ಗದಗ: ಜಿಲ್ಲೆಯ ರೈತರಿಗೆ ಸಕಾಲದಲ್ಲಿ ಯಾವುದೇ ಲೋಪದೋಷಗಳಿಲ್ಲದ, ಅತ್ಯಂತ ಗುಣಮಟ್ಟದ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಪೂರೈಸಲು ಕೃಷಿ ಇಲಾಖೆ ಹಾಗೂ ಕೃಷಿ ಪರಿಕರ ವಿತರಕರು ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಚೇತನಾ ಪಾಟೀಲ ಹೇಳಿದರು.
ಕೃಷಿ ವಲಯದಲ್ಲಿ ಉತ್ತಮ ಇಳುವರಿ ಹಾಗೂ ಉತ್ಪಾದನೆ ಹೆಚ್ಚಿಸಲು ಪರಿಕರಗಳ ಗುಣಮಟ್ಟ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ, ವಿತರಕರು ಕಡ್ಡಾಯವಾಗಿ ಸರ್ಕಾರದ ನಿಯಮಾವಳಿಗಳನ್ನು ಪಾಲಿಸುವ ಮೂಲಕ ರೈತರ ನಂಬಿಕೆ ಉಳಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಕೃಷಿ ಮತ್ತು ಸಂಬಂಧಿತ ಕಾನೂನುಗಳ ಕೇಂದ್ರದ ನಿರ್ದೇಶಕ ವೆಂಕಟರವಣಪ್ಪ ಮಾತನಾಡಿ, ಕೃಷಿ ಪರಿಕರಗಳ ಮಾರಾಟ ಕೇವಲ ವ್ಯವಹಾರವಲ್ಲ. ಅದು ದೇಶದ ಆಹಾರ ಭದ್ರತೆಯೊಂದಿಗೆ ಬೆಸೆದುಕೊಂಡಿದೆ. ವಿತರಕರು ಬೀಜ ಅಧಿನಿಯಮ, ರಸಗೊಬ್ಬರ ನಿಯಂತ್ರಣ ಆದೇಶ (ಎಫ್ಸಿಓ) ಹಾಗೂ ಕೀಟನಾಶಕ ಅಧಿನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
ಅಂಗಡಿಗಳಲ್ಲಿ ದಾಸ್ತಾನು ಬೋರ್ಡ್ ಪ್ರದರ್ಶಿಸುವುದು, ರೈತರಿಗೆ ಕಡ್ಡಾಯವಾಗಿ ಬಿಲ್ ನೀಡುವುದು