ಹಾನಗಲ್ಲ ತಾಲೂಕು ಬರಗಾಲ ಪೀಡಿತ ಘೋಷಣೆ ಖಚಿತ

KannadaprabhaNewsNetwork | Published : Oct 8, 2023 12:01 AM

ಸಾರಾಂಶ

ಹಾನಗಲ್ಲ ತಾಲೂಕಿನ ಮಳೆ ಕೊರತೆ ಬೆಳೆ ಹಾನಿಯ ವಾಸ್ತವ ವರದಿಗೆ ಸ್ಪಂದಿಸಿ ಒಂದೆರಡು ದಿನದಲ್ಲಿ ತಾಲೂಕನ್ನು ಬರಪೀಡಿತ ಎಂದು ಘೋಷಿಸುವುದು ಖಚಿತವಾಗಿದ್ದು, ರೈತರ ಸಮಸ್ಯೆಗಳಿಗೆ ಪರಿಹಾರ ಸಿಗುವುದರಲ್ಲಿ ಯಾವುದೇ ಸಂದೇಹವೇ ಇಲ್ಲ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದ್ದಾರೆ.

ರೈತರ ಸಮಸ್ಯೆಗಳಿಗೆ ಪರಿಹಾರ । ಶಾಸಕ ಶ್ರೀನಿವಾಸ ಮಾನೆ ವಿಶ್ವಾಸ

ಕನ್ನಡಪ್ರಭ ವಾರ್ತೆ ಹಾನಗಲ್ಲ

ಹಾನಗಲ್ಲ ತಾಲೂಕಿನ ಮಳೆ ಕೊರತೆ ಬೆಳೆ ಹಾನಿಯ ವಾಸ್ತವ ವರದಿಗೆ ಸ್ಪಂದಿಸಿ ಒಂದೆರಡು ದಿನದಲ್ಲಿ ತಾಲೂಕನ್ನು ಬರಪೀಡಿತ ಎಂದು ಘೋಷಿಸುವುದು ಖಚಿತವಾಗಿದ್ದು, ರೈತರ ಸಮಸ್ಯೆಗಳಿಗೆ ಪರಿಹಾರ ಸಿಗುವುದರಲ್ಲಿ ಯಾವುದೇ ಸಂದೇಹವೇ ಇಲ್ಲ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರೈತರು ಈ ವರ್ಷದ ಮಳೆ-ಬೆಳೆ ವಿಷಯದಲ್ಲಿ ಸಾಕಷ್ಟು ಆತಂಕ ಹಾಗೂ ಆರ್ಥಿಕ ತಾಪತ್ರಯಗಳಿಗೆ ತುತ್ತಾಗಿದ್ದು, ತಾಲೂಕನ್ನು ಬರಪೀಡಿತ ಎಂದು ಘೋಷಿಸಲು ಒತ್ತಾಯಿಸಿದ್ದಾರೆ. ಮೊದಲ ಹಂತದಲ್ಲಿ ಬರಗಾಲ ಎಂದು ಘೋಷಣೆ ಆಗದ ಕಾರಣ ರೈತ ಸಮುದಾಯಗಳು ಕೂಡ ಧರಣಿ ನಡೆಸುತ್ತಿವೆ. ಆದರೆ ಇದೆಲ್ಲದರೊಂದಿಗೆ ಹಾನಗಲ್ಲ ತಾಲೂಕಿನ ಮಳೆ ಬೆಳೆ ವಾಸ್ತವ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ನಾನು ಕೂಡ ತಾಲೂಕು ಬರಗಾಲ ಎಂದು ಘೋಷಿಸುತ್ತದೆ ಎಂದು ಮೊದಲ ಪಟ್ಟಿಯಲ್ಲಿಯೇ ನಿರೀಕ್ಷೆಯಲ್ಲಿದ್ದೆ. ಆದರೆ ಅದು ಸಾಧ್ಯವಾಗಲಿಲ್ಲ.

