ಕಾರ್ಕಳ: ಇಲ್ಲಿನ ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆ (ಕೆ.ಜಿ.ಟಿ.ಟಿ.ಐ)ಯಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ 80ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಕೌಶಲ್ಯತಾ ಪ್ರಮಾಣಪತ್ರಗಳನ್ನು ಶಾಸಕ ವಿ. ಸುನಿಲ್ ಕುಮಾರ್ ವಿತರಿಸಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ತಾಂತ್ರಿಕ ಶಿಕ್ಷಣವನ್ನು ಒದಗಿಸುವ ಉದ್ದೇಶದಿಂದ ಈ ಸಂಸ್ಥೆಯನ್ನು ಕಾರ್ಕಳಕ್ಕೆ ತರಲಾಗಿದೆ ಎಂದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಪದವಿ ಸಾಕಾಗುವುದಿಲ್ಲ. ಉದ್ಯೋಗಾಧಾರಿತ ಕೌಶಲ್ಯಗಳೂ ಅಗತ್ಯವಾಗಿದೆ. ವಿದ್ಯಾರ್ಥಿಗಳು ಐಟಿ ಹಾಗೂ ತಾಂತ್ರಿಕ ಕ್ಷೇತ್ರಗಳಲ್ಲಿ ತರಬೇತಿ ಪಡೆದು ತಮ್ಮ ಭವಿಷ್ಯ ಬಲಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.ಈ ಸಂದರ್ಭ ಐಟಿ ಎಸೆನ್ಶಿಯಲ್ಸ್, ಟ್ಯಾಲಿ ಹಾಗೂ ಸಿಎನ್‌ಸಿ ಮಷಿನಿಸ್ಟ್ ಕೋರ್ಸ್‌ಗಳನ್ನು ಯಶಸ್ವಿಯಾಗಿ ಪೂರೈಸಿದ ವಿಟಿಯು ಮತ್ತು ಗ್ರಾಂಡ್ಸ್ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ತರಬೇತಿ ಪಡೆದ ವಿದ್ಯಾರ್ಥಿಗಳು ಉದ್ಯೋಗ ಹಾಗೂ ಸ್ವಂತ ಉದ್ಯಮ ಕ್ಷೇತ್ರಗಳಲ್ಲಿ ಮುಂದುವರಿಯಲು ಇದು ಸಹಕಾರಿಯಾಗಲಿದೆ ಎಂದು ಶಾಸಕರು ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಪ್ರಾಂಶುಪಾಲೆ ಸಹನಾ, ಹೆಬ್ರಿ ಕಾಲೇಜು ಪ್ರಾಂಶುಪಾಲ ಡಾ. ವಿದ್ಯಾಧರ್ ಹೆಗ್ಡೆ ಎಸ್., ಮುನಿಯಾಲು ಕಾಲೇಜು ಪ್ರಾಂಶುಪಾಲ ಪ್ರೊ. ಸುಧಾಕರ್ ಕೆ.ಜಿ., ವಸತಿ ನಿಲಯ ಅಧೀಕ್ಷಕಿ ಜಯಂತಿ ಸುರೇಶ್ ಶೆಟ್ಟಿ ಹಾಗೂ ಉಪನ್ಯಾಸಕರಾದ ದೀಪಿಕಾ, ಗೌತಮ್, ವಿಂದ್ಯಾ ಮತ್ತು ಸುಶ್ಮಿತಾ ಉಪಸ್ಥಿತರಿದ್ದರು. ರಕ್ಷಿತ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.