ಕನ್ನಡಪ್ರಭ ವಾರ್ತೆ ಕಾಪು
ಇಲ್ಲಿನ ಅದಾನಿ ಸಮೂಹದ ಅದಾನಿ ಪವರ್ ಲಿಮಿಟೆಡ್ - ಉಡುಪಿ ಟಿಪಿಪಿ ಸಂಸ್ಥೆಯು ತನ್ನ ಸಿಎಸ್‌ಆರ್ ಕಾರ್ಯಕ್ರಮಗಳನ್ನು ನಿರ್ವಹಿಸುವ ಅಂಗ ಸಂಸ್ಥೆಯಾದ ಅದಾನಿ ಫೌಂಡೇಶನ್ ಮೂಲಕ ಸ್ಥಳೀಯ ೭೬ ಸರ್ಕಾರಿ / ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಕಲಿಯುತ್ತಿರುವ ಸುಮಾರು ೬,೮೦೦ ವಿದ್ಯಾರ್ಥಿಗಳಿಗೆ ಒಟ್ಟು ೬೦ ಲಕ್ಷ ರು. ಮೌಲ್ಯದ ಶಿಕ್ಷಣ ಪರಿಕರಗಳನ್ನು ವಿತರಿಸಿತು.ಪಡುಬಿದ್ರಿಯ ಬಂಟರ ಭವನದ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅದಾನಿ ಸಮೂಹದ ಅಧ್ಯಕ್ಷ ಕಿಶೋರ್ ಆಳ್ವ, ಉಡುಪಿ ವಿದ್ಯುತ್ ಸ್ಥಾವರವು ಅದಾನಿ ಸಮೂಹವು ಪ್ರತಿ ವರ್ಷ ತನ್ನ ಸಿಎಸ್‌ಆರ್ ಅನುದಾನದಲ್ಲಿ ಶೇ. ೨೦ ರಷ್ಟು ಅನುದಾನವನ್ನು ಶಿಕ್ಷಣ ಕ್ಷೇತ್ರಕ್ಕೆ ವಿನಿಯೋಗಿಸುತ್ತಿದೆ. ಮುಖ್ಯವಾಗಿ ಶಿಕ್ಷಣ ಪರಿಕರ, ವಿದ್ಯಾರ್ಥಿವೇತನ, ಬಡ ಪ್ರತಿಭಾನ್ವಿತ ಸಹಾಯಧನ, ಉನ್ನತ ಶಿಕ್ಷಣಕ್ಕೆ ಲ್ಯಾಪ್ ಟಾಪ್, ಶಾಲೆಯ ಮೂಲಭೂತ ಸೌಕರ್ಯ ಅಭಿವೃದ್ಧಿ, ಶೌಚಾಲಯ ನಿರ್ಮಾಣಕ್ಕೆ ಬಳಸುತ್ತಿದೆ ಎಂದರು.
ಸಮಾರಂಭದಲ್ಲಿ ಬೆಳಪು ಗ್ರಾ.ಪಂ. ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ, ಪಡುಬಿದ್ರಿ ಗ್ರಾ.ಪಂ. ಅಧ್ಯಕ್ಷೆ ಶಕುಂತಲಾ, ಬಡಾ ಗ್ರಾ.ಪಂ. ಅಧ್ಯಕ್ಷ ಶಿವಕುಮಾರ್ ಮೆಂಡನ್, ಬಳಕುಂಜೆ ಗ್ರಾ.ಪಂ. ಅಧ್ಯಕ್ಷೆ ಮಮತಾ ದಿವಾಕರ್ ಪೂಂಜಾ, ಕುತ್ಯಾರು ಗ್ರಾ.ಪಂ. ಅಧ್ಯಕ್ಷ ಜನಾರ್ದನ ಆಚಾರ್ಯ, ಮುದರಂಗಡಿ ಗ್ರಾ.ಪಂ. ಅಧ್ಯಕ್ಷೆ ನಮಿತಾ, ತೆಂಕ ಗ್ರಾ.ಪಂ. ಅಧ್ಯಕ್ಷೆ ಸುರೇಖ, ಎಲ್ಲೂರು ಗ್ರಾ.ಪಂ. ಉಪಾಧ್ಯಕ್ಷೆ ಉಷಾ, ತಾಲೂಕು ಯುವಜನ ಕ್ರೀಡೆಯ ಅಧಿಕಾರಿ ರಿತೇಶ್ ಶೆಟ್ಟಿ ಉಪಸ್ಥಿತರಿದ್ದರು.ಅದಾನಿ ಸಮೂಹದ ಸಹಮಹಾಪ್ರಬಂಧಕ ರವಿ ಆರ್. ಜೇರೆ ಸ್ವಾಗತಿಸಿದರು, ಪಲಿಮಾರು ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಸುಧಾಕರ್ ಶೆಣೈ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು. ಅದಾನಿ ಫೌಂಡೇಶನ್ ಸಂಸ್ಥೆಯ ಅನುದೀಪ್, ಧೀರಜ್ ಹಾಗೂ ಶುಭಮಂಗಳ ಸಹಕರಿಸಿದರು.