ಮೌಢ್ಯ ದೂರ ಮಾಡಲು ಆಷಾಢದಲ್ಲಿ ಪ್ರವಚನ

KannadaprabhaNewsNetwork |  
Published : Aug 09, 2026, 02:30 AM IST
8ಎಂಡಿಜಿ1, ಮುಂಡರಗಿ ತೋಂಟದಾರ್ಯ ಮಠದ ಚಿತ್ರ.8ಎಂಡಿಜಿ1ಎ, ಜ.ನಿಜಗುಣಪ್ರಭು ತೋಂಟದಾರ್ಯ ಸ್ವಾಮಿಜಿ ಚಿತ್ರ. 8ಎಂಡಿಜಿ1ಬಿ, ಮುಂಡರಗಿ ತೋಂಟದಾರ್ಯ ಮಠದಲ್ಲಿ ಪ್ರದರ್ಶನಗೊಂಡ ಅಕ್ಕಮಹಾದೇವಿ ನಾಟಕದ ದೃಶ್ಯ. | Kannada Prabha

ಸಾರಾಂಶ

12ನೇ ಶತಮಾನದ ಬಸವಣ್ಣನವರ ನಂತರದ ಕಾಲಘಟ್ಟದಲ್ಲಿ ಕಳೆಗುಂದಿದ್ದ ವಚನ ಸಾಹಿತ್ಯ ಮತ್ತು ಶರಣ ಸಂಸ್ಕೃತಿಯನ್ನು 15ನೇ ಶತಮಾನದಲ್ಲಿ ಪುನರುಜ್ಜೀವನಗೊಳಿಸಿದ ಶ್ರೇಷ್ಠ ಶರಣರಲ್ಲಿ ಎಡೆಯೂರು ತೋಂಟದ ಸಿದ್ಧಲಿಂಗೇಶ್ವರರು ಪ್ರಮುಖರು.

ಶರಣು ಸೊಲಗಿ

ಮುಂಡರಗಿ: ಶ್ರಾವಣ ಶ್ರೇಷ್ಠ, ಆಷಾಢ ಮಾಸ ಕನಿಷ್ಠ ಎನ್ನುವ ಜನರಲ್ಲಿನ ಮೂಢನಂಬಿಕೆಯನ್ನು ಹೊಡೆದೋಡಿಸಲು ಬಹುವರ್ಷಗಳ ಹಿಂದಿನಿಂದಲೇ ಗದುಗಿನ ಡಾ. ತೋಂಟದ ಸಿದ್ದಲಿಂಗ ಸ್ವಾಮೀಜಿಯವರು ಮುಂಡರಗಿಯ ತೋಂಟದಾರ್ಯ ಮಠದಲ್ಲಿ ಆಷಾಢ ಮಾಸದಲ್ಲಿ ಪ್ರವಚನಕ್ಕೆ ಚಾಲನೆ ನೀಡಿದ್ದರು. ಅದನ್ನು ಈಗಿನ ಪೀಠಾಧಿಪತಿ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಮುಂದುವರಿಸಿಕೊಂಡು ಬಂದಿದ್ದಾರೆ.

ಮತೀಯ ಕಂದಾಚಾರಗಳನ್ನು ಬದಿಗೆ ಸರಿಸುತ್ತ ವೈಚಾರಿಕ ಹಾಗೂ ವೈಜ್ಞಾನಿಕ ಪಥದಲ್ಲಿ ಸಾಗಿದ್ದ ಕನ್ನಡದ ಜಗದ್ಗುರು ಎಂದೇ ಖ್ಯಾತರಾಗಿದ್ದ ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿಯವರು ಯಾವುದೇ ಜಾತಿ- ಮತ- ಪಂಥ ಭೇದವಿಲ್ಲದೇ ಎಲ್ಲ ಧರ್ಮೀಯರಿಗಾಗಿ ಮಠವನ್ನು ತೆರೆದಿಟ್ಟಿದ್ದರು. ಅಂತದ್ದೇ ಮನಸ್ಸಿನ ನಾಡಿನ ಹಾಗೂ ದೇಶ- ವಿದೇಶಗಳಲ್ಲಿ ಬಸವತತ್ವ ಪ್ರಚಾರಕರಾಗಿ ಹೆಸರುವಾಸಿಯಾಗಿದ್ದ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿಯವರನ್ನು ಮುಂಡರಗಿ ತೋಂಟದಾರ್ಯ ಮಠಕ್ಕೆ ಪೀಠಾಧಿಪತಿ ಮಾಡಿದರು. ಇದೀಗ ಅವರೂ ಸಿದ್ದಲಿಂಗ ಶ್ರೀಗಳ ಹಾದಿಯಲ್ಲಿಯೇ ಮುನ್ನಡೆಯುತ್ತಿದ್ದಾರೆ.

ಬಸವತತ್ವದ ಅಡಿಯಲ್ಲಿ ನಡೆಯುತ್ತಿರುವ ಪ್ರತಿವರ್ಷದ ಆಷಾಢ ಮಾಸದ ಪ್ರವಚನ ಕಾರ್ಯಕ್ರಮಕ್ಕೆ ವಿವಿಧ ಜಾತಿ, ಜನಾಂಗದವರನ್ನು ಪ್ರವಚನ ಕಮಿಟಿ ಅಧ್ಯಕ್ಷರನ್ನಾಗಿ ಮಾಡುತ್ತಾ ಕಾರ್ಯಕ್ರಮವನ್ನು ರೂಪಿಸುತ್ತಾ ಯಶಸ್ವಿಗೊಳಿಸುತ್ತಾ ಬಂದಿದ್ದಾರೆ. ಪ್ರಸ್ತುತವರ್ಷ ಕ್ರಿಯಾಶೀಲ ಹಿರಿಯ ಪತ್ರಕರ್ತ ಸಿ.ಕೆ. ಗಣಪ್ಪನವರ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಪ್ರವಚನ ಕಾರ್ಯಕ್ರಮಕ್ಕೆ ಪ್ರತಿವರ್ಷ ನಾಡಿನ ಹೆಸರಾಂತ ಬಸವತತ್ವದ ಪ್ರವಚನಕಾರರು ಬಂದು ಪ್ರವಚನ ಮಾಡಿ ಹೋಗಿದ್ದಾರೆ. ಪ್ರಸ್ತುತ ವರ್ಷ ಬಸವ- ಬೆಳವಿಯ ಚರಂತೇಶ್ವರ ಮಠದ ಶರಣಬಸವ ದೇವರು ಜು. 26ರಿಂದ ಆ. 9ರ ವರೆಗೆ ಎಡೆಯೂರು ತೋಂಟದ ಸಿದ್ದಲಿಂಗೇಶ್ವರ ಸ್ವಾಮಿಗಳ ಚರಿತಾಮೃತ ಪ್ರವಚನ ಜರುಗುತ್ತಿದೆ.

12ನೇ ಶತಮಾನದ ಬಸವಣ್ಣನವರ ನಂತರದ ಕಾಲಘಟ್ಟದಲ್ಲಿ ಕಳೆಗುಂದಿದ್ದ ವಚನ ಸಾಹಿತ್ಯ ಮತ್ತು ಶರಣ ಸಂಸ್ಕೃತಿಯನ್ನು 15ನೇ ಶತಮಾನದಲ್ಲಿ ಪುನರುಜ್ಜೀವನಗೊಳಿಸಿದ ಶ್ರೇಷ್ಠ ಶರಣರಲ್ಲಿ ಎಡೆಯೂರು ತೋಂಟದ ಸಿದ್ಧಲಿಂಗೇಶ್ವರರು ಪ್ರಮುಖರು. ಅಂತಹ ಶರಣರ‌ ಚರಿತಾಮೃತವನ್ನು ಸುಮಾರು 14 ದಿನಗಳ ಕಾಲ ಶ್ರೀಮಠದ ಆವರಣದಲ್ಲಿ‌ ಸೇರುತ್ತಿದ್ದ ಜನಸ್ತೋಮಕ್ಕೆ ತಲುಪಿಸುವ ಕಾರ್ಯವನ್ನು ಶರಣಬಸವ ದೇವರು ತಮ್ಮ‌ ಪ್ರವಚನದ ಮೂಲಕ ಮಾಡಿದ್ದಾರೆ.

ಪ್ರವಚನದ ಅಂಗವಾಗಿ ಆ. 2ರಂದು ಪದ್ಮಶ್ರೀ ಎಂ. ವೆಂಕಟೇಶ ಕುಮಾರ ಅವರಿಂದ ಹಿಂದುಸ್ತಾನಿ ಹಾಗೂ ವಚನ ಗಾಯನ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅಂದಿನ ಕಾರ್ಯಕ್ರಮವನ್ನು‌ ವೀಕ್ಷಿಸಲು ಕೇವಲ ಪಟ್ಟಣದ ಜನತೆ ಮಾತ್ತವಲ್ಲ, ಇಡೀ ತಾಲೂಕಿ‌ನ ವಿವಿಧ ಗ್ರಾಮಗಳಿಂದ ಜನ ಆಗಮಿಸಿ‌ ಸಂಗೀತದ ಸವಿಯನುಂಡರು. ‌‌‌‌‌‌ಆ. 6‌ರಂದು ಪ್ರವಚನದ ವೇದಿಕೆಯಲ್ಲಿಯೇ ಪತ್ರಿಕಾ ದಿನಾಚರಣೆ ಮಾಡುವ ಮೂಲಕ ತಾಲೂಕಿನ ಎಲ್ಲ ಕಾರ್ಯನಿರತ ಪತ್ರಕರ್ತರಿಗೆ ಶ್ರೀಗಳು ಸನ್ಮಾನಿಸಿದರು.

ಅದೇ ದಿನ ಗದುಗಿನ ಕುಮಾರೇಶ್ವರ ಕೃಪಾ ಪೋಷಿತ ಪಂ. ಪಂಚಾಕ್ಷರಿ ಗವಾಯಿಗಳ ನಾಟ್ಯಸಂಘದಿಂದ ಶಿವಶರಣೆ‌ ಅಕ್ಕಮಹಾದೇವಿ ನಾಟಕ ಪ್ರದರ್ಶನಗೊಂಡಿತು. ಅಂದು ಸೇರಿದ್ದ ಸಾವಿರಾರು ಜ‌ನ ನಾಟಕ ವೀಕ್ಷಿಸುವ ಮೂಲಕ ಮೊಟ್ಟ ಮೊದಲ ಮಹಿಳಾ ವಚನಕಾರ್ತಿ ಅಕ್ಕಮಹಾದೇವಿಯ‌ ಸಂಪೂರ್ಣ ಮಾಹಿತಿಯನ್ನು ನಾಟಕದ ಮೂಲಕ ವೀಕ್ಷಿಸಿ ಸಂತಸಪಟ್ಟರು. ಅಲ್ಲದೇ ಪ್ರವಚನ ಕಾರ್ಯಕ್ರಮದಲ್ಲಿ ಶ್ರೀಮಠದಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ, ದಾನಿಗಳಿಗೆ ಸನ್ಮಾನಿಸಿ ಗೌರವಿಸುವ ಕಾರ್ಯ ನಿರಂತರವಾಗಿ ನಡೆದುಕೊಂಡು ಬಂದಿದೆ.

ತತ್ವನಿಷ್ಠದ ಮಠ: ತೋಂಟದಾರ್ಯ ಮಠ 12ನೇ ಶತಮಾನದ ಅನುಭವ ಮಂಟಪದ ತತ್ವನಿಷ್ಠದ ಮಠ. ಈ ತತ್ವನಿಷ್ಠದ ಮಠದ ಪರಂಪರೆಗೆ ಕೈಗನ್ನಡಿಯಂತೆ ಆಷಾಢ ಮಾಸದಲ್ಲಿ ಪ್ರತಿವರ್ಷ ನಡೆದಂತಹ ಅನುಭಾವಿಗಳ ಅನುಭಾವವೇ ಒಂದು ಕೈಗನ್ನಡಿ. ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಜನಸಾಮಾನ್ಯರ ಹೃದಯಕ್ಕೆ ಮುಟ್ಟಿದರೆ ಕಾರ್ಯಕ್ರಮ ಯಶಸ್ವಿಯಾದಂತೆ. ಪ್ರಸ್ತುತ ವರ್ಷ ಎಡೆಯೂರು ತೋಂಟದ ಸಿದ್ದಲಿಂಗೇಶ್ವರ ಪ್ರವಚನ ಅರ್ಥಪೂರ್ಣವಾಗಿ ಜರುಗಿತು ಎಂದು ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ತಿಳಿಸಿದರು.

ಬಸವ ತತ್ವ: ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ​ಆಷಾಢ ಮಾಸದಲ್ಲಿ ನಡೆಯುವ ಪ್ರವಚನ ಜನರ ಮನಸ್ಸಿನಲ್ಲಿರುವ ಅಜ್ಞಾನವನ್ನು ಹೋಗಲಾಡಿಸಿ, ವೈಚಾರಿಕತೆ ಹಾಗೂ ಬಸವ ತತ್ವದ ವಿಚಾರಗಳನ್ನು ಬಿತ್ತುವ ಕಾರ್ಯ ಮಾಡುತ್ತಿದೆ. ಈ ಪರಂಪರೆಯು ಸಮಾಜದಲ್ಲಿ ಧರ್ಮ ಮತ್ತು ಸನ್ಮಾರ್ಗದ ದಾರಿಯನ್ನು ತೋರಿಸುತ್ತಿದ್ದು, ಜನಸಾಮಾನ್ಯರ ಹೃದಯವನ್ನು ತಲುಪುವಲ್ಲಿ ಯಶಸ್ವಿಯಾಗಿದೆ ಎಂದು ಮುಂಡರಗಿ ತೋಂಟದಾರ್ಯ ಪ್ರವಚನ ಸಮಿತಿ ಅಧ್ಯಕ್ಷ ಸಿ.ಕೆ. ಗಣಪ್ಪನವರ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡ ನಾಡು-ನುಡಿ ನಮ್ಮ ಅಸ್ಮಿತೆಯ ಪ್ರತೀಕ: ಬಿ.ಎನ್. ವಾಸರೆ
ಭಾರತ ಸೇವಾದಳದಿಂದ ಉತ್ತಮ ನಾಗರಿಕರ ಸೃಷ್ಟಿ: ಎಂ.ಬಿ. ಪೈ