ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಡಿಎವಿ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವವು ಶನಿವಾರ ಮಾನಸ ಗಂಗೋತ್ರಿ ಬಯಲು ರಂಗಮಂದಿರದಲ್ಲಿ ಅತ್ಯಂತ ವರ್ಣರಂಜಿತವಾಗಿ ಜರುಗಿತು.ಸ್ವಾಗತ ನೃತ್ಯ, ರೆಟ್ರೋ ಟು ಮೆಟ್ರೋ, ಜಗುಲ್ ಬಂಧಿ, ಕಾಂತಾರ ಥೀಮ್, ಶಿವ ಫ್ಯೂಷನ್, ಝೀ ಸರಿಗಮಪ ಖ್ಯಾತಿಯ ಹಾಗೂ ಇದೇ ಶಾಲೆಯ ವಿದ್ಯಾರ್ಥಿನಿಯಾದ ಲಹರಿ ಅವರ ಗಾಯನ, ಶಾರುಖ್ ಖಾನ್ ಹಿಟ್ಸ್, ರಾಮನಾಮ, ರೈನ್ ಥೀಮ್, ನೃತ್ಯ ನಾಟಕ, ಬಾಲಿವುಡ್ ಬಾದ್ ಶಾ, ವೈರಲ್ ಹಿಟ್ಸ್, ಭಾರತದ ಧರ್ಮಗಳು, ಜ್ವಾಲಾ ಸಾಂಗ್- ಹೀಗೆ ಒಂದಕ್ಕಿಂತ ಒಂದು ಕಾರ್ಯಕ್ರಮಗಳು ವಿಭಿನ್ನವಾಗಿ, ವರ್ಣರಂಜಿತವಾಗಿ ಮೂಡಿ ಬಂದವು. ಶಿವ- ಪಾರ್ವತಿ- ಗಣಪತಿ, ಸೂರ್ಯ- ಚಂದ್ರ ಕುರಿತ ಸ್ವಾಗತ ನೃತ್ಯವಂತೂ ಅತ್ಯಂತ ಅದ್ಘುತವಾಗಿ ಮೂಡಿ ಬಂದಿತು. ಒಂದು ಸಾವಿರಕ್ಕೂ ಅಧಿಕ ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆ ಒದಗಿಸಿದ್ದು ವಿಶೇಷ.
ವಾರ್ಷಿಕೋತ್ಸವ ಉದ್ಘಾಟಿಸಿದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಅತ್ಯಂತ ಶಿಸ್ತು, ಏಕಾಗ್ರತೆಯಿಂದ ಅಧ್ಯಯನ ಮಾಡಿದರೆ ಏನನ್ನಾದರೂ ಬೇಕಾದರೂ ಸಾಧಿಸಬಹುದು ಎಂದರು.ಇವತ್ತು ವಿದ್ಯೆಗೆ ತುಂಬ ಮಹತ್ವವಿದೆ. ಆದ್ದರಿಂದ ಪ್ರತಿಯೊಬ್ಬರೂ ಚೆನ್ನಾಗಿ ಓದಬೇಕು. ಕೇವಲ ಎಂಜಿನಿಯರಿಂಗ್, ವೈದ್ಯಕೀಯ ಮಾತ್ರವಲ್ಲದೇ ಮೂಲವಿಜ್ಞಾನ ಸೇರಿದಂತೆ ಇತರೆ ವಿಷಯಗಳನ್ನು ಕಲಿಯಲು ಮುಂದಾಗಬೇಕು ಎಂದು ಅವರು ಸಲಹೆ ಮಾಡಿದರು.
ಈ ಶಾಲೆಯಲ್ಲಿ ಪಠ್ಯದ ಜೊತೆಗೆ ಸಂಗೀತ, ನೃತ್ಯ, ಯೋಗ, ಕರಾಟೆ, ಬಾಸ್ಕೆಟ್ ಬಾಲ್, ಚದುರಂಗ, ಥ್ರೋಬಾಲ್, ಕ್ರಿಕೆಟ್, ಶಟಲ್ ಬ್ಯಾಡ್ಮಿಂಟನ್, ವಾಲಿಬಾಲ್ ಮತ್ತಿತರ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡಿರುವುದು ಶ್ಲಾಘನೀಯ ಎಂದರು.ಸಂಸ್ಥೆಯ ಅಧ್ಯಕ್ಷ ಎನ್. ಸಚ್ಚಿದಾನಂದಮೂರ್ತಿ ಮಾತನಾಡಿ,. 2003 ರಲ್ಲಿ ಕೇವಲ 75 ವಿದ್ಯಾರ್ಥಿಗಳು, 15 ಸಿಬ್ಬಂದಿಯೊಂದಿಗೆ ಪ್ರಾರಂಭವಾದ ಶಾಲೆಯು ಈಗ 2000 ವಿದ್ಯ್ರಾಥಿಗಳು ಹಾಗೂ 150 ಸಿಬ್ಬಂದಿ ವರ್ಗವನ್ನು ಹೊಂದಿದೆ. ಪೂರ್ವ ಪ್ರಾಥಮಿಕ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ನೀಡುತ್ತಿದೆ. ಸಿಬಿಎಸ್‌ಇ ಹತ್ತನೇ ತರಗತಿಯಲ್ಲಿ ಶೇ.100 ರಷ್ಟು ಫಲಿತಾಂಶ ಪಡೆಯುತ್ತಿದೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ಆರ್. ಆನಂದ್ ಸ್ವಾಗತಿಸಿದರು. ಸಿಇಒ ಎಂ.ಎ. ಜಯಶ್ರೀ ವಂದಿಸಿದರು. ಪ್ರಾಂಶುಪಾಲೆ ಕಾವ್ಯಶ್ರೀ ಬಸಪ್ಪ, ಉಪ ಪ್ರಾಂಶುಪಾಲೆ ಟಿ.ಎಂ.ಕಾವ್ಯಾ ಇದ್ದರು.ಪೂರ್ವಕುಂಭ ಸ್ವಾಗತ, ಸ್ವಾಮಿ ದಯಾನಂದ ಸರಸ್ವತಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯ ನಂತರ ಉನ್ನತ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಹಾಗೂ ವಿಷಯಗಳಲ್ಲಿ ಶೇ.ನೂರಕ್ಕೆ ನೂರು ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.