ಜನರ ಸಮಸ್ಯೆ ನಿರ್ಲಕ್ಷಿಸಿದರೆ ಶಿಸ್ತು ಕ್ರಮ ನಿಶ್ಚಿತ: ಶಾಸಕ ಶ್ರೀನಿವಾಸ್

KannadaprabhaNewsNetwork |  
Published : Nov 22, 2026, 01:15 AM IST
ಪೋಟೋ 6 : ಸೋಂಪುರ ಹೋಬಳಿ ಮಟ್ಟದ ಪ್ರಜಾಸೇವಾ ಸಭೆಯಲ್ಲಿ ಶಾಸಕ ಎನ್.ಶ್ರೀನಿವಾಸ್ ಅವರು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು | Kannada Prabha

ಸಾರಾಂಶ

ಪ್ರಜಾಸೇವಾ ಆಂದೋಲನ ಸಾರ್ವಜನಿಕರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಒದಗಿಸುವ ವೇದಿಕೆಯಾಗಿದ್ದು, ಅಧಿಕಾರಿಗಳು ಸಮಸ್ಯೆಗಳನ್ನು ಶೀಘ್ರವೇ ಇತ್ಯರ್ಥಪಡಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು. ನಿರ್ಲಕ್ಷ್ಯ ಮಾಡುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಖಚಿತ ಎಂದು ಶಾಸಕ ಎನ್.ಶ್ರೀನಿವಾಸ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ

ಪ್ರಜಾಸೇವಾ ಆಂದೋಲನ ಸಾರ್ವಜನಿಕರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಒದಗಿಸುವ ವೇದಿಕೆಯಾಗಿದ್ದು, ಅಧಿಕಾರಿಗಳು ಸಮಸ್ಯೆಗಳನ್ನು ಶೀಘ್ರವೇ ಇತ್ಯರ್ಥಪಡಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು. ನಿರ್ಲಕ್ಷ್ಯ ಮಾಡುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಖಚಿತ ಎಂದು ಶಾಸಕ ಎನ್.ಶ್ರೀನಿವಾಸ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಸೋಂಪುರ ಹೋಬಳಿ ಮಟ್ಟದ ಪ್ರಜಾಸೇವಾ ಸಭೆಯಲ್ಲಿ ಜನರ ಸಮಸ್ಯೆಗಳ ಮನವಿ ಪತ್ರಗಳನ್ನು ಸ್ವೀಕರಿಸಿ ಮಾತನಾಡಿದ ಶಾಸಕರು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಡವರಿಗೆ ತೊಂದರೆಯಾಗದಂತೆ, ಮನೆಬಾಗಿಲಿಗೆ ಅಥವಾ ಹತ್ತಿರದ ಕೇಂದ್ರಗಳಲ್ಲೇ ಸೇವೆ ಸಿಗುವಂತೆ ಸರಳ ವ್ಯವಸ್ಥೆ ಕಲ್ಪಿಸಲು ಸರ್ಕಾರವೇ ಜನರ ಬಳಿ ಬಂದು ಅಹವಾಲು ಸ್ವೀಕರಿಸಲು ಈ ಪ್ರಜಾಸೇವೆಯನ್ನು ಆರಂಭಿಸಿದೆ. ನಾನು ಶಾಸಕನಾದ ನಂತರ ಪ್ರತಿ 15 ದಿನಗಳಿಗೊಮ್ಮೆ ಜನಸ್ಪಂದನ ಸಭೆ ಆಯೋಜಿಸಿ ಸಮಸ್ಯೆ ಆಲಿಸುತ್ತಿದ್ದೆನು. ಜನರ ಸಮಸ್ಯೆಗಳಿಗೆ ನಿಗದಿತ ಸಮಯದೊಳಗೆ ಪರಿಹಾರ ಸಿಗುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ತಾಲೂಕು ಮಟ್ಟದ ಸಭೆಗಳ ನಂತರ ಹೋಬಳಿಮಟ್ಟದಲ್ಲೂ ಜನಸ್ಪಂದನ ಸಭೆಗಳನ್ನು ಆಯೋಜಿಸಲಾಗುವುದು. ನಂತರ ತಾಲೂಕಿನ 27 ಗ್ರಾಪಂಗಳಲ್ಲಿ ಸಭೆ ಆಯೋಜಿಸಿ ಖುದ್ದು ನಾನೇ ಸಾರ್ವಜನಿಕರಿಂದ ಸಮಸ್ಯೆ ಆಲಿಸಿ ಪರಿಹರಿಸುವ ಕೆಲಸಕ್ಕೆ ಮುಂದಾಗುತ್ತೇನೆ. ಹಿಂದಿನ ಸಭೆಗಳಲ್ಲಿ ಬಾಕಿ ಉಳಿದಿರುವ ಸಮಸ್ಯೆಗಳನ್ನು ಮುಂದಿನ ಸಭೆಗಳಲ್ಲಿ ಪರಾಮರ್ಶಿಸಿ ಪರಿಹರಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದರು.

ತಹಸೀಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್ ಮಾತನಾಡಿ, ಇಂದಿನ ಪ್ರಜಾಸೇವಾಸಭೆಯಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ 77 ಅರ್ಜಿಗಳು ಬಂದಿದ್ದು, ಸಾರ್ವಜನಿಕರು ತರುವ ಎಲ್ಲಾ ರೀತಿಯ ಕುಂದುಕೊರತೆ ಅರ್ಜಿಗಳನ್ನು ಶಾಸಕರು ಆಲಿಸಿದ್ದಾರೆ. ಈ ಅರ್ಜಿಗಳನ್ನು ಸರ್ಕಾರದ ಐಪಿಜಿಆರ್‍ಎಸ್ ಜಾಲತಾಣದಲ್ಲಿ ದಾಖಲಿಸಿ, ಅರ್ಜಿದಾರರಿಗೆ ತಕ್ಷಣವೇ ರಸೀದಿ ಅಥವಾ ಸ್ವೀಕೃತಿ ನೀಡಲಾಗಿದ್ದು, ಸಾಧ್ಯವಾದಷ್ಟು ಅರ್ಜಿಗಳಿಗೆ ಸ್ಥಳದಲ್ಲೇ ವಿಲೇವಾರಿ ಮಾಡಿ ಪರಿಹಾರ ಒದಗಿಸಲಾಗುತ್ತದೆ ಎಂದು ಹೇಳಿದರು.ಬೆಸ್ಕಾಂ ಎಇಗೆ ತರಾಟೆ:

ರೈತರ, ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂಬ ಸಾರ್ವಜನಿಕರ ಆರೋಪದ ಮೇಲೆ ಸಭೆಯಲ್ಲಿ ಹಾಜರಿದ್ದ ಬೆಸ್ಕಾಂ ಎಇ ಸತೀಶ್ ಅವರನ್ನು ಶಾಸಕ ಎನ್.ಶ್ರೀನಿವಾಸ್ ತರಾಟೆಗೆ ತೆಗೆದುಕೊಂಡಿದ್ದಲ್ಲದೆ ಕೂಡಲೇ ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಕೆಲಸ ಮಾಡಬಾರದು, ಬೇರೆಡೆ ವರ್ಗಾವಣೆ ಮಾಡಿ ಎಂದು ಬೆಸ್ಕಾಂ ಎಇಇ ಅವರಿಗೆ ಸೂಚಿಸಿದರು.

ಇದೇ ಸಂದರ್ಭದಲ್ಲಿ ರೈತರೊಬ್ಬರು ತಮ್ಮ ಜಮೀನಿಗೆ ಸರ್ವೇ ಮಾಡಲು ಅಧಿಕಾರಿಗಳು ಲಂಚ ಕೇಳುತ್ತಿದ್ದಾರೆ ಎಂದು ಶಾಸಕರ ಗಮನಕ್ಕೆ ತಂದಾಗ ಯಾವುದೇ ಕಾರಣಕ್ಕೂ ಲಂಚ ನೀಡಬೇಡಿ, ನಿಮ್ಮ ಬಳಿ ಲಂಚ ಕೇಳಿದ ಅಧಿಕಾರಿಯನ್ನು ಕರೆದುಕೊಂಡು ಬನ್ನಿ, ಸಾಬೀತಾದರೆ ಕೂಡಲೇ ಸಿಎಂ ಗಮನಕ್ಕೆ ತಂದು ಸಸ್ಪೆಂಡ್ ಮಾಡಿಸುತ್ತೇನೆ ಎಂದು ತಿಳಿಸಿದರು.

ಸಭೆಯಲ್ಲಿ ಕುಡಿಯವ ನೀರಿನ ಸಮಸ್ಯೆ, ಜಮೀನು ಖಾತೆ, ಪೋಡಿ, ಹದ್ದುಬಸ್ತು, ಹಕ್ಕುಪತ್ರ, ನಿವೇಶನ ನೀಡುವಂತೆ ಮನವಿ, ಕಸದ ಸಮಸ್ಯೆಯ ಬಗ್ಗೆ ಸಾರ್ವಜನಿಕರು ಶಾಸಕರಿಗೆ ಅರ್ಜಿಗಳನ್ನು ಸಲ್ಲಿಸಿ ಸಮಸ್ಯೆಗಳನ್ನು ಬಗೆಹರಿಸುವಂತೆ ಮನವಿ ಮಾಡಿದರು.

ಸಭೆಯಲ್ಲಿ ತಾಪಂ ಇಒ ಡಾ.ಬಿಂದು, ನಗರಸಭೆ ಅಧ್ಯಕ್ಷ ಗಣೇಶ್, ಸದಸ್ಯ ಪ್ರದೀಪ್, ಕೆ.ಕೆ. ಕೃಷ್ಣಪ್ಪ, ಎನ್‌ಪಿಎ ಮಾಜಿ ಅಧ್ಯಕ್ಷರಾದ ನಾರಾಯಣಗೌಡ, ಎಂ.ಕೆ. ನಾಗರಾಜು, ಟಿಎಪಿಸಿಎಂಎಸ್ ಅಧ್ಯಕ್ಷ ಹನುಮಂತರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಭಾಸ್ಕರ್, ನಾಗರುದ್ರ ಶರ್ಮಾ, ಕಾಚನಹಳ್ಳಿ ಮನು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜಕೀಯ ವ್ಯಕ್ತಿಗಳು, ಅಧಿಕಾರಿಗಳ ಹಸ್ತಕ್ಷೇಪದಿಂದ ಸಹಕಾರ ಸಂಘಗಳು ಹಾಳು: ಎಚ್.ಡಿ.ಕುಮಾರಸ್ವಾಮಿ
ARAI ಸೆಂಟರ್ ಸ್ಥಾಪನೆಗೆ ಭೂಮಿ ಕೊಡದೆ ಸತಾಯಿಸುತ್ತಿರುವ ಸರ್ಕಾರ: ಕೇಂದ್ರ ಸಚಿವ ಎಚ್ಡಿಕೆ ಕಿಡಿ