ಪಬ್ಲಿಕ್‌ ಪರೀಕ್ಷೆ ನಡೆಸಿ ಮಕ್ಕಳ ಹಿತ ಕಡೆಗಣನೆ: ಸತೀಶ ಕೊಳೇನಹಳ್ಳಿ

KannadaprabhaNewsNetwork | Published : Mar 20, 2024 1:25 AM

ಸಾರಾಂಶ

ಮುಂದಾಲೋಚನೆ ಇಲ್ಲದ ಕಾಂಗ್ರೆಸ್ ಸರ್ಕಾರದ ಮೊಂಡುತನದ ನಡೆಯಿಂದ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವಂತೆ ಬೋರ್ಡ್ ಪರೀಕ್ಷೆ, ಪಬ್ಲಿಕ್ ಪರೀಕ್ಷೆಗಳ ನಡೆಸುವ ಮೂಲಕ ಮಕ್ಕಳು ಖಿನ್ನತೆಗೆ ಒಳಗಾಗುವ ಪರಿಸ್ಥಿತಿ ಕಾಂಗ್ರೆಸ್ ಸರ್ಕಾರ ತಂದೊಡ್ಡುತ್ತಿದೆ. ಬೋರ್ಡ್, ಪಬ್ಲಿಕ್ ಪರೀಕ್ಷೆ ನಡೆಸಿಯೇ ತೀರುವುದಾಗಿ ಕಾಂಗ್ರೆಸ್ ಸರ್ಕಾರ ಮೊಂಡುತನ ಮಾಡುತ್ತಾ, ಮಕ್ಕಳ ಹಿತವನ್ನೇ ಸಂಪೂರ್ಣವಾಗಿ ಕಡೆಗಣಿಸುತ್ತಿದೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯದಲ್ಲಿ 8, 9 ಹಾಗೂ ಪ್ರಥಮ ಪಿಯುಸಿಗೆ ರಾಜ್ಯ ಮಟ್ಟದಲ್ಲಿ ಬೋರ್ಡ್ ಹಾಗೂ ಪಬ್ಲಿಕ್ ಪರೀಕ್ಷೆ ನಡೆಸುವ ಮೂಲಕ ಅವೈಜ್ಞಾನಿಕ, ಶಿಕ್ಷಣ ವಿರೋಧಿ ನಡೆ ಅನುಸರಿಸುವ ಮೂಲಕ ಕಾಂಗ್ರೆಸ್ ಸರ್ಕಾರವು ಶಿಕ್ಷಣದಲ್ಲಿ ತಾಲಿಬಾನ್ ನೀತಿ ಜಾರಿ ಮಾಡುತ್ತಾ, ತುಘಲಕ್ ಆಳ್ವಿಕೆ ನಡೆಸುತ್ತಿದೆ ಎಂದು ಬಿಜೆಪಿ ರೈತ ಮೋರ್ಚಾ ಮುಖಂಡ ಬಿ.ಎಂ.ಸತೀಶ ಕೊಳೇನಹಳ್ಳಿ ಆರೋಪಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಂದಾಲೋಚನೆ ಇಲ್ಲದ ಕಾಂಗ್ರೆಸ್ ಸರ್ಕಾರದ ಮೊಂಡುತನದ ನಡೆಯಿಂದ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವಂತೆ ಬೋರ್ಡ್ ಪರೀಕ್ಷೆ, ಪಬ್ಲಿಕ್ ಪರೀಕ್ಷೆಗಳ ನಡೆಸುವ ಮೂಲಕ ಮಕ್ಕಳು ಖಿನ್ನತೆಗೆ ಒಳಗಾಗುವ ಪರಿಸ್ಥಿತಿ ಕಾಂಗ್ರೆಸ್ ಸರ್ಕಾರ ತಂದೊಡ್ಡುತ್ತಿದೆ. ಬೋರ್ಡ್, ಪಬ್ಲಿಕ್ ಪರೀಕ್ಷೆ ನಡೆಸಿಯೇ ತೀರುವುದಾಗಿ ಕಾಂಗ್ರೆಸ್ ಸರ್ಕಾರ ಮೊಂಡುತನ ಮಾಡುತ್ತಾ, ಮಕ್ಕಳ ಹಿತವನ್ನೇ ಸಂಪೂರ್ಣವಾಗಿ ಕಡೆಗಣಿಸುತ್ತಿದೆ ಎಂದು ದೂರಿದರು.