ಮತ್ತೆ ತಾಲೂಕಿನ ವಾಸ್ತವ ವರದಿಯನ್ನು ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಿಸಿದ ಇಲಾಖೆಗಳ ಎಲ್ಲ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಒಪ್ಪಿಸಿ, ತಾಲೂಕು ಬರ ಪೀಡಿತ ಎಂದು ಘೋಷಣೆಗೆ ಬೇಕಾಗುವ ಸತ್ಯಾಂಶಗಳನ್ನು ಸರ್ಕಾರಕ್ಕೆ ಮನವರಿಕೆ ಮಾಡಿ ಕೊಡಲಾಗಿದೆ. ಪ್ರತಿನಿತ್ಯವೂ ರೈತರು ಅನುಭವಿಸುತ್ತಿರುವ ತೊಂದರೆ, ತಾಪತ್ರಯಗಳನ್ನು ಬಹಳ ಹತ್ತಿರದಿಂದ ಕಂಡಿದ್ದೇನೆ. ಮಳೆ, ಬೆಳೆ ಇಲ್ಲದೇ ರೈತ ಸಮೂಹ ಎದುರಿಸುತ್ತಿರುವ ಸಮಸ್ಯೆ ಆಲಿಸಿದ್ದೇನೆ. ಈ ವರ್ಷ ಎರಡು, ಮೂರು ಬಾರಿ ಬಿತ್ತನೆ ಮಾಡಿ ತಾಲೂಕಿನ ರೈತರು ಕೈ ಸುಟ್ಟುಕೊಂಡಿದ್ದಾರೆ. ವಸ್ತುಸ್ಥಿತಿ ಕುರಿತು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ಗಮನ ಸೆಳೆದಿದ್ದು, ತಮಗಿರುವ ಮಾಹಿತಿಯ ಪ್ರಕಾರ ಬರುವ ಸೋಮವಾರ ಇಲ್ಲವೇ ಮಂಗಳವಾರದ ಒಳಗಾಗಿ ಹಾನಗಲ್ಲ ತಾಲೂಕು ಬರಪೀಡಿತ ತಾಲೂಕು ಎಂದು ಘೋಷಣೆಯಾಗುವ ಸಾಧ್ಯತೆ ಇದೆ. ಈ ಬಗ್ಗೆ ಯಾವುದೇ ಸಂದೇಹ ರೈತ ಸಮುದಾಯಕ್ಕೆ ಬೇಡ ಎಂದು ಮಾನೆ ಪ್ರತಿಕ್ರಿಯಿಸಿದ್ದಾರೆ.

ರೈತರ ಸಂಕಷ್ಟಗಳಿಗೆ ಸ್ಪಂದಿಸಿ ಸರ್ಕಾರ ಈಗಾಗಲೇ ಶೇ. ೨೫ರಷ್ಟು ಮಧ್ಯಂತರ ಬೆಳೆವಿಮೆ ಪರಿಹಾರ ಬಿಡುಗಡೆಗೆ ಕೂಡ ಆದೇಶ ಹೊರಡಿಸಿದೆ. ಈ ಕುರಿತು ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿ ಆದಷ್ಟು ಬೇಗ ಪರಿಹಾರ ಹಣ ರೈತರ ಖಾತೆಗಳಿಗೆ ವರ್ಗಾಯಿಸಿ ನೆರವಿಗೆ ಧಾವಿಸುವಂತೆ ಒತ್ತಾಯಿಸಿದ್ದೇನೆ ಎಂದು ತಿಳಿಸಿದ್ದಾರೆ.

ರಾಜ್ಯಕ್ಕೆ ಕೇಂದ್ರದ ಬರ ಅಧ್ಯಯನ ತಂಡ ಭೇಟಿ ನೀಡುವ ಒಂದು ದಿನ ಮೊದಲು ವಿಪತ್ತು ನಿಧಿ ನಿರ್ವಹಣೆಯ ಸರ್ಕಾರದ ಕಾರ್ಯದರ್ಶಿಗಳನ್ನು ಭೇಟಿ ಮಾಡಿ, ಚರ್ಚೆ ನಡೆಸಿದ್ದೇನೆ. ಸರ್ಕಾರ ಮತ್ತು ತಾವು ಸದಾ ರೈತರ ಪರ ಇದ್ದೇವೆ. ಮಳೆ ಕೊರತೆಯಿಂದ ಆಗುವ ಎಲ್ಲ ತೊಂದರೆಗಳಿಗೆ ಸಂಬಂಧಿಸಿದ ಇಲಾಖೆಗಳ ಮೂಲಕ ಸಕಾಲಿಕವಾಗಿ ಸ್ಪಂದಿಸಿ, ಸಮಸ್ಯೆ ಪರಿಹರಿಸುವಲ್ಲಿ ಯಾವುದೇ ವಿಳಂಬಕ್ಕೆ ಅವಕಾಶವಿಲ್ಲದಂತೆ ಶ್ರಮವಹಿಸಲಾಗುವುದು ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದ್ದಾರೆ.

Share this article