ಎಕರೆಗೆ ಮೂರು ಚೀಲ ಯೂರಿಯಾ ವಿತರಣೆ ಅಸಾಧ್ಯ: ಶಾಸಕ ನೇಮರಾಜ ನಾಯ್ಕ

KannadaprabhaNewsNetwork |  
Published : Jun 06, 2026, 02:00 AM IST
ಹಗರಿಬೊಮ್ಮನಹಳ್ಳಿಯ ಆಡಳಿತ ಸೌಧದಲ್ಲಿ ಶುಕ್ರವಾರ ನಾನಾ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಶಾಸಕ ನೇಮರಾಜ್ ನಾಯ್ಕ ಸಸಿಗಳಿಗೆ ನೀರುಣಿಸಿದರು. | Kannada Prabha

ಸಾರಾಂಶ

ಜಮೀನುಗಳಿಗೆ ಕೊಟ್ಟಿಗೆ ಗೊಬ್ಬರ ಮತ್ತು ಹಸಿರೆಲೆ ಗೊಬ್ಬರಗಳನ್ನು ಒದಗಿಸುವ ನಿಟ್ಟಿನಲ್ಲಿ ರೈತರು ಚಿಂತಿಸಬೇಕು

ಹಗರಿಬೊಮ್ಮನಹಳ್ಳಿ: ತಾಲೂಕಿನ ರೈತರ ಬೇಡಿಕೆಯಂತೆ ಎಕರೆಗೆ ಮೂರು ಚೀಲ ಯೂರಿಯಾ ವಿತರಣೆ ಸಾಧ್ಯವಾಗುವುದಿಲ್ಲ. ಆದರೆ, ಸಾಕಷ್ಟು ದಾಸ್ತಾನಿರುವ ನ್ಯಾನೋ ಯೂರಿಯಾ ಸದ್ಬಳಕೆ ಮಾಡಿಕೊಳ್ಳುವ ಜೊತೆಗೆ ಜಮೀನುಗಳಿಗೆ ಕೊಟ್ಟಿಗೆ ಗೊಬ್ಬರ ಮತ್ತು ಹಸಿರೆಲೆ ಗೊಬ್ಬರಗಳನ್ನು ಒದಗಿಸುವ ನಿಟ್ಟಿನಲ್ಲಿ ರೈತರು ಚಿಂತಿಸಬೇಕು ಎಂದು ಶಾಸಕ ನೇಮರಾಜ್ ನಾಯ್ಕ ಸ್ಪಷ್ಟಪಡಿಸಿದರು.

ಪಟ್ಟಣದ ಆಡಳಿತ ಸೌಧದ ಆವರಣದಲ್ಲಿ ಸಸಿಗಳನ್ನು ನೆಡುವ ಮೂಲಕ ತಾಲೂಕಿನ ನಾನಾ ಇಲಾಖೆಗಳ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕಳೆದ ೪೫ ದಿನಗಳ ಅಂತರದಲ್ಲಿ ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿದ್ದ ತಾಲೂಕಿನ ಮೂವರು ರೈತರು ದಾರುಣವಾಗಿ ಸಾವನ್ನಪ್ಪಿರುವುದು ದುರದೃಷ್ಟಕರವಾಗಿದೆ. ಪರಿಹಾರ ಕುರಿತಂತೆ ಸಲ್ಲಿಸಲಾಗಿದ್ದ ಪ್ರಸ್ತಾವನೆಗೆ ಸರ್ಕಾರ ಹಣ ಬಿಡುಗಡೆ ಮಾಡಿದೆ. ಒಂದು ವಾರದಲ್ಲಿ ಪ್ರಕೃತಿ ವಿಕೋಪ ಪರಿಹಾರ ನಿಧಿ ಯೋಜನೆಯಡಿ ರೈತರಿಗೆ ಪರಿಹಾರ ನೀಡಲಾಗುತ್ತದೆ ಎಂದು ತಿಳಿಸಿದರು.

ವರದಾಪುರ ಏತ ನೀರಾವರಿ ಯೋಜನೆ ಸಹಿತ ತಾಲೂಕಿನ ೧೭ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕುರಿತಂತೆ ನದಿ ನೀರಿನ ಸಂಗ್ರಹದ ಪರವಾನಗಿಗಾಗಿ ಸಲ್ಲಿಸಿರುವ ಪ್ರಸ್ತಾವನೆಗೆ ಅನುಮೋದನೆ ನೀಡುವುದು ಮತ್ತು ಬಗರ್ ಹುಕುಂ ಯೊಜನೆಯಡಿ ಪಟ್ಟಾಗಳಿಗಾಗಿ ಈ ಹಿಂದೆ ರೈತರು ಸಲ್ಲಿಸಿರುವ ಅರ್ಜಿಗಳನ್ನು ಪರಿಶೀಲಿಸಿ ಪಟ್ಟಾ ವಿತರಿಸಲು ಒತ್ತಾಯಿಸಿ ಮುಂದಿನ ಅಧಿವೇಶನದಲ್ಲಿ ಗಮನ ಸೆಳೆದು ನೂತನ ಸರ್ಕಾರಕ್ಕೆ ಆಗ್ರಹಿಸುವುದಾಗಿ ಭರವಸೆ ನೀಡಿದರು.

ತಾಪಂ ಇಒ ಪಿ.ವಿಶ್ವನಾಥ್, ಉಪ ತಹಸೀಲ್ದಾರ್ ಶಿವಕುಮಾರಗೌಡ, ತೋಟಗಾರಿಕೆ ಇಲಾಖೆಯ ವಿಜಯ್ ನಿಚ್ಚಾಪುರ್, ಅಬಕಾರಿ ಇಲಾಖೆಯ ಮಮತಾ, ಪಿಡಬ್ಲುಡಿ ಎಇಇ ಸತೀಶ್, ವಲಯ ಅರಣ್ಯಾಧಿಕಾರಿ ಗಂಟಿ ರಾಜೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಗದೀಶ್, ಪಶು ಸಂಗೋಪನಾ ಇಲಾಖೆಯ ಡಾ.ಸೂರಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ಬಾದಾಮಿ ಮೃತ್ಯುಂಜಯ, ಜಿಲ್ಲಾ ಉಪಾಧ್ಯಕ್ಷ ಕೃಷ್ಣಮೂರ್ತಿ ಶೆಟ್ಟರು, ತಾಲೂಕು ಅಧ್ಯಕ್ಷ ವೈ.ಮಲ್ಲಿಕಾರ್ಜುನ, ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಸಿ.ಎಚ್.ಸಿದ್ಧರಾಜು, ಮುಖಂಡರಾದ ಚಿತವಾಡಿಗಿ ಪ್ರಕಾಶ್, ಈ.ಕೃಷ್ಣಮೂರ್ತಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಂಗಡಗಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹ
ನೈಸರ್ಗಿಕ ಸಂಪನ್ಮೂಲ ಉಳಿಸಲು ಶ್ರಮಿಸಿ