ಮಕ್ಕಳ ಭ‍ವಿಷ್ಯ, ಹಿತಕ್ಕಿಂತ ತನ್ನ ಹಠವೇ ಮುಖ್ಯವಾಗಿದೆ. ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟವಾಡುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಶಾಲೆಯಲ್ಲಿ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಸಿ, ನಿರಂತರ ಕಲಿಸುವ ವೃತ್ತಿ ನೈಪುಣ್ಯ ಶಿಕ್ಷಕರನ್ನು ಒದಗಿಸಿ, ಕಲಿಯುವ ಮಕ್ಕಳ ಕಲಿಕೆಯ ಮಟ್ಟವನ್ನು ನಿರಂತರ ಮೌಲ್ಯಮಾಪನ ಮಾಡುವ ಮೂಲಕ ಮಕ್ಕಳು ಸಮರ್ಥ ಮತ್ತು ಪರಿಣಾಮಕಾರಿಯಾಗಿ ಕಲಿಯಲು ನಿರಂತರವಾಗಿ ಕೈಹಿಡಿದು, ನಡೆಸಬಹುದಾದ ಮಕ್ಕಳ ಸ್ನೇಹಿ ಶಿಕ್ಷಣ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಮಕ್ಕಳಲ್ಲಿ ಆತ್ಮವಿಶ್ವಾಸ, ಆತ್ಮಸ್ಥೈರ್ಯ, ಸಕಾರಾತ್ಮಕ ಆಲೋಚನೆಗಳನ್ನು ತುಂಬಿ, ಶಿಕ್ಷಣ ಕಲಿಯಲು ಪ್ರೋತ್ಸಾಹಿಸಬೇಕಾದ ಸರ್ಕಾರವೇ ಮಕ್ಕಳಲ್ಲಿ ನಕಾರಾತ್ಮಕ ಆಲೋಚನೆ, ಭಯ, ಆತಂಕ, ಖಿನ್ನತೆ ಹುಟ್ಟು ಹಾಕುವ ಕೆಲಸ ಮಾಡಿದೆ. ಇದರಿಂದ ಮಕ್ಕಳಲ್ಲಿ ಮತ್ತು ಪಾಲಕರಲ್ಲಿ ತೀವ್ರ ಗೊಂದಲ ಉಂಟಾಗಿದೆ ಎಂದು ತಿಳಿಸಿದರು.

ತುಘಲಕ್‌ ದರ್ಬಾರ್ ಮಾಡುತ್ತಿರುವ ಮಜಾವಾದಿ ಕಾಂಗ್ರೆಸ್ ಸರ್ಕಾರದ ಎಡಬಿಡಂಗಿ ನಿರ್ಧಾರದಿಂದ ಶಾಲಾ ಮಕ್ಕಳ ಭವಿಷ್ಯಕ್ಕೆ ಕುತ್ತುಂಟಾಗಿದೆ. ಇದು ಸರ್ಕಾರ ಅವಿವೇಕತನದ ಪರಮಾವಧಿ. ರಾಜ್ಯ ಸರ್ಕಾರವು ಕೋರ್ಟ್ ಛೀಮಾರಿ ಹಾಕಿದ ನಂತರವಷ್ಟೇ ಅವಿವೇಕಿ ಕಾಂಗ್ರೆಸ್ ಸರ್ಕಾರಕ್ಕೆ ಇನ್ನೂ ಬುದ್ಧಿ ಬಂದಿಲ್ಲ. ಈಗಾಗಲೇ ಮೂರು ವಿಷಯಗಳ ಪರೀಕ್ಷೆ ಬರೆದ ಮಕ್ಕಳು ಉಳಿದ ಪರೀಕ್ಷೆಗಳು ರದ್ದಾಗಿರುವುದರಿಂದ ಪರೀಕ್ಷೆ ಬರೆಯಬೇಕೋ ಅಥವಾ ಬೇಡವೋ ಎಂಬ ಗೊಂದಲಕ್ಕೆ ಮಕ್ಕಳಷ್ಟೇ ಅಲ್ಲ, ಪಾಲಕರೂ ತುತ್ತಾಗಿದ್ದಾರೆ. ಸರಿಯಾದ ಮಾಹಿತಿ ಇಲ್ಲದೇ, ಪಾಲಕರು ದಿಕ್ಕೇ ತೋಚದಂತಾಗಿದ್ದಾರೆ ಎಂದು ಬಿ.ಎಂ.ಸತೀಶ ಕೊಳೇನಹಳ್ಳಿ ಹೇಳಿದರು.

ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿಲಕುಮಾರ ನಾಯ್ಕ, ಪಾಲಿಕೆ ಸದಸ್ಯ ಆರ್.ಶಿವಾನಂದ, ತ್ಯಾವಣಿಗೆ ವೀರಭದ್ರ ಸ್ವಾಮಿ, ಪೋತಲ ಶ್ರೀನಿವಾಸ, ಜಿ.ವಿ.ಗಂಗಾಧರ, ಶ್ಯಾಗಲೆ ಮಲ್ಲೇಶ, ದಂಡಪಾಣಿ ಇತರರಿದ್ದರು. .........

Share this article