ಹೆದ್ದಾರಿ ಅತಿಕ್ರಮಣ ವಿರುದ್ಧ ಕ್ರಮಕ್ಕೆ ಸಂಸದ ಕ್ಯಾ.ಬ್ರಿಜೇಶ್ ಚೌಟ ಸೂಚನೆ

KannadaprabhaNewsNetwork |  
Published : Apr 23, 2026, 02:45 AM IST
ಮಂಗಳೂರು: ಸಂಸದ ಕ್ಯಾ.ಬ್ರಿಜೇಶ್ ಚೌಟ ಅಧ್ಯಕ್ಷತೆಯಲ್ಲಿ ದಿಶಾ ಸಮಿತಿ ಸಭೆ ನಡೆಯಿತು | Kannada Prabha

ಸಾರಾಂಶ

ಮಂಗಳವಾರ ದ.ಕ. ಜಿ.ಪಂ. ನೇತ್ರಾವತಿ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ (ದಿಶಾ) ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಸಭೆ

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಹೆದ್ದಾರಿ ಅತಿಕ್ರಮಣ ವಿರುದ್ಧ ಕ್ರಮಕೈಗೊಳ್ಳುವಂತೆ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ಅಧಿಕಾರಿಗಳಿಗೆ ಸೂಚಿಸಿದರು. ಅವರು ಮಂಗಳವಾರ ದ.ಕ. ಜಿ.ಪಂ. ನೇತ್ರಾವತಿ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ (ದಿಶಾ) ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಸಭೆ ನಡೆಸಿದರು.ಪಂಪ್‌ವೆಲ್-ತೊಕ್ಕೊಟ್ಟು, ಪಡೀಲ್-ಫರಂಗಿಪೇಟೆ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ಬದಿಯನ್ನು ಅತಿಕ್ರಮಿಸಿ ಅಂಗಡಿಗಳು, ಕಟ್ಟಡಗಳು ಕಾರ್ಯಾಚರಿಸುತ್ತಿದ್ದು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಇದರ ಬಗ್ಗೆ ಪರಿಶೀಲಿಸಿ ಹೆದ್ದಾರಿ ಅತಿಕ್ರಮಿಸಿ ನಿರ್ಮಾಣಗೊಂಡಿರುವ ಅಂಗಡಿ, ಕಟ್ಟಡಗಳನ್ನು ಕೂಡಲೇ ಸ್ಥಳೀಯಾಡಳಿತದ ನೆರವು ಪಡೆದು ತೆರವು ಮಾಡಬೇಕು ಎಂದು ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ದರ್ಶನ್ ಮಾತನಾಡಿ, ಹೆದ್ದಾರಿ ಅತಿಕ್ರಮಣಗೊಂಡಿರುವುದನ್ನು ಪತ್ತೆ ಹಚ್ಚುವ ಸಲುವಾಗಿ ಹೆದ್ದಾರಿ ಪ್ರಾಧಿಕಾರ ಮತ್ತು ಸರ್ಕಾರಿ ಸರ್ವೇಯರ್‌ಗಳು ಜೊತೆಯಾಗಿ ಸರ್ವೆ ನಡೆಸಿ, ವರದಿ ಸಲ್ಲಿಸಿ. ಅತಿಕ್ರಮಣ ತೆರವು ಮಾಡಿ ಎಂದರು.

ಪರಿಹಾರ ಪಡೆದರೂ ಭೂಮಿ ಸ್ವಾಧೀನದಲ್ಲೇ:

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮಾತನಾಡಿ, ಹೆದ್ದಾರಿ ಕಾಮಗಾರಿ ಹಿನ್ನಲೆಯಲ್ಲಿ ಪರಿಹಾರ ಕೊಟ್ಟು ಭೂಮಿಯನ್ನು ಸ್ವಾಧೀನ ಪಡೆಯದೇ ಇರುವ ಎಷ್ಟು ಪ್ರಕರಣಗಳ ಮಾಹಿತಿ ಬಯಸಿದರು.

