ಹೊನ್ನಾವರ: ತಾಲೂಕಿನ ಕೊಡಾಣಿ ಗ್ರಾಪಂ ವ್ಯಾಪ್ತಿಯ ಅನಿಲಗೋಡನಿಂದ ಹೆಗ್ಗಾರ- ಬಳ್ಕೂರು ಸಂಪರ್ಕ ಕಲ್ಪಿಸುವ ತೂಗೂ ಸೇತುವೆಯ ರೋಪ್ ತುಂಡಾಗಿ ಸೇತುವೆ ಒರೆಯಾಗಿ ಸಂಪರ್ಕ ಕಡಿತಗೊಂಡಿದ್ದು, ಘಟನೆಯಲ್ಲಿ ಅದೃಷ್ಟವಷಾತ್ ತಾಯಿ- ಮಗು ಪಾರಾಗಿದ್ದು, ಭಾರಿ ಅನಾಹುತ ತಪ್ಪಿದಂತಾಗಿದೆ.
ನಿತ್ಯ ವಿದ್ಯಾರ್ಥಿಗಳು, ಸಾರ್ವಜನಿಕರು ಹೆಚ್ಚಿನ ಸಂಖೆಯಲ್ಲಿ ಹೆಗ್ಗಾರ ಮೂಲಕ ಸಂಚರಿಸುತ್ತಿದ್ದರು. ಶಾಲೆ ರಜೆ ಇರುವ ಹಿನ್ನೆಲೆಯಲ್ಲಿ ಜತೆಗೆ ಜನಸಂಚಾರ ಕಡಿಮೆ ಇದ್ದ ಕಾರಣ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ. ಈ ಸೇತುವೆ ಸಂಪರ್ಕ ಕಡಿತಗೊಂಡ ಪರಿಣಾಮ ಸಾರ್ವಜನಿಕರು ಒಂದೂರಿನಿಂದ ಮತ್ತೊಂದು ಊರಿಗೆ ಬೇರೆ ಮಾರ್ಗದಿಂದ ಸುಮಾರು 5 ಕಿಮೀ ನಡೆದು ಸಂಚರಿಸುವ ಅನಿವಾರ್ಯತೆ ಎದುರಾಗಿದೆ.ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಬಳ್ಕೂರು ಗ್ರಾಪಂ ಸದಸ್ಯ ಗಣಪತಿ ನಾಯ್ಕ ಬಿ.ಟಿ., ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಕೊಡಾಣಿ ಗ್ರಾಮ ಪಂಚಾಯಿತಿ ಅಧ್ಯಕ್ಷ ತಿಮ್ಮಪ್ಪ ನಾಯ್ಕ ಅಧಿಕಾರಿಗಳ ಜತೆ ಸ್ಥಳದಲ್ಲಿ ಉಪಸ್ಥಿತರಿದ್ದು ಪರ್ಯಾಯ ವ್ಯವಸ್ಥೆಯ ಕುರಿತು ಚರ್ಚಿಸಿದರು.