ಸುವರ್ಣಸೌಧದಲ್ಲಿ ವಿಧಾನ ಪರಿಷತ್‌ ಸದಸ್ಯರಿಗೆ ಹಕ್ಕುಚ್ಯುತಿ: ಸಭಾಪತಿಗೆ ದೂರು

KannadaprabhaNewsNetwork |  
Published : Dec 21, 2024, 01:16 AM IST
ವಿಪ ಸದಸ್ಯರಿಗೆ ಹಕ್ಕುಚ್ಯುತಿಯಾಗಿದೆ ಎಂದು ಆರೋಪಿಸಿ ಶುಕ್ರವಾರ ಹುಬ್ಬಳ್ಳಿಯಲ್ಲಿ ವಿಪ ಸದಸ್ಯರಾದ ಎನ್‌. ರವಿಕುಮಾರ ಹಾಗೂ ಡಿ.ಎಸ್‌. ಅರುಣ್‌ ಅವರು ಸಭಾಪತಿಗೆ ದೂರು ಸಲ್ಲಿಸಿದರು. | Kannada Prabha

ಸಾರಾಂಶ

ಕಲಾಪ ನಡೆಯುವ ಸಂದರ್ಭದಲ್ಲಿ ವಿಪ ಸದಸ್ಯರು ಕಾರಿನಲ್ಲಿ ಮುಖ್ಯ ಪ್ರವೇಶದ್ವಾರದಲ್ಲಿ ಬರುವಾಗ ಕೆಲವು ಕಿಡಿಗೇಡಿಗಳು ನಮ್ಮ ಮೇಲೆ ದೈಹಿಕ ಹಲ್ಲೆಗೆ ಪ್ರಯತ್ನಿಸಿದರು ಎಂದು ಎನ್. ರವಿಕುಮಾರ ದೂರಿನಲ್ಲಿ ತಿಳಿಸಿದ್ದಾರೆ.

ಹುಬ್ಬಳ್ಳಿ:

ಸುವರ್ಣಸೌಧದಲ್ಲಿ ಗುರುವಾರ ಕಲಾಪದ ನಂತರ ವಿಪ ಸದಸ್ಯರ ಹಕ್ಕುಚ್ಯುತಿಯಾಗಿದೆ ಎಂದು ಆರೋಪಿಸಿ ಶುಕ್ರವಾರ ನಗರದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ವಿಪ ಸದಸ್ಯರಾದ ಎನ್‌. ರವಿಕುಮಾರ ಹಾಗೂ ಡಿ.ಎಸ್‌. ಅರುಣ್ ದೂರು ಸಲ್ಲಿಸಿದರು.

ಕಲಾಪ ನಡೆಯುವ ಸಂದರ್ಭದಲ್ಲಿ ವಿಪ ಸದಸ್ಯರು ಕಾರಿನಲ್ಲಿ ಮುಖ್ಯ ಪ್ರವೇಶದ್ವಾರದಲ್ಲಿ ಬರುವಾಗ ಕೆಲವು ಕಿಡಿಗೇಡಿಗಳು ನಮ್ಮ ಮೇಲೆ ದೈಹಿಕ ಹಲ್ಲೆಗೆ ಪ್ರಯತ್ನಿಸಿದರು. ಸುವರ್ಣಸೌಧದ ಮೊಗಸಾಲೆಯಲ್ಲಿ ವಿಪ ಸದಸ್ಯರು ನಡೆದುಕೊಂಡು ಹೋಗುವ ಸಂದರ್ಭದಲ್ಲೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ಆಪ್ತ ಸಹಾಯಕರು ಹಾಗೂ ಕೆಲವು ಕಿಡಿಗೇಡಿಗಳು ಹಲ್ಲೆ ಮಾಡಿದ್ದಾರೆ. ಕಲಾಪ ಮುಗಿದ ಬಳಿಕ ಮುಖ್ಯದ್ವಾರದ ಮೆಟ್ಟಿಲುಗಳ ಮೇಲೆ ಶಾಂತಿಯುತ ಧರಣಿ ಕುಳಿತ ಸಂದರ್ಭದಲ್ಲೂ ನಮ್ಮನ್ನು ಪೊಲೀಸರು ಏಕಾಏಕಿ ಎಳೆದುಕೊಂಡು ಠಾಣೆಗಳಿಗೆ ಕರೆದುಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ನಮ್ಮನ್ನೆಲ್ಲ ಖಾನಾಪುರ ಠಾಣೆಗೆ ಪೊಲೀಸರು ಕರೆದುಕೊಂಡು ಹೋಗಿದ್ದ ವೇಳೆ ಠಾಣೆಯಲ್ಲಿ ವಿಪ ಸದಸ್ಯ ಸಿ.ಟಿ. ರವಿ ಅವರನ್ನು ಇರಿಸಲಾಗಿತ್ತು. ಈ ಕುರಿತು ಪ್ರಶ್ನಿಸಿದರೆ ಪೊಲೀಸರು ಸಮರ್ಪಕ ಮಾಹಿತಿ ನೀಡಲಿಲ್ಲ. ನಮ್ಮ ದೂರನ್ನೂ ಸ್ವೀಕರಿಸಲಿಲ್ಲ. ಈ ಕುರಿತು ಪ್ರಶ್ನಿಸಿದರೆ ನಮ್ಮನ್ನೆಲ್ಲ ಠಾಣೆಯಿಂದ ಹೊರಹಾಕಿದರು. ನಂತರ ಸಿ.ಟಿ. ರವಿ ಅವರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಬೆಳಗಾವಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪೊಲೀಸ್‌ ವಾಹನಗಳಲ್ಲಿ ಸುತ್ತಾಡಿಸಿದ್ದಾರೆ. ಶುಕ್ರವಾರ ಬೆಳಗ್ಗೆ 10.30ಕ್ಕೆ ಬೆಳಗಾವಿಯ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ಪ್ರಕರಣದಿಂದ ವಿಧಾನ ಪರಿಷತ್ತಿನ ಎಲ್ಲ ಸದಸ್ಯರಿಗೆ ಹಕ್ಕುಚ್ಯುತಿಯಾಗಿದೆ. ಈ ಕುರಿತು ತಾವು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ವಿಪ ಸದಸ್ಯರಿಗೆ ಆಗಿರುವ ಹಕ್ಕುಚ್ಯುತಿಗೆ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