ಆ ರೀತಿಯ ಯಾವುದೇ ಪ್ರಕರಣಗಳಿಲ್ಲ. 465 ಪ್ರಕರಣಗಳಲ್ಲಿ ಪರಿಹಾರ ನೀಡಲಾಗಿದ್ದು, ಅವೆಲ್ಲವನ್ನು ಸ್ವಾಧೀನ ಪಡೆಯಲಾಗಿದೆ, ಪರಿಹಾರ ಪಡೆದು ಮನೆಗಳ ತೆರವು ಬಾಕಿ ಇರುವ 2-3 ಪ್ರಕರಣಗಳಿವೆ ಎಂದರು. ಶಾಸಕ ಹರೀಶ್ ಪೂಂಜಾ ಪ್ರಸ್ತಾಪಿಸಿ, ಕೂವೆಟ್ಟು ಗ್ರಾ.ಪಂ. ವ್ಯಾಪ್ತಿಯಲ್ಲಿ 44 ಲಕ್ಷ ರು. ಪರಿಹಾರ ಪಡೆದು ಭೂಮಿಯನ್ನು ಬಿಟ್ಟು ಕೊಡದೇ ಅಲ್ಲೇ ಕಟ್ಟಡ ನಿರ್ಮಾಣಗೊಂಡಿದೆ. ಇಂತಹ ಇನ್ನೂ ಹಲವು ಪ್ರಕರಣಗಳಿರಬಹುದು. ಇದರ ಹಿಂದೆ ಯಾರಿದ್ದಾರೆ, ಈ ಬಗ್ಗೆ ಸಮಗ್ರ ಪರಿಶೀಲನೆ ನಡೆಯಬೇಕು ಎಂದು ಒತ್ತಾಯಿಸಿದರು. ಈ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸಂಸದರು ಹಾಗೂ ಡಿಸಿ ಹೆದ್ದಾರಿ ಅಧಿಕಾರಿಗಳಿಗೆ ಸೂಚಿಸಿದರು.

ಸರ್ವೀಸ್ ರಸ್ತೆಗಳು ಸಮರ್ಪಕವಾಗಿರಲಿ:

ಹೆದ್ದಾರಿ ಅಭಿವೃದ್ಧಿ, ನಿರ್ಮಾಣ ವೇಳೆ ಹೆದ್ದಾರಿಗೆ ಆದ್ಯತೆ ನೀಡಿ ಸರ್ವೀಸ್ ರಸ್ತೆ, ಲಿಂಕ್ ರಸ್ತೆಗಳ ಸಂಪರ್ಕಕ್ಕೆ ನಿರ್ಲಕ್ಷ್ಯ ವಹಿಸಿದ ಬಗ್ಗೆ ಸಭೆಯಲ್ಲಿ ಆರೋಪ ವ್ಯಕ್ತವಾಯಿತು.

ಈ ಬಗ್ಗೆ ಪಟ್ಟಿ ಪಡೆದು, ಸರ್ವೀಸ್ ರಸ್ತೆಗಳು, ಲಿಂಕ್‌ ರಸ್ತೆಗಳನ್ನು ಸಮರ್ಪಕವಾಗಿ ಜೋಡಿಸಿ ಅಭಿವೃದ್ಧಿ ಮಾಡುವಂತೆ ಕ್ರಮ ವಹಿಸಲು ಸಂಸದರು ಅಧಿಕಾರಿಗಳಿಗೆ ಸೂಚಿಸಿದರು. ಹೆದ್ದಾರಿ ಬದಿಗಳಲ್ಲಿ ಪ್ಲೆಕ್ಸ್ ಹಾವಳಿ ಹೆಚ್ಚಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಒತ್ತಾಯಿಸಿದರು. ಬಿ.ಸಿ. ರೋಡ್‌ ಸರ್ಕಲ್‌ ದೊಡ್ಡದಾಗಿರುವ ಬಗ್ಗೆ ಮಾತುಗಳು ಬರುತ್ತಿದೆ. ಈ ಬಗ್ಗೆ ಇನ್ನೊಮ್ಮೆ ಪರಿಶೀಲಿಸಿ ವೈಜ್ಞಾನಿಕವಾಗಿರುವಂತೆ ಕಾಮಗಾರಿ ವೇಳೆ ಗಮನಹರಿಸಿ ಎಂದು ಸಂಸದರು ಸೂಚಿಸಿದರು. ಚಾರ್ಜಿಂಗ್‌ ಸ್ಟೇಷನ್ ಬಳಿಕ ಇ-ಬಸ್‌:

ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಪಿಎಂಇ ಯೋಜನೆಯಡಿ 100 ವಿದ್ಯುತ್ ಚಾಲಿತ ಬಸ್‌ಗಳು ಮಂಗಳೂರು ನಗರ ವ್ಯಾಪ್ತಿಗೆ ಮಂಜೂರಾಗಿದೆ. ಮಂಗಳೂರು -3ನೇ ಘಟಕದಲ್ಲಿ 50 ಎಲೆಕ್ಟ್ರಿಕ್ ಬಸ್‌ಗಳ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಚಾರ್ಜಿಂಗ್‌ ಸ್ಟೇಷನ್ ಕೆಲಸ ಆಗಬೇಕಾಗಿದೆ. ಸಿವಿಲ್ ವರ್ಕ್ ಕೆಎಸ್‌ಆರ್‌ಟಿಸಿ ವತಿಯಿಂದ ಅಂದಾಜು 3 ತಿಂಗಳ ಅವಧಿಯಲ್ಲಿ ನಡೆಯಬಹುದು, ಆದರೆ ಸ್ಟೇಷನ್‌ ವರ್ಕ್ ಮೆಸ್ಕಾಂ ವತಿಯಿಂದ ನಡೆಯಬೇಕಿದೆ ಎಂದು ಅಧಿಕಾರಿಗಳು ಉತ್ತರಿಸಿದರು. ಸ್ಟೇಷನ್ ಕೆಲಸಕ್ಕೆ ಸುಮಾರು 6 ತಿಂಗಳ ಅವಧಿ ಬೇಕಾಗುತ್ತದೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದರು. ಆ ಬಳಿಕವೇ ಇ-ಬಸ್ ಕಾರ್ಯಾಚರಣೆ ಮಾಡಬಹುದು ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದರು.

