ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಪಟ್ಟಣದ ಶಿಕ್ಷಕರ ಭವನದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾ. ಘಟಕ ಆಯೋಜನೆ ಮಾಡಿದ್ದ ವಿಶ್ವ ಮಹಿಳಾ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿಗಳನ್ನು ಹೆಚ್ಚಿಸದೇ ಹೋದಲ್ಲಿ, ಮುಂದಿನ ದಿನಗಳಲ್ಲಿ ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿ ಶಿಕ್ಷಕರ ನೇಮಕಾತಿ ನಿಲ್ಲಿಸುವ ಸಾಧ್ಯತೆಯೂ ಹೆಚ್ಚಿದೆ ಎಂದು ಆತಂಕ ಹೊರಹಾಕಿದರು.
ಶಾಲೆ ಒಂದರ ಶಿಕ್ಷಕ ನಗರ ಪ್ರದೇಶಕ್ಕೆ ಆಗಮಿಸುವ ಸಲುವಾಗಿ ೫ ಮಕ್ಕಳಿದ್ದ ಶಾಲೆಗೆ ದಾಖಲಾತಿ ಒಂದೂ ಇಲ್ಲವೆಂದು ವರದಿ ಮಾಡುತ್ತಾರೆ, ಇದರ ಬಗ್ಗೆ ಗ್ರಾಮೀಣ ಪ್ರದೇಶದ ಜನರು ತಿಳಿಸಿದ ನಂತರ ಕೈಗೊಂಡ ಕಾರ್ಯದಿಂದ ೨೦ಕ್ಕೂ ಹೆಚ್ಚು ಮಕ್ಕಳು ದಾಖಲಾಗಿದ್ದಾರೆ ಎಂದು ತಿಳಿಸಿ, ಆ ಶಿಕ್ಷಕರ ಧೋರಣೆಯನ್ನು ಟೀಕಿಸಿದರು.ಸಂಸ್ಕಾರ ಕಲಿಸಿ: ರಾಜ್ಯ ಸರ್ಕಾರ ಶಿಕ್ಷಕರ ನೇಮಕಾತಿಯಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಿದೆ, ಕಾರಣವೇನೆಂದರೆ ಮಾತೃ ಹೃದಯ ಹೊಂದಿರುವ ಮಹಿಳೆ ಶಿಕ್ಷಕಿಯಾಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಬೋಧನೆ ನೀಡುವ ಜತೆಗೆ ಸಂಸ್ಕಾರವನ್ನು ಕಲಿಸಿ, ಭವಿಷ್ಯ ರೂಪಿಸುವಲ್ಲಿ ಒಳ್ಳೆಯ ಬುನಾದಿ ಹಾಕಿಕೊಡುತ್ತಾರೆ ಎಂಬ ಇಂಗಿತದೊಂದಿಗೆ ನೇಮಿಸಿಕೊಂಡಿದ್ದಾರೆ ಎಂದು ಭಾವಿಸಿದ್ದೇವೆ, ಆದರೆ ಕೆಲವು ಶಿಕ್ಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಿ, ಆ ಶಾಲೆಗಳಲ್ಲಿ ನೀಡುವ ಪ್ರಾಜೆಕ್ಟ್ ವರ್ಕ್‌ಗಳನ್ನು ರಾತ್ರಿ ೧೧ ಗಂಟೆ ತನಕ ಸಿದ್ಧಪಡಿಸುತ್ತಾರೆ, ಆದರೆ ಸರ್ಕಾರಿ ಶಾಲೆಯಲ್ಲಿ ಒಂದು ಪ್ರಾಜೆಕ್ಟ್ ವರ್ಕ್‌ಗಳನ್ನು ಮಾಡಿಸಲ್ಲ, ಇಂತಹ ಪರಿಸ್ಥಿತಿಯಲ್ಲಿ ಕಲಿಕೆ ಸಾಗುತ್ತಿರುವಾಗ ಪೋಷಕರು ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುತ್ತಾರೆ. ಸರ್ಕಾರಿ ಶಾಲೆಗಳ ಉಳಿವಿಗಾಗಿ ಮಹಿಳಾ ಶಿಕ್ಷಕರು ಹೆಚ್ಚಿನ ಬದ್ಧತೆಯೊಂದಿಗೆ ವಿದ್ಯಾರ್ಥಿಗಳ ಕಲಿಕೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಸಲಹೆ ನೀಡಿದರು.
ಡೆಂಘೀ ಬಗ್ಗೆ ಎಚ್ಚರ: ಡೆಂಘೀ ಜ್ವರ ಉಲ್ಪಣಿಸುತ್ತಿದ್ದು, ತರಗತಿಗಳಲ್ಲಿ ಸೊಳ್ಳೆ ನಿಯಂತ್ರಣ ಸಾಧನಗಳನ್ನು ಬಳಸಿ, ವಿದ್ಯಾರ್ಥಿಗಳಿಗೆ ಜ್ವರ ಇದ್ದಲ್ಲಿ ಹೆಚ್ಚಿನ ಕಾಳಜಿ ತೋರುವಂತೆ ಪೋಷಕರಿಗೆ ತಿಳಿಸಿ ಮತ್ತು ಗ್ರಾ.ಪಂ. ಪಿಡಿಒ ಹಾಗೂ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿ ಎಂದರು.
ಶಿಕ್ಷಕಿ ಜಯಶೀಲ ಅವರು ಪ್ರಧಾನ ಭಾಷಣ ಮಾಡಿದರು. ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸಪ್ನ ಮಾತನಾಡಿದರು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ೧೦ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗೇಗೌಡ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾಧ್ಯಕ್ಷ ಅಣ್ಣಪ್ಪ, ಗೌರವಾಧ್ಯಕ್ಷ ರಾಜಶೇಖರ್, ತಾಲೂಕು ಘಟಕ ಅಧ್ಯಕ್ಷ ಯತೀಶ್ ಎನ್.ಎಸ್. ಅಧಿಕಾರಿಗಳಾದ ಪುಷ್ಪಲತಾ, ಶಾರದಾ, ರಾಮಚಂದ್ರ, ಬಿ.ಕಾಳೇಗೌಡ, ರವಿಪ್ರಕಾಶ್, ರಾಮಚಂದ್ರಪ್ಪ, ಶಿಕ್ಷಕರ ಸಂಘದ ನಿರ್ದೇಶಕರಾದ ಕೆ.ಟಿ.ರವಿ., ನಾಗರಾಜು, ಶೇಖರ್, ಚಂದ್ರಕಲಾ ಡಿ, ಮಹಾಲಿಂಗ, ಮಲ್ಲರಾಜೇಗೌಡ, ನಾಗರತ್ನಮ್ಮ, ಲೀಲಾವತಿ, ಮಂಜುನಾಥ್, ಬೋಗೇಶ್ ಇತರರು ಇದ್ದರು.