ಪುತ್ಥಳಿ ನಿರ್ಮಾಣಕ್ಕಾಗಿ ಎರಡು ಸಮುದಾಯ ಮಧ್ಯೆ ವಾಗ್ವಾದ

KannadaprabhaNewsNetwork |  
Published : May 01, 2025, 12:50 AM IST
30ಜಿಯುಡಿ1 | Kannada Prabha

ಸಾರಾಂಶ

ಪಟ್ಟಣದ ಬಸ್ ನಿಲ್ದಾಣದ ಮುಂಭಾಗ ಬಲಿಜ ಸಮುದಾಯದಿಂದ ಯೋಗಿನಾರೇಯಣ ಕೈವಾರ ತಾತಯ್ಯ ಪುತ್ಥಳಿ ನಿರ್ಮಾಣಕ್ಕೆ ಭೂಮಿ ಪೂಜೆ ಕಾರ್ಯಕ್ರಮವನ್ನು ಬುಧವಾರ ನಿಗದಿಪಡಿಸಲಾಗಿತ್ತು. ಅದೇ ಜಾಗದಲ್ಲಿ ಹಾವಳಿ ಬೈರೇಗೌಡ ಪುತ್ಥಳಿ ನಿರ್ಮಾಣ ಮಾಡುವಂತೆ ಒಕ್ಕಲಿಗ ಸಮುದಾಯ ಪಟ್ಟು ಹಿಡಿದಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಒಕ್ಕಲಿಗ ಸಮುದಾಯದ ಮುಖಂಡರು ಸ್ಥಳದಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದು, ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ತಳ್ಳಾಟ ನಡೆಯಿತು.

ಕನ್ನಡಪ್ರಭ ವಾರ್ತೆ ಗುಡಿಬಂಡೆ

ಪಟ್ಟಣದ ಬಸ್ ನಿಲ್ದಾಣದ ಮುಂಭಾಗ ಬಲಿಜ ಸಮುದಾಯದಿಂದ ಯೋಗಿನಾರೇಯಣ ಕೈವಾರ ತಾತಯ್ಯ ಪುತ್ಥಳಿ ನಿರ್ಮಾಣಕ್ಕೆ ಭೂಮಿ ಪೂಜೆ ಕಾರ್ಯಕ್ರಮವನ್ನು ಬುಧವಾರ ನಿಗದಿಪಡಿಸಲಾಗಿತ್ತು. ಅದೇ ಜಾಗದಲ್ಲಿ ಹಾವಳಿ ಬೈರೇಗೌಡ ಪುತ್ಥಳಿ ನಿರ್ಮಾಣ ಮಾಡುವಂತೆ ಒಕ್ಕಲಿಗ ಸಮುದಾಯ ಪಟ್ಟು ಹಿಡಿದಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಒಕ್ಕಲಿಗ ಸಮುದಾಯದ ಮುಖಂಡರು ಸ್ಥಳದಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದು, ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ತಳ್ಳಾಟ ನಡೆಯಿತು.

ಈ ಹಿಂದೆಯೇ ಅದೇ ಜಾಗದಲ್ಲಿ ಹಾವಳಿ ಬೈರೇಗೌಡರ ಪುತ್ಥಳಿ ನಿರ್ಮಾಣಕ್ಕಾಗಿ ಜಾಗ ನೀಡುವಂತೆ ಒಕ್ಕಲಿಗರ ಸಂಘದಿಂದ ಮನವಿ ನೀಡಲಾಗಿದ್ದು, ಆ ಜಾಗದಲ್ಲಿ ಕೈವಾರ ತಾತಯ್ಯ ಪುತ್ಥಳಿ ನಿರ್ಮಾಣಕ್ಕೆ ಮುಂದಾಗಿರುವುದು ಸರಿಯಲ್ಲ ಎಂದು ಒಕ್ಕಲಿಗ ಮುಖಂಡರ ಆಗ್ರಹ. ಅಲ್ಲಿ ಕೈವಾರ ತಾತಯ್ಯ ಪುತ್ಥಳಿ ನಿರ್ಮಾಣವಾದರೆ ನಮ್ಮ ಬೈರೇಗೌಡ ಪುತ್ಥಳಿ ನಿರ್ಮಾಣವಾಗಬೇಕೆಂದು ಒಕ್ಕಲಿಗ ಸಮುದಾಯ ಆಗ್ರಹಿಸಿದೆ. ಈ ಜಾಗದಲ್ಲಿ ಪುತ್ಥಳಿ ನಿರ್ಮಾಣಕ್ಕಾಗಿ ಪಪಂ ಆಡಳಿತ ಮಂಡಳಿ ಸಭೆಯ ನಡಾವಳಿ ಮಾಡಲಾಗಿದ್ದು, ಅದರಂತೆ ಪುತ್ಥಳಿ ನಿರ್ಮಾಣ ಮಾಡಲು ಸಿದ್ದತೆ ಮಾಡಿಕೊಂಡಿದ್ದಾಗಿ ಬಲಿಜ ಮುಖಂಡರು ಹೇಳಿದ್ದಾರೆ.