ಜಲಜೀವನ್‌ ಮಿಷನ್‌ ಬಗ್ಗೆ ಪ್ರತ್ಯೇಕ ಸಭೆ

ಜಲಜೀವನ್ ಮಿಷನ್ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳ ಕುರಿತು ದೂರುಗಳು ಬರುತ್ತಿರುವ ಬಗ್ಗೆ ಚರ್ಚೆ ನಡೆಯಿತು.

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ಜೆಜೆಎಂ ಯೋಜನೆಯಲ್ಲಿ ಅಸಮರ್ಪಕವಾಗಿ ಕೆಲಸ ನಡೆಯುತ್ತಿದೆ. ರಸ್ತೆ ಅಗೆದು ಸಮಸ್ಯೆ ಆಗುತ್ತಿದೆ. ಕೆಲವೆಡೆ ನೀರೇ ಬರುತ್ತಿಲ್ಲ ಎಂದು ತಿಳಿಸಿದರು. ಈ ಬಗ್ಗೆ ಪಟ್ಟಿ ನೀಡಿ ಸರಿಪಡಿಸಲು ಸೂಚಿಸುತ್ತೇನೆ ಎಂದು ಜಿ.ಪಂ. ಸಿಇಒ ತಿಳಿಸಿದರು. ಜೆಜೆಎಂನ ಅಧಿಕಾರಿಗಳು, ಗುತ್ತಿಗೆದಾರರು ಸಭೆ ನಡೆಸಲಾಗುವುದು ಎಂದು ಸಂಸದರು ತಿಳಿಸಿದರು.

ಮಳೆ ಆರಂಭಕ್ಕೆ ಮೊದಲು ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ, ಮಳೆಗಾಲದಲ್ಲಿ ಸಮಸ್ಯೆಗಳು, ನೀರು ನುಗ್ಗಿ ತೊಂದರೆ ಆಗುತ್ತಿರುವ ಕಡೆಗಳಲ್ಲಿ ಪರಿಹಾರ ಕಾಮಗಾರಿ ನಡೆಸುವಂತೆ ಸಂಸದರು ಸೂಚಿಸಿದರು. ಮೆಸ್ಕಾಂ ವತಿಯಿಂದ ಮಳೆಗಾಲಕ್ಕೆ ಮೊದಲು ಪೂರ್ವ ತಯಾರಿ ಕೆಲಸ ಪೂರ್ಣಗೊಳಿಸಿ ಎಂದರು.

ಪ್ಲಾಸ್ಟಿಕ್ ಪಾರ್ಕ್ ಕಾಮಗಾರಿಗಳನ್ನು ಶೀಘ್ರ ಮುಗಿಸುವಂತೆ ಸೂಚಿಸಲಾಯಿತು. ಏರ್‌ಪೋರ್ಟ್ ಉಚಿತ ಪಾರ್ಕಿಂಗ್ ಸಮಯವನ್ನು 15 ನಿಮಿಷಕ್ಕೆ ವಿಸ್ತರಿಸುವ ಬಗ್ಗೆ, ನದಿ ನೀರು ಕಲುಷಿತಗೊಂಡಿರುವ ಬಗ್ಗೆ ಚರ್ಚೆ ನಡೆಯಿತು.ಜಿಲ್ಲಾಧಿಕಾರಿ ದರ್ಶನ್, ಜಿ.ಪಂ. ಸಿಇಒ ನರ್ವಾಡೆ ವಿನಾಯಕ ಕರ್ಬಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್, ಕೊಂಕಣ ರೈಲ್ವೆ ಪ್ರಾದೇಶಿಕ ರೈಲ್ವೆ ವ್ಯವಸ್ಥಾಪಕಿ ಆಶಾ, ಹೆಚ್ಚುವರಿ ಎಸ್‌ಪಿ ಅನಿಲ್ ಕುಮಾರ್ ಎಸ್.ಭೂಮರೆಡ್ಡಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಂಜನಾಡಿ ಗುಡ್ಡ ಕುಸಿತ ಮಾನವ ನಿರ್ಲಕ್ಷ್ಯ: ಎನ್‌ಐಟಿಕೆ ವರದಿ ಬಹಿರಂಗ
ಶಂಕರರ ಆದರ್ಶ, ತತ್ವಗಳು ಸಾರ್ವಕಾಲಿಕ : ಐವನ್ ಡಿಸೋಜಾ