ಮಾಹಿತಿ ಹಕ್ಕು ಅರ್ಜಿಗಳ ಸಕಾಲದಲ್ಲಿ ವಿಲೇಗೊಳಿಸಿ: ರುದ್ರಣ್ಣ ಹರ್ತಿಕೋಟೆ

KannadaprabhaNewsNetwork |  
Published : Dec 21, 2025, 02:30 AM IST
ಪೊಟೋ: 20ಎಸ್‌ಎಂಜಿಕೆಪಿ04ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಕರ್ನಾಟಕ ಮಾಹಿತಿ ಆಯೋಗವು ಜಿಲ್ಲೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಮಾಹಿತಿ ಹಕ್ಕು ಕಾಯ್ದೆಯ ಕುರಿತು ಏರ್ಪಡಿಸಿದ್ದ ಕಾರ್ಯಾಗಾರ ಜಾಗೃತಿ ಕಾರ್ಯಕ್ರಮ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮಾಹಿತಿ ಆಯೋಗದ ಆಯುಕ್ತ ರುದ್ರಣ್ಣ ಹರ್ತಿಕೋಟೆ ಮಾತನಾಡಿದರು. | Kannada Prabha

ಸಾರಾಂಶ

ಮಾಹಿತಿ ಹಕ್ಕು ಅಧಿನಿಯಮದಡಿ ಅರ್ಜಿದಾರರು ಮಾಹಿತಿ ಕೋರಿ ತಮ್ಮ ಕಚೇರಿಗಳಿಗೆ ಸಲ್ಲಿಸುವ ಅರ್ಜಿಗಳನ್ನು ನಿಗದಿಪಡಿಸಿದ ಕಾಲಮಿತಿಯೊಳಗಾಗಿ ನಿಯಮಾನುಸಾರ ಸಕಾಲದಲ್ಲಿ ವಿಲೇವಾರಿ ಮಾಡುವಂತೆ ಮಾಹಿತಿ ಆಯೋಗ ಆಯುಕ್ತ ರುದ್ರಣ್ಣ ಹರ್ತಿಕೋಟೆ ತಾಕೀತು ಮಾಡಿದರು.

ಶಿವಮೊಗ್ಗ: ಮಾಹಿತಿ ಹಕ್ಕು ಅಧಿನಿಯಮದಡಿ ಅರ್ಜಿದಾರರು ಮಾಹಿತಿ ಕೋರಿ ತಮ್ಮ ಕಚೇರಿಗಳಿಗೆ ಸಲ್ಲಿಸುವ ಅರ್ಜಿಗಳನ್ನು ನಿಗದಿಪಡಿಸಿದ ಕಾಲಮಿತಿಯೊಳಗಾಗಿ ನಿಯಮಾನುಸಾರ ಸಕಾಲದಲ್ಲಿ ವಿಲೇವಾರಿ ಮಾಡುವಂತೆ ಮಾಹಿತಿ ಆಯೋಗ ಆಯುಕ್ತ ರುದ್ರಣ್ಣ ಹರ್ತಿಕೋಟೆ ತಾಕೀತು ಮಾಡಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಕರ್ನಾಟಕ ಮಾಹಿತಿ ಆಯೋಗವು ಜಿಲ್ಲೆಯ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಮಾಹಿತಿ ಹಕ್ಕು ಕಾಯ್ದೆಯ ಕುರಿತು ಏರ್ಪಡಿಸಿದ್ದ ಕಾರ್ಯಾಗಾರ ಜಾಗೃತಿ ಕಾರ್ಯಕ್ರಮ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿವಿಧ ಇಲಾಖೆಗಳ ಜವಾಬ್ದಾರಿಯುತ ಅಧಿಕಾರಿಗಳು ತಮ್ಮ ಕಚೇರಿ ಅಧಿಕಾರಿ ಸಿಬ್ಬಂದಿ ವಿವರಗಳನ್ನು 4-1ಎ ಮತ್ತು 4-1ಬಿ ನಮೂನೆಗಳನ್ನು ಭರ್ತಿ ಮಾಡಿ ಪ್ರತಿವರ್ಷ ಇಲಾಖೆಯ ಜಾಲತಾಣದಲ್ಲಿ ಉನ್ನತೀಕರಿಸಿ ಸಾರ್ವಜನಿಕ ಮಾಹಿತಿಗೆ ಲಭ್ಯವಿರುವಂತೆ ಗಮನಿಸಬೇಕು. ಇದರಿಂದಾಗಿ ಇಲಾಖೆಗೆ ಮಾಹಿತಿ ಕೋರಿ ಬರುವ ಅರ್ಜಿಗಳು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಲಿವೆ. ಅರ್ಜಿದಾರರು ಅರ್ಜಿ ಸಲ್ಲಿಸಿದ 30 ದಿನಗಳೊಳಗೆ ತಮ್ಮ ಕಚೇರಿಯಲ್ಲಿ ಲಭ್ಯವಿರುವ ಮಾಹಿತಿಯನ್ನು ಒದಗಿಸಬೇಕು ಎಂದು ಸೂಚಿಸಿದರು.

ಮಾಹಿತಿ ಹಕ್ಕು ಅಧಿನಿಯಮದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿರುವಂತೆಯೇ ಇಲಾಖೆಗಳಿಗೆ ಸಲ್ಲಿಕೆ ಆಗುವ ಅರ್ಜಿಗಳಿಗೆ ಮಾಹಿತಿ ಒದಗಿಸುವಲ್ಲಿ ಅಧಿಕಾರಿಗಳಿಗೆ ಆತಂಕವೂ ಇಲ್ಲದಿಲ್ಲ. ಕಚೇರಿಯಲ್ಲಿ ಇರುವ ಮಾಹಿತಿಯನ್ನು ಅರ್ಜಿದಾರರಿಗೆ ಯಾವುದೇ ಆತಂಕವಿಲ್ಲದೇ ನೀಡಬೇಕು. ತಪ್ಪಿದಲ್ಲಿ ಮೇಲ್ಮನವಿ ಪ್ರಾಧಿಕಾರಗಳಲ್ಲಿ ದಂಡನೆಗೆ ಗುರಿಯಾಗುವ ಸಂಭವವಿದೆ ಎಂದವರು ಎಚ್ಚರಿಸಿದರು.

ವೈಯಕ್ತಿಕ ದ್ವೇಷ, ಕ್ಷುಲ್ಲಕ ಕಾರಣಕ್ಕೆ ಮಾಹಿತಿಹಕ್ಕು ಅಧಿನಿಯಮವನ್ನು ಬಳಸಿಕೊಳ್ಳಬಾರದು ಅಗತ್ಯತೆಗಳಿಗಾಗಿ ನಿಯಮಾನುಸಾರ ಅರ್ಜಿಯನ್ನು ಸಲ್ಲಿಸಿ, ಮಾಹಿತಿ ಪಡೆದುಕೊಳ್ಳುವ ಮೂಲಕ ಸಾರ್ವಜನಿಕರು ಅಧಿನಿಯಮದ ಲಾಭ ಪಡೆದುಕೊಳ್ಳಬೇಕು. ಕಾಯ್ದೆಯ ದುರ್ಬಳಕೆ, ಅಧಿಕಾರಿಗಳ ವಿರುದ್ಧದ ಕ್ರಮಗಳಿಗಾಗಿ ಕಾಯ್ದೆಯನ್ನು ಬಳಸಿಕೊಳ್ಳುವಂತಾಗಬಾರದು ಎಂದರು.

ನಿಯಮ ಪಾಲಿಸದ ಹಾಗೂ ಸಕಾಲದಲ್ಲಿ ಮಾಹಿತಿಯನ್ನು ಅರ್ಜಿದಾರರಿಗೆ ಒದಗಿಸದಿರುವ 10754 ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಂದ ₹10. 20 ಕೋಟಿ ಮೊತ್ತದ ದಂಡ ವಿಧಿಸಲಾಗಿದೆ. ಈ ಪೈಕಿ 3080 ಅಧಿಕಾರಿಗಳಿಂದ ₹2.70 ಕೋಟಿ ದಂಡ ವಸೂಲಿ ಮಾಡಲಾಗಿದೆ. ಶಿವಮೊಗ ಜಿಲ್ಲೆಯಲ್ಲಿ ಸಕಾಲದಲ್ಲಿ ಮಾಹಿತಿ ಒದಗಿಸದಿರುವ 140 ಮಂದಿ ಅಧಿಕಾರಿಗಳಿಗೆ ₹14.40 ಲಕ್ಷಗಳ ದಂಡ ವಿಧಿಸಲಾಗಿದೆ. ಆ ಪೈಕಿ 30 ಅಧಿಕಾರಿಗಳಿಂದ ₹4.12 ಲಕ್ಷಗಳ ದಂಡ ವಸೂಲಿ ಮಾಡಲಾಗಿದೆ. ದಂಡ ಪಾವತಿ ಮಾಡದಿರುವ ಅಧಿಕಾರಿಗಳಿಗೆ ನಿವೃತ್ತಿಯ ನಂತರದ ಉಪಾಧಾನ ಪಡೆಯುವಲ್ಲಿ ತೀವ್ರ ತರಹದ ಅಡಚಣೆ ಉಂಟಾಗಲಿದೆ ಎಂದರು.

ರಾಜ್ಯದಲ್ಲಿ ಬೆಂಗಳೂರು ನಗರ, ಬೆಳಗಾವಿ, ರಾಯಚೂರು ನಂತರದಲ್ಲಿ ಶಿವಮೊಗ್ಗ ಜಿಲ್ಲೆ 22ನೇ ಸ್ಥಾನ ಪಡೆದಿದೆ. ಮಾಹಿತಿಹಕ್ಕು ಅಧಿನಿಯಮದಡಿ ಅರ್ಜಿ ಸಲ್ಲಿಕೆಯಾಗುವ ಇಲಾಖೆಗಳಲ್ಲಿ ಗ್ರಾಮೀಣಾಭಿವೃದ್ಧಿ, ಕಂದಾಯ, ನಗರಾಭಿವೃದ್ಧಿ, ಶಿಕ್ಷಣ, ಲೋಕೋಪಯೋಗಿ ಮುಂತಾದ ಇಲಾಖೆಗಳು ಅಗ್ರಪಂಕ್ತಿಯಲ್ಲಿವೆ ಎಂದರು.

ಮಾಹಿತಿ ಆಯೋಗದ ಆಯುಕ್ತ ಎನ್.ರಾಜಶೇಖರ್ ಮಾತನಾಡಿ, ಮಾಹಿತಿ ಕಾಯ್ದೆ ಪ್ರಬಲವಾದ ಮತ್ತು ಸರಳವಾದ ಕಾಯಿದೆಯಾಗಿದ್ದು, ಜನಸ್ನೇಹಿಯಾಗಿದೆ. ಮಾತ್ರವಲ್ಲ ಇದು ಕೂಡ ಸಂವಿಧಾನದತ್ತ ಹಕ್ಕಾಗಿದೆ. ಅಧಿಕಾರಿಗಳು ಕೋರಿಕೆಯ ಅರ್ಜಿಗಳಿಗೆ ಸಕಾಲದಲ್ಲಿ ಮಾಹಿತಿ ಒದಗಿಸುವಂತೆ ಸೂಚಿಸಿದರು.

ಅಧಿಕಾರಿಗಳು ತಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿಗೆ ಸಂಬಂಧಿಸಿದಂತೆ ಎಲ್ಲ ಮಾಹಿತಿಯನ್ನು ತಮ್ಮ ಜಾಲತಾಣದಲ್ಲಿ ಪ್ರಕಟಿಸಿದಲ್ಲಿ ಇಲಾಖೆಗೆ ಬರುವ ಅರ್ಜಿಗಳ ಸಂಖ್ಯೆಯಲ್ಲಿ ಇಳಿಮುಖವಾಗಲಿದೆ ಎಂದರು.

ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್‌ಕುಮಾರ್, ಜಿಪಂ ಸಿಇಒ ಎನ್.ಹೇಮಂತ್, ಅಪರ ಜಿಲ್ಲಾಧಿಕಾರಿ ಅಭಿಷೇಕ್ , ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸುಜಾತಾ ಮತ್ತಿತರರು ಇದ್ದರು.

- - - -20ಎಸ್‌ಎಂಜಿಕೆಪಿ04:

ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಕರ್ನಾಟಕ ಮಾಹಿತಿ ಆಯೋಗವು ಜಿಲ್ಲೆಯ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಮಾಹಿತಿ ಹಕ್ಕು ಕಾಯ್ದೆ ಕುರಿತು ಏರ್ಪಡಿಸಿದ್ದ ಕಾರ್ಯಾಗಾರ ಜಾಗೃತಿ ಕಾರ್ಯಕ್ರಮ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮಾಹಿತಿ ಆಯೋಗ ಆಯುಕ್ತ ರುದ್ರಣ್ಣ ಹರ್ತಿಕೋಟೆ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