ಕನ್ನಡಪ್ರಭ ವಾರ್ತೆ ತುರುವೇಕೆರೆ
ನರಿಗೇಹಳ್ಳಿ ಗ್ರಾಮದ ದಬಂದಯ್ಯ ದೇವಾಲಯಕ್ಕೆ ಅದೇ ಗ್ರಾಮದ ಹಳ್ಳಿಕಾರ್ ಸಮುದಾಯಕ್ಕೆ ಸೇರಿದ ಮಂಜುನಾಥ್ ಎಂಬುವವರು ತಮ್ಮ ಕುಟುಂಬದ ಸಮೇತ ಪೂಜೆ ಸಲ್ಲಿಸಲು ತೆರಳಿದ್ದಾರೆ. ಆ ವೇಳೆ ದೇವರ ಪೂಜಾರಿ ಗ್ರಾಮದ ಗುಡಿಗೌಡರಾದ ನಾಗೇಶ್, ನರಸೇಗೌಡ ಮತ್ತು ನರಸಿಂಹಯ್ಯ ಎಂಬುವವರು ಅನುಮತಿ ನೀಡಿದರೆ ಮಾತ್ರ ಫೂಜೆ ಮಾಡಿಕೊಡುವುದಾಗಿಯೂ, ಇಲ್ಲದಿದ್ದರೆ ಮಾಡಿಕೊಡುವುದಿಲ್ಲ ಎಂದು ಹೇಳಿದ್ದಾರೆ. ಇದರಿಂದ ಕುಪಿತಗೊಂಡ ಮಂಜುನಾಥ್ ಕುಟುಂಬದವರು ಆಕ್ಷೇಪಿಸಿದ್ದಾರೆ. ಈ ವೇಳೆ ಅದೇ ದೇವಾಲಯಕ್ಕೆ ಇನ್ನೂ ಹಲವಾರು ಮಂದಿ ದೇವಾಲಯದಲ್ಲಿ ಪೂಜೆ ಸಲ್ಲಿಸಲು ಬಂದಿದ್ದಾರೆ. ಆದರೆ ನಮಗೆ ಪೂಜೆ ಮಾಡಿಕೊಡದಿದ್ದ ಮೇಲೆ ಬೇರೆಯವರಿಗೂ ಪೂಜೆ ಮಾಡಿಕೊಡಬಾರದು ಎಂದು ಮಂಜುನಾಥ್ ರವರ ಕುಟುಂಬ ತಗಾದೆ ತೆಗೆದಿದೆ. ಅಲ್ಲದೇ ಅವರು 112 ಪೊಲೀಸ್ ವಾಹನಕ್ಕೂ ದೂರು ಸಲ್ಲಿಸಿದ್ದಾರೆ. ದೂರಿನ ಮೇರೆಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು ದೇವರಿಗೆ ಪೂಜೆ ಮಾಡಿಕೊಡಿ ಎಂದು ಪೂಜಾರಿಗೆ ಹೇಳಿದರೂ ಸಹ ಪೂಜಾರಿ ಪೂಜೆ ಮಾಡಿಕೊಡಲು ನಿರಾಕರಿಸಿ ದೇವಾಲಯಕ್ಕೆ ಬೀಗ ಜಡಿದು ಮನೆ ಕಡೆ ತೆರಳಿದರು ಎಂದು ತಿಳಿದುಬಂದಿದೆ.