ಕನ್ನಡಪ್ರಭ ವಾರ್ತೆ ಕುಮಟಾ ಈದ್‌ಮಿಲಾದ ದಿನ ತಾಲೂಕಿನ ಮಿರ್ಜಾನಿನಲ್ಲಿ ಸ್ಥಳೀಯ ಜಮಾತುಲ್ ಮುಸ್ಲಿಮೀನ್ ಸಮಿತಿ ನಡೆಸಿದ ಮೆರವಣಿಗೆ ವೇಳೆ ರಾಷ್ಟ್ರಧ್ವಜದ ಅಶೋಕ ಚಕ್ರದ ಜಾಗದಲ್ಲಿ ಚಂದ್ರ ಮತ್ತು ನಕ್ಷತ್ರದ ಚಿತ್ರ ಬರೆದ ಧ್ವಜ ಹಾರಾಡಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ರಾಷ್ಟ್ರಧ್ವಜಕ್ಕೆ ಅವಮಾನ ಎಸಗಿದ ಹಿನ್ನೆಲೆಯಲ್ಲಿ ಕುಮಟಾ ಪೊಲೀಸರು ಸ್ವಯಂಪ್ರೇರಿತರಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಕುಮಟಾ ಪೊಲೀಸ್ ಸಿಬ್ಬಂದಿ ಪ್ರದೀಪ ಯಶ್ವಂತ ನಾಯಕ ಎಂಬವರು ಸಾಮಾಜಿಕ ಜಾಲತಾಣ ತಪಾಸಣೆ ನಡೆಸುತ್ತಿರುವ ಸಂದರ್ಭದಲ್ಲಿ ಕೇಸರಿ ಸಾಮ್ರಾಟ್ ಎಂಬ ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸೆ. ೨೮ರಂದು ವೀಡಿಯೋವೊಂದನ್ನು ಹರಿಬಿಡಲಾಗಿತ್ತು. ಅದರಲ್ಲಿ ಇದು ಕೇರಳ, ಪಶ್ಚಿಮ ಬಂಗಾಳ ಅಲ್ಲ, ನಮ್ಮ ಉತ್ತರ ಕನ್ನಡದ ಕುಮಟಾದ ಮಿರ್ಜಾನಿನಲ್ಲಿ ನಮ್ಮ ರಾಷ್ಟ್ರ ಬಾವುಟದಲ್ಲಿ ಅಶೋಕ ಚಕ್ರ ಇರುವ ಜಾಗದಲ್ಲಿ ಅರ್ಧಚಂದ್ರ ಬಂದು ಕೂತಿದೆ. ಮುಂದಿನ ದಿನದಲ್ಲಿ ಕೇಸರಿ, ಬಿಳಿ ಬಣ್ಣ ಅಳಿಸಿ ಶಾಶ್ವತ ಹಸಿರು ಬಣ್ಣಕ್ಕೆ ಬದಲಾಯಿಸುತ್ತಾರೆ. ಜಾಗೋ ಭಾರತೀಯ ಜಾಗೋ ಎಂಬ ಸಂದೇಶ ಬರೆದಿದ್ದರು. ಇದರಿಂದಾಗಿ ರಾಷ್ಟ್ರಧ್ವಜಕ್ಕೆ ಅವಮಾನವಾದ ಬಗ್ಗೆ ಮಾಹಿತಿ ಅರಿತ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ಮಿರ್ಜಾನದ ಜಮಾತ್ ಉಲ್ ಮುಸ್ಲಮೀನ್ ಕಮಿಟಿ ನಡೆಸಿದ ಮೆರವಣಿಗೆಯ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿ ಕೇಸರಿ, ಬಿಳಿ, ಹಸಿರು ಬಣ್ಣದ ಬಟ್ಟೆಯಲ್ಲಿ ನಕ್ಷತ್ರ ಮತ್ತು ಅರ್ಧಚಂದ್ರಾಕೃತಿಯ ಚಿತ್ರ ಬರೆದು, ಇದು ಎಲ್ಲರಿಗೂ ಕಾಣುವಂತೆ ಹಾರಿಸಲಾಗಿದೆ. ರಾಷ್ಟ್ರಧ್ವಜದ ಮೇಲೆ ನಕ್ಷತ್ರ ಮತ್ತು ಅರ್ಧ ಚಂದ್ರಾಕೃತಿಯ ಚಿತ್ರದಿಂದ ಕೂಡಿದ ಬಾವುಟ ಹಾರಿಸಿದ್ದು ಸ್ಪಷ್ಟವಾಗಿದ್ದರಿಂದ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸ್ ಸಿಬ್ಬಂದಿ ಪ್ರದೀಪ ಯಶ್ವಂತ ನಾಯಕ ದೂರಿನನ್ವಯ ಪಿಎಸ್‌ಐ ಸುನಿಲ್ ಬಂಡಿವಡ್ಡರ್ ತನಿಖೆ ಕೈಗೆತ್ತಿಕೊಂಡಿದ್ದಾರೆ. ತನಿಖೆಯಿಂದ ಹೆಚ್ಚಿನ ವಿವರ ಹೊರಬರಬೇಕಿದೆ.