ಗದಗ: ಕೈಗಾರಿಕೋದ್ಯಮಿಗಳಿಗೆ ವಿದ್ಯುತ್ ಬಿಲ್‌ನಲ್ಲಿ ಶೇ. 9ರಷ್ಟು ರಿಯಾಯಿತಿ ಇರುತ್ತದೆ. ಕೈಗಾರಿಕೋದ್ಯಮಿಗಳು ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯಿಂದ ಅನುಮೋದನೆ ಪಡೆದುಕೊಂಡರೆ ಈ ರಿಯಾಯಿತಿ ನೀಡಬಹುದು ಎಂದು ಹೆಸ್ಕಾಂ ಅಭಿಯಂತರ ರಾಜೇಶ ಕಲ್ಯಾಣಶೆಟ್ಟಿ ಹೇಳಿದರು.
ಗ್ರಾಮೀಣ ಭಾಗದಲ್ಲಿ ಕೈಗಾರಿಕೆ ಸ್ಥಾಪನೆ ಮಾಡಿದರೆ ಎಲ್‌ಟಿ-5 ದರಪಟ್ಟಿ ಇದ್ದರೆ 30 ಪೈಸೆ ರಿಯಾಯಿತಿ ಇರುತ್ತದೆ. ಉದ್ದಿಮೆದಾರರು ಹಂಗಾಮು ದರಪಟ್ಟಿ ಬಯಸಿದಲ್ಲಿ 6 ತಿಂಗಳದ ವರೆಗೆ ಸರಾಸರಿ ಪ್ರಕಾರ ಶೇ. 25ರಷ್ಟು ಬಳಕೆ ಇದ್ದಲ್ಲಿ ಸಿಜನಲ್ ಟ್ಯಾರಿಪ್ ಪಡೆಯಬಹುದು. ಒಂದು ವೇಳೆ ಹೆಚ್ಚಿಗೆ ಬಳಕೆಯಾದಲ್ಲಿ ದರಪಟ್ಟಿಯ ರಿಯಾಯಿತಿ ಸಿಗುವುದಿಲ್ಲ. ಉದ್ಯಮದಾರರು ಎಲ್.ಟಿ.೦.85 ಹಾಗೂ ಎಚ್.ಟಿ. ಪವರ್ ಪೆಕ್ಟರ್ 0.9 ಕ್ಯಾಪಸ್ಟರ್ ಅಳವಡಿಸಿದಲ್ಲಿ ಹೆಚ್ಚಿನ ಬಿಲ್ ಬರುವುದಿಲ್ಲ ಮತ್ತು ವಿದ್ಯುತ್ ಕೂಡಾ ಸೋರಿಕೆಯಾಗುವುದಿಲ್ಲ. 11 ಕೆ.ವಿ. ಲೈನ್ ಸಂಪರ್ಕಕ್ಕೆ 110 ಕೆ.ವಿ.ಎ. ಸ್ಟೇಶನ್ ಓಲ್ಟೇಜ್ ರೆಗ್ಯೂಲೇಶನ್ ನಿರ್ವಹಣೆ ಹಾಗೂ ವೋಲ್ಟೇಜ್ ಡ್ರಾಪ್ ಆಗದಂತೆ ಪ್ರತಿಯೊಬ್ಬ ಕೈಗಾರಿಕೋದ್ಯಮಿಗಳು ನಿರ್ವಹಣೆ ಮಾಡಬೇಕು ಎಂದರು.
ಕೈಗಾರಿಕೋದ್ಯಮಿಗಳು ತಮ್ಮ ಉದ್ಯಮದಲ್ಲಿ ದಿನ ಬಳಕೆಯ ದಿನ ರಾತ್ರಿಯಲ್ಲಿ 10ರಿಂದ ಬೆಳಗ್ಗೆ 6ರ ವರೆಗೆ ಹೆಸ್ಕಾಂದಿಂದ ಮಾನ್ಯತೆ ಪಡೆದುಕೊಂಡು ವಿದ್ಯುತ್ ಬಳಕೆ ಮಾಡಿಕೊಂಡಲ್ಲಿ ಶೇ. 1ರಷ್ಟು ವಿದ್ಯುತ್ ಬಿಲ್‌ನಲ್ಲಿ ಕಡಿಮೆಯಾಗುತ್ತದೆ. ಉದ್ಯಮದಾರರು ಸೋಲಾರ್ ಬಳಕೆ ಮಾಡಿಕೊಳ್ಳುವುದರಿಂದ ಹೆಚ್ಚಿನ ಅನುಕೂಲವಾಗುತ್ತದೆ ಎಂದು ವಿವರಿಸಿದರು.ಸಂಸ್ಥೆಯ ಅಧ್ಯಕ್ಷ ತಾತನಗೌಡ ಎಸ್. ಪಾಟೀಲ ಮಾತನಾಡಿ, ಕೈಗಾರಿಕೋದ್ಯಮಿಗಳಿಗೆ ಎಷ್ಟು ಅವಶ್ಯ ವಿದ್ಯುತ್ ಬಳಕೆ ಆಗುತ್ತದೆಯೋ ಅಷ್ಟೇ ಬಳಕೆ ಮಾಡಿಕೊಳ್ಳಬೇಕು ಮತ್ತು ತಮ್ಮ ಟ್ರಾನ್ಸಫಾರ್ಮರ್‌ಗಳಿಗೆ ಕ್ಯಾಪಸ್ಟರ್ ಹಾಕಿಕೊಳ್ಳುವುದರಿಂದ ವಿದ್ಯುತ್ ಉಳಿತಾಯ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ದತ್ತಿ ಉಪನ್ಯಾಸ ಉಪ ಸಮಿತಿ ಚೇರ್‌ಮನ್ ಚಂದ್ರು ಬಾಳಿಹಳ್ಳಿಮಠ ಮಾತನಾಡಿದರು. ಹೆಸ್ಕಾಂ ಸಹಾಯಕ ಎಂಜಿನಿಯರ್ ಸಾಗರ, ಶಾಖಾಧಿಕಾರಿ ಮಾಂಡ್ರೆ, ಅಶೋಕಗೌಡ ಕೆ. ಪಾಟೀಲ ಇದ್ದರು.ಸಿದ್ದನಗೌಡ ಎಸ್. ಪಾಟೀಲ ಸ್ವಾಗತಿಸಿದರು. ಅಶೋಕಗೌಡ ಕೆ. ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಎಸ್.ಆರ್. ನಾಲತ್ವಾಡಮಠ ವಂದಿಸಿದರು.