ಅರಸೀಕೆರೆ: ವಿಶ್ವಗುರು ಬಸವಣ್ಣನವರ ವ್ಯಕ್ತಿತ್ವ ಹಾಗೂ ಮಾನವೀಯ ಮೌಲ್ಯಗಳಿಗೆ ಧಕ್ಕೆ ತರುವಂತಹ ಹೇಳಿಕೆಗಳನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಬಸವಣ್ಣನವರ ಕುರಿತು ಅನಿವಾಸಿ ಭಾರತೀಯ ರವಿ ಹಂಜ್ ಅವರು ಅವಹೇಳನಕಾರಿ ಹಾಗೂ ಅಪಹಾಸ್ಯಕರವಾಗಿ ಮಾತನಾಡಿರುವುದು ತೀವ್ರ ಖಂಡನೀಯ ಎಂದು ಮಾಡಾಳು ನಿರಂಜನ ಪೀಠದ ಶ್ರೀ ರುದ್ರಮುನಿ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.ಶನಿವಾರ ನಿರಂಜನ ಪೀಠದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವಣ್ಣನವರು ಒಂದು ಜಾತಿ, ಧರ್ಮ ಅಥವಾ ಸಮುದಾಯಕ್ಕೆ ಸೀಮಿತವಾದ ವ್ಯಕ್ತಿಯಲ್ಲ. ಇಡೀ ಮನುಕುಲಕ್ಕೆ ಸಮಾನತೆ, ಸಾಮಾಜಿಕ ನ್ಯಾಯ, ಕಾಯಕದ ಮಹತ್ವ ಹಾಗೂ ಸ್ವಾಭಿಮಾನದ ಬದುಕಿನ ಸಂದೇಶ ಸಾರಿದ ಮಹಾನ್ ಮಾನವತಾವಾದಿ ಎಂದು ಬಣ್ಣಿಸಿದರು.12ನೇ ಶತಮಾನದಲ್ಲಿಯೇ ಸಮಾಜದಲ್ಲಿದ್ದ ಅಸಮಾನತೆ ಮತ್ತು ಜಾತಿ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿ ಸಮ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದ ಬಸವಣ್ಣನವರ ಆದರ್ಶಗಳು ಇಂದಿಗೂ ಪ್ರಸ್ತುತವಾಗಿವೆ. ಇಂತಹ ಮಹಾನ್ ಚೇತನದ ಕುರಿತು ಹಗುರವಾಗಿ ಮಾತನಾಡುವುದು ಸಮಾಜದ ಭಾವನೆಗಳಿಗೆ ನೋವುಂಟು ಮಾಡುವುದಲ್ಲದೆ, ಅವರ ತತ್ವಾದರ್ಶಗಳಿಗೆ ಮಾಡುವ ಅಪಮಾನವಾಗಿದೆ ಎಂದು ಹೇಳಿದರು.ಬಸವಣ್ಣನವರ ಕುರಿತು ಪ್ರಕಟವಾಗಿರುವ ವಿವಾದಿತ ‘ಬಸವ ಮಂಟಪ’ ಕೃತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡಿರುವ ಕ್ರಮ ಸ್ವಾಗತಾರ್ಹವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರವಿ ಹಂಜ್ ಅವರ ವಿರುದ್ಧ ಸರ್ಕಾರ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಎಂದು ಶ್ರೀಗಳು ಒತ್ತಾಯಿಸಿದರು.