ಮಹಿಳಾ ದಿನಾಚರಣೆ । ಸ್ತ್ರೀ ಸಮಾನತೆಯಿಂದ ಸದೃಢ ದೇಶ
ಕನ್ನಡಪ್ರಭ ವಾರ್ತೆ ಬೇಲೂರುಹೆಣ್ಣು ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತ ಬಂದಿದ್ದರೂ ಹೆಣ್ಣು ಭ್ರೂಣ ಎಂದಾಕ್ಷಣ ತೆಗೆದು ಹಾಕುವ ಕೆಲಸ ಮಾಡಲಾಗುತ್ತಿದೆ. ಯಾವುದೇ ಒಂದು ಜೀವಿಯು ದೇವರ ಅನುಗ್ರಹದಿಂದ ಭೂಮಿಗೆ ಬರುತ್ತವೆ. ಅಂತಹ ಶಿಶುಗಳನ್ನು ಕೊಲ್ಲುವುದು ಮಹಾಪರಾಧವಾಗಿದೆ. ಆದ್ದರಿಂದ ಸಮಾದಲ್ಲಿ ಹೆಣ್ಣುಮಕ್ಕಳ ಬಗ್ಗೆ ತಾತ್ಸಾರ ಮಾಡಬಾರದು ಎಂದು ರಾಜ್ಯ ಕದಳಿ ಮಹಿಳಾ ವೇದಿಕೆಯ ರಾಜ್ಯ ಸಂಚಾಲಕರು ಮತ್ತು ಸಾಹಿತಿ ಸುಶೀಲಾ ಸೋಮಶೇಖರ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ನೌಕರರ ಭವನ ಸಭಾಂಗಣದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು ಮತ್ತು ಕದಳಿ ಮಹಿಳಾ ವೇದಿಕೆ ಜಂಟಿಯಾಗಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟನೆ ನಡೆಸಿ ಮಾತನಾಡಿ, 12 ನೇಯ ಶತಮಾನದಲ್ಲಿ ಶರಣರು ಧಾರ್ಮಿಕ ಬದಲಾವಣೆಯ ಮೂಲಕ ಸಮಾಜದ ಪರಿವರ್ತನೆಗೆ ಪ್ರಯತ್ನಿಸಿದರು. ಒಂದು ಸಮಾಜ ಆರೋಗ್ಯ ಸ್ಥಿತಿಯನ್ನು ಕಾಣಲು ಪುರುಷ ಮತ್ತು ಸ್ತ್ರೀ ಸಮಾನತೆಯಿಂದ ಸದೃಡ ದೇಶವನ್ನು ಕಟ್ಟಲು ಸಾದ್ಯವಾಗುತ್ತದೆ. ಹೆಣ್ಣು ಮತ್ತು ಗಂಡಿನ ಭೇದವಿಲ್ಲದೆ ಸರ್ವರನ್ನು ಅಪ್ಪಿಕೊಂಡು ಜಗತ್ತಿಗೆ ಮಾದರಿಯಾದ ವಚನ ಸಾಹಿತ್ಯ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಹಿಳೆ ಮೊದಲು ತನ್ನಲ್ಲಿರುವ ಹಿಂಜರಿಕೆ ತೊರೆದು ಸಮಾಜದಲ್ಲಿ ತನ್ನ ಸ್ಥಾನವನ್ನು ಕಾಪಾಡಿಕೊಳ್ಳಲು ಮುಂದಾಗಬೇಕಿದೆ ಎಂದು ಹೇಳಿದರು.ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ರಾಮನಾಥಪುರ ಕುಮಾರಸ್ವಾಮಿ ಮಾತನಾಡಿ, ಯಾವುದೇ ಜಾತಿ ಮತ್ತು ಧರ್ಮ ಬೇಧವಿಲ್ಲದೆ ಸಮ ಸಮಾಜಕ್ಕೆ ಮುನ್ನುಡಿ ಬರೆದ ಶರಣರ ಕಾಲ ಸುವರ್ಣಯುಗವಾಗಿದೆ. ಇಂತಹ ಶರಣರ ವಚನ ಸಂದೇಶವನ್ನು ಸಮಾಜಕ್ಕೆ ನೀಡಬೇಕು ಎಂದು ಸುತ್ತೂರಿನ ಪೂಜ್ಯರು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಎಂಬ ಸಂಸ್ಥೆಯನ್ನು ಸ್ಥಾಪಿಸಿ ಶರಣರ ವಿಚಾರಧಾರೆಗಳನ್ನು ನಾಡಿಗೆ ತಿಳಿಸುವ ಕಾರ್ಯವನ್ನು ಮಾಡುತ್ತಿದ್ದಾರೆ ಎಂದರು.
ಹಾಸನ ಜಿಲ್ಲಾ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ತೀರ್ಥಕುಮಾರಿ ಮಾತನಾಡಿ, ಶರಣ ಚಳವಳಿ ಇಡೀ ವಿಶ್ವದಲ್ಲೇ ಎಲ್ಲ ಜಾತಿ, ಧರ್ಮ ಒಪ್ಪುವ ಕಾಲಘಟ್ಟವಾಗಿದೆ. ೧೨ನೆಯ ಶತಮಾನ ಮಹಿಳೆ ಮತ್ತು ಪುರುಷರಿಗೆ ಸಮಾನತೆ ಮತ್ತು ಗೌರವ ನೀಡಿದ್ದಾರೆ. ಅದರೂ ಕೆಲವು ಕಡೆಗಳಲ್ಲಿ ದೌರ್ಜನ್ಯ ಮತ್ತು ದಬ್ಬಾಳಿಕೆ ನಡೆಯುತ್ತಿದೆ. ಮಹಿಳೆಯರಿಗೆ ನೀಡಿದ ರಾಜಕೀಯ ಸ್ಥಾನಮಾನಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದರು.ತಾಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ.ಎಲ್.ರಾಜೇಗೌಡ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಹೇಮಾ ವಿರೂಪಾಕ್ಷ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಚಂದನ ಕುಮಾರ್, ತಾಲೂಕು ಯುವ ಘಟಕದ ಅಧ್ಯಕ್ಷ ಸಿ.ಎಚ್.ಮಹೇಶ್, ಮಾಜಿ ಅಧ್ಯಕ್ಷ ಸಿ.ಎಂ.ನಿಂಗರಾಜ್, ಪದಾಧಿಕಾರಿಗಳಾದ ಹೆಬ್ಬಾಳು ಹಾಲಪ್ಪ, ಬೊಮ್ಮಡಿಹಳ್ಳಿ ಕುಮಾರಸ್ವಾಮಿ, ಮಲ್ಲಿಕಾರ್ಜುನ್, ಸೌಭಾಗ್ಯ, ನಾಗಭೂಷಣ, ಪತ್ರಕರ್ತ ಸುನಿಲ್ ಪಡುವಳಲು ಹಾಜರಿದ್ದರು.
ಬೇಲೂರು ತಾಲೂಕು ಶರಣ ಸಾಹಿತ್ಯ ಪರಿಷತ್ತು ಮತ್ತು ತಾಲೂಕು ಕದಳಿ ಮಹಿಳಾ ವೇದಿಕೆ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.