇ ನೆಲೆಸಿದ್ದು, ನಗರದ ಜನತೆಯ ಸಮಸ್ಯೆಗಳಿಗೆ ಸ್ಪಂದಿಸಬೇಕು. ಕೆಲಸ ಮಾಡದೆ ಕಾಲಾಹರಣ ಮಾಡುವ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳ ಬೇಕಾಗುತ್ತದೆ ಎಂದು ಎಚ್ಚರಿಸಿದರು. ನಗರಸಭೆಯ ವಿವಿಧ ಮೂಲಗಳಿಂದ ಬರಬೇಕಾಗಿರುವ ತೆರಿಗೆ ಸಂಗ್ರಹಿಸಿ ಸಾರ್ವಜನಿಕ ಕಾಮಗಾರಿಗಳಿಗೆ ಬಳಸಿಕೊಳ್ಳಬೇಕು. ನಗರಸಭೆ ನಿರ್ಮಿಸಿರುವ 37 ವಾಣಿಜ್ಯ ಮಳಿಗೆಗಳು ಹರಾಜಾಗದೆ ಉಳಿದಿವೆ. ಇದರಿಂದ ನಗರಸಭಾ ಆದಾಯಕ್ಕೆ ಹೊಡೆತ ಬೀಳುತ್ತಿದೆ. ತಾಂತ್ರಿಕ ಕಾರಣಗಳನ್ನು ಸರಳಗೊಳಿಸಿ ಮರು ಹರಾಜು ಮಾಡುವ ಮೂಲಕ ನಗರಸಭೆ ಆದಾಯ ಹೆಚ್ಚಿಸಿಕೊಳ್ಳಬೇಕು ಎಂದರು. ನಗರಸಭಾ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಸುಮಾರು 7ರಿಂದ 8 ಸಾವಿರ ಅನಧಿಕೃತ ನೀರಿನ ಸಂಪರ್ಕವಿದ್ದು ಸದಸ್ಯರ ಸಹಕಾರದೊಂದಿಗೆ ಅವರ ವಾರ್ಡ್ ಗಳಲ್ಲಿ ಈ ಕುರಿತು ಅರಿವು ಮೂಡಿಸಿ ನೀರಿನ ಸಂಪರ್ಕ ಅಧಿಕೃತಗೊಳಿಸಬೇಕು. ಹಾಗು ಬಾಕಿಯಿರುವ ನೀರಿನ ಹಣ ಕಟ್ಟಲು ನಾಲ್ಕರಿಂದ ಐದು ತಿಂಗಳು ಕಾಲ ಸಮಯ ನೀಡಿ ವಸೂಲಿ ಮಾಡುವಂತೆ ಸಲಹೆ ನೀಡಿದರು. ನಗರದಲ್ಲಿ ಬೀದಿ ನಾಯಿಗಳ ಹಾವಳಿಯಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಿದೆ. ನಾಯಿಗಳ ನಿಯಂತ್ರಣಕ್ಕೆ ಚಿಕೆತ್ಸೆಯೇ ಶಾಶ್ವತ ಪರಿಹಾರವಾಗಿದ್ದು, ಇದರ ಬಗ್ಗೆ ಸೂಕ್ತ ಜಾಗವನ್ನು ಗುರುತಿಸಿ ಮಾಹಿತಿ ನೀಡಿದರೆ ಇದರ ಬಗ್ಗೆ ಗಮನ ಹರಿಸಲಾಗುವುದು ಎಂದು ಸದಸ್ಯರಿಗೆ ಭರವಸೆ ನೀಡಿದರು, ಈ ಬಾರಿ ಮಳೆಯ ಅಭಾವದಿಂದ ನಗರಾದ್ಯಂತ ನೀರಿನ ಅಭಾವ ತಲೆದೋರಿದೆ. ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಕಡಿಮೆಯಾಗಿದೆ. ಇರುವ ಕೊಳವೆ ಬಾವಿಗಳನ್ನು ರೀಚಾರ್ಜ್ ಮಾಡಿ ನೀರಿನ ಸಮಸ್ಯೆ ತಲೆದೋರದಂತೆ ಕ್ರಮ ಕೈಗೊಳ್ಳಬೇಕು. ನಗರದಲ್ಲಿ ಪುಟ್ ಪಾತ್ ವ್ಯಾಪಾರಿಗಳಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಿದ್ದು, ಇದಕ್ಕೆ ಶಾಶ್ವತ ಪರಿಹಾರ ಹುಡುಕುವಂತೆ ಸದಸ್ಯರು ಒತ್ತಾಯಿಸಿದರು. ಪೌರಾಯುಕ್ತ ಮಹದೇವ್ ಮಾತನಾಡಿ, ಈಗಾಗಲೇ ಬೀದಿ ಬದಿ ವ್ಯಾಪಾರಿಗಳಿಗೆ ಜಾಗ ಗುರುತಿಸಲಾಗಿದೆ. ಸದಸ್ಯರು ಹಾಗೂ ಜನಪ್ರತಿನಿಧಿಗಳ ಸಹಕಾರ ಪಡೆದು ಪುಟ್ ಪಾತ್ ವ್ಯಾಪಾರಿಗಳನ್ನು ತೆರವುಗೊಳಿಸಿ ಸ್ಥಳಾಂತರ ಗೊಳಿಸಲಾಗುವುದು ಎಂದು ಹೇಳಿದರು. ಸಭೆಯಲ್ಲಿ ನಗರದ ಒಳಚರಂಡಿ ಹಾಗೂ ಕುಡಿಯುವ ನೀರು ಸರಬರಾಜು ಸೇರಿದಂತೆ 6 ಕೋಟಿ ವೆಚ್ಚದಲ್ಲಿ ಅಮೃತ್ ಯೋಜನೆಯ ಕಾಮಗಾರಿಗಳಿಗಾಗಿ ತಾಂತ್ರಿಕ ಶಾಖೆಗೆ ಅಗತ್ಯವಿರುವ ಸಾಮಗ್ರಿಗಳನ್ನು ಖರೀದಿಸಲು ಅನುಮೋದನೆ ಪಡೆಯಲಾಯಿತು. ಸಭೆಯಲ್ಲಿ ಜಿಲ್ಲಾ ಯೋಜನಾ ನಿರ್ದೇಶಕ ರಮೇಶ್, ಲೆಕ್ಕಅಧೀಕ್ಷಕ ಜೆ.ಚಂದ್ರ, ತಾಂತ್ರಿಕ ಇಲಾಖೆ ಅಭಿಯಂತರರಾದ ರಾಘವೇಂದ್ರ, ವಿಜಯ್ ಕುಮಾರ್, ಶ್ರೀದೇವಿ, ಶೀಲಾ, ನಗರಸಭಾ ಸದಸ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. (ಫೋಟೋ ಕ್ಯಾಪ್ಷನ್) ಕನಕಪುರ ನಗರಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು.