ಹನುಮಸಾಗರ ಪಟ್ಟಣ ಪಂಚಾಯಿತಿ ವತಿಯಿಂದ ಬುಧವಾರ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಹನುಮಸಾಗರ: ಪಟ್ಟಣದ ಸ್ವಚ್ಛತೆ ಹಾಗೂ ಸಾರ್ವಜನಿಕ ಆರೋಗ್ಯ ಕಾಪಾಡುವಲ್ಲಿ ಪೌರಕಾರ್ಮಿಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಪಪಂ ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ ಹೇಳಿದರು.
ಪಪಂ ವತಿಯಿಂದ ಬುಧವಾರ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರತಿದಿನ ಬೆಳಗ್ಗೆಯಿಂದಲೇ ಪಟ್ಟಣದ ಬೀದಿಗಳು, ಚರಂಡಿಗಳು ಹಾಗೂ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸುವ ಮೂಲಕ ಪೌರಕಾರ್ಮಿಕರು ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯವಾಗಿದೆ. ಪೌರಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ವಿವಿಧ ಯೋಜನೆಗಳನ್ನು ಜಾರಿಗೊಳಿಸಲಾಗಿದ್ದು, ಈಗಾಗಲೇ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿಲ್ಲ. ಅನುದಾನ ಬಿಡುಗಡೆಯಾದ ಬಳಿಕ ಪೌರಕಾರ್ಮಿಕರಿಗೆ ಮನೆ ನಿರ್ಮಾಣಕ್ಕಾಗಿ ಸರ್ಕಾರದ ವತಿಯಿಂದ ಸಬ್ಸಿಡಿ ಹಣ ಒದಗಿಸುವ ವ್ಯವಸ್ಥೆ ಮಾಡಲಾಗುವುದು. ಪೌರಕಾರ್ಮಿಕರ ಕುಟುಂಬಗಳ ಹಿತದೃಷ್ಟಿಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.ಪೌರಕಾರ್ಮಿಕರು ಪ್ರತಿದಿನ ಬೆಳಗಿನ ಜಾವದಿಂದಲೇ ತಮ್ಮ ಕರ್ತವ್ಯದಲ್ಲಿ ತೊಡಗಿಕೊಳ್ಳುವುದರಿಂದ ಅವರ ಅನುಕೂಲಕ್ಕಾಗಿ ಬೆಳಗಿನ ಉಪಾಹಾರದ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಪೌರಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೂ ಪಪಂ ಅಗತ್ಯ ಸಹಕಾರ ನೀಡಲಿದೆ. ಕಾಯಂ ಸೇವೆ ಕುರಿತು ಸರ್ಕಾರದ ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಪೌರಕಾರ್ಮಿಕರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲು ಪಪಂ ಸದಾ ಸಿದ್ಧವಿದೆ ಎಂದರು.
ವಕೀಲ ಮಹಾತೇಶ ಕುಷ್ಟಗಿ, ನ್ಯಾಯಾಲಯಕ್ಕೆ ಸಂಬಂಧಿಸಿದ ಪೌರಕಾರ್ಮಿಕರ ಯಾವುದೇ ಕೆಲಸವಿದ್ದರೂ ಉಚಿತವಾಗಿ ಕಾನೂನು ನೆರವು ನೀಡುವುದಾಗಿ ಭರವಸೆ ನೀಡಿದರು.ವೆಂಕಟೇಶ ಹೊಸಮನಿ ಹಾಗೂ ಶಂಕರ ಅವರು ಪೌರಕಾರ್ಮಿಕರ ಸೇವೆ, ಸ್ವಚ್ಛತೆಯ ಮಹತ್ವ ಮತ್ತು ಸಾರ್ವಜನಿಕರ ಜವಾಬ್ದಾರಿ ಕುರಿತು ಉಪನ್ಯಾಸ ನೀಡಿದರು.
ಪಟ್ಟಣದ ಸ್ವಚ್ಛತೆಗಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಹಿರಿಯ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು.ಸೂಚಪ್ಪ ದೇವರಮನಿ, ಮಹಾಂತೇಶ ಕುಷ್ಟಗಿ, ಮೈನುದ್ದೀನ್ ಖಾಜಿ ಮಾತನಾಡಿದರು. ಪ್ರಶಾಂತ ಕುಲಕರ್ಣಿ, ಸಿದ್ದಯ್ಯ ಬಾಳಿಹಳ್ಳಿಮಠ, ಹನುಮಂತ ಬಿಂಗಿ, ಶೈಲಪ್ಪ ಮೊಟಗಿ, ಶಿವಪ್ಪ ಕಂಪ್ಲಿ, ಚಂದ್ರು ಹಿರೇಮನಿ, ಮೌಲಾಲಿ ಮೊಟಗಿ, ರಮೇಶ ಬಡಿಗೇರ, ಮಾರುತಿಸಾ ರಂಗ್ರೇಜ, ಮರೇಗೌಡ ಬೋದುರ, ಮಹಾಂತಯ್ಯ ಕೋಮಾರಿ, ವೀರೇಶ ಕುರನಾಳ ಇದ್ದರು.