ಬಲಿಜ ಸಮುದಾಯದ ವಾದ ಏನು?:

ಬಲಿಜ ಸಮುದಾಯದಿಂದ ಶಾಸಕರು, ತಹಸೀಲ್ದಾರ್, ಪಪಂ ಅಧ್ಯಕ್ಷರಿಗೆ ಕೈವಾರ ತಾತಯ್ಯ ಪುತ್ಥಳಿ ನಿರ್ಮಾಣಕ್ಕೆ ಮನವಿ ನೀಡಿದ್ದೇವು. ಅದರಂತೆ ನಮಗೆ ಭರವಸೆ ನೀಡಿದ್ದರು. ಜೊತೆಗೆ ಪುತ್ಥಳಿ ನಿರ್ಮಾಣಕ್ಕೆ ಉದ್ದೇಶಿಸಿರುವ ಜಾಗ ನಮ್ಮ ಸಮುದಾಯದಕ್ಕೆ ಸೇರಿದೆ. ಎಲ್ಲರ ಒಪ್ಪಿಗೆ ಮೇರೆಗೆ ಪುತ್ಥಳಿ ನಿರ್ಮಾಣಕ್ಕೆ ಭೂಮಿ ಪೂಜೆ ಏರ್ಪಡಿಸಲಾಗಿತ್ತು. ನಾವು ಕಾನೂನಿನಂತೆ ಭೂಮಿ ಪೂಜೆ ಕಾರ್ಯಕ್ರಮ ಇಟ್ಟುಕೊಂಡಿದ್ದೇವೆ.

ನಾವು ಎಲ್ಲಾ ಸಮುದಾಯದವರನ್ನೂ ಸೇರಿಸಿಕೊಂಡು ಈ ಕಾರ್ಯಕ್ರಮ ಆಯೋಜನೆ ಮಾಡಿದ್ದೇವು. ಆದರೆ ಏಕಾಏಕಿ ಕಾರ್ಯಕ್ರಮ ನಡೆಯಬೇಕಿದ್ದ ಹಿಂದಿನ ದಿನದ ರಾತ್ರಿ ಅಧಿಕಾರಿಗಳು ಕರೆ ಮಾಡಿ ಕಾರ್ಯಕ್ರಮ ಮುಂದೂಡಿ ಎಂದು ಒತ್ತಾಯಿಸಿದ್ದರು. ನಮ್ಮ ಸಮುದಾಯದವರಿಗೆ ಸೇರಿದ ಮೂಲ ಜಾಗದಲ್ಲಿ ಪುತ್ಥಳಿ ನಿರ್ಮಾಣ ಮಾಡುತ್ತಿದ್ದೇವೆ ವಿನಃ ಸರ್ಕಾರದ ಜಾಗದಲ್ಲಿ ಅಲ್ಲ. ಎಲ್ಲಾ ಸಮುದಾಯಗಳಿಗೂ ಸೇರಿದ ಕೈವಾರ ತಾತಯ್ಯ ಪುತ್ಥಳಿ ನಿರ್ಮಾಣಕ್ಕೆ ಯಾರೂ ಅಡ್ಡಿ ಮಾಡಬಾರದು. ಅನ್ಯ ಸಮುದಾಯದವರು ಗಲಾಟೆ ಮಾಡುತ್ತಿರುವುದು ಸರಿಯಲ್ಲ ಎಂದರು.

ಒಕ್ಕಲಿಗ ಸಮುದಾಯದ ಒತ್ತಾಯವೇನು?:

ಹಾವಳಿ ಬೈರೇಗೌಡರ ಪುತ್ಥಳಿ ನಿರ್ಮಾಣ ಮಾಡಲು ತಿಂಗಳ ಹಿಂದೆ ಮನವಿ ಸಲ್ಲಿಸಿದ್ದೇವು. ಈ ಪುತ್ಥಳಿ ನಿರ್ಮಿಸಿದರೆ ಸ್ಮಾರಕವಾಗುತ್ತದೆ. ನಾವು ಯಾವುದೇ ಪುತ್ಥಳಿ ನಿರ್ಮಾಣಕ್ಕೆ ವಿರೋಧ ಮಾಡಲ್ಲ. ಇದೀಗ ಕೈವಾರ ತಾತಯ್ಯರ ಪುತ್ಥಳಿ ನಿರ್ಮಾಣಕ್ಕೆ ಮುಂದಾಗಿರುವುದು ಸರಿಯಾದ ಕ್ರಮವಲ್ಲ. ಕಾನೂನಿನಂತೆ ಅವರಿಗೆ ಆ ಜಾಗದಲ್ಲಿ ಪುತ್ಥಳಿ ನಿರ್ಮಾಣ ಮಾಡಲು ಅನುಮತಿ ನೀಡಿಲ್ಲ. ಅದು ಸರ್ಕಾರಕ್ಕೆ ಸೇರಿದ ಬಿ ಕರಾಬ್ ಜಾಗವಾಗಿದೆ. ಈ ಹಿಂದೆ ಅದೇ ಜಾಗಕ್ಕೆ ಸಂಬಂಧಿಸಿದಂತೆ ಕೆಲವೊಂದು ಗಲಾಟೆ ನಡೆದಿವೆ. ಆ ಜಾಗವನ್ನು ವಶಕ್ಕೆ ತೆಗೆದುಕೊಂಡು ಸೂಕ್ತ ರೀತಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದರು.

ಬೆಳಿಗಿನಿಂದಲೇ ಬೀಡು ಬಿಟ್ಟ ಪೊಲೀಸರು:

ಪುತ್ಥಳಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆಯುವ ಸಾಧ್ಯತೆಯ ಕುರಿತು ಮೊದಲೇ ಮಾಹಿತಿ ಪಡೆದುಕೊಂಡ ಪೊಲೀಸರು ಬೆಳಗಿನಿಂದಲೇ ಸ್ಥಳದಲ್ಲಿ ಬೀಡು ಬಿಟ್ಟಿದ್ದರು. ತಹಸೀಲ್ದಾರ್, ಪೊಲೀಸ್‌, ಅಧಿಕಾರಿಗಳು ಪ್ರತಿಭಟನಾಕಾರರ ಮನವೊಲಿಸಲು ಹರಸಾಹಸವನ್ನೇ ಪಡಬೇಕಾಯಿತು. ಗುಡಿಬಂಡೆಯ ಇತಿಹಾಸದಲ್ಲಿ 2 ಸಮುದಾಯ ನಡುವೆ ಈ ಮಟ್ಟಿಗೆ ವಾಗ್ವಾದ ನಡೆದಿದ್ದು, ಇದೇ ಮೊದಲು.

ಎಸ್ಪಿ ಕುಶಾಲ್ ಚೌಕ್ಸೆ ಮಾತನಾಡಿ, ಪುತ್ಥಳಿ ನಿರ್ಮಾಣಕ್ಕೆ ಸಂಬಧಿಸಿದಂತೆ 2 ಸಮುದಾಯದ ನಡುವೆ ವಾಗ್ವಾದ ಉಂಟಾಗಿತ್ತು. ಎರಡೂ ಸಮುದಾಯದವರ ಜೊತೆ ಮಾತನಾಡಿದ್ದೇನೆ. ಒಂದು ಸಮುದಾಯ ಜಾಗದ ಒಳಗೆ ಗುದ್ದಲಿ ಪೂಜೆ ನಡೆಸಲು ಹೋಗಿದ್ದು ಮತ್ತೊಂದು ಸಮುದಾಯ ಹೊರಗೆ ಗಲಾಟೆ ಮಾಡಿದ್ದರು. ಎರಡೂ ಸಮುದಾಯಗಳ ಮುಖಂಡರೊಂದಿಗೆ ಮಾತನಾಡಿದ್ದು, ಕಾನೂನು ಬಾಹಿರವಾಗಿ ಕೆಲಸ ಮಾಡದಂತೆ ಸೂಚಿಸಿದ್ದೇವೆ.

ಎಲ್ಲರೂ ಕಾನೂನಿನ ಪ್ರಕಾರ ನಡೆದುಕೊಳ್ಳಬೇಕು. ಶೀಘ್ರವಾಗಿ ಎರಡೂ ಸಮುದಾಯಗಳ ಮುಖಂಡರನ್ನು ಕರೆಸಿ ಸಭೆ ನಡೆಸಿ ಕಾನೂನಿನಂತೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಅಲ್ಲಿಯವರೆಗೂ ವಿವಾದಿತ ಜಾಗದಲ್ಲಿ ಯಾರೂ ಕೆಲಸ ಮಾಡಬಾರದು ಎಂದು ಎಚ್ಚರಿಕೆ ನೀಡಲಾಗಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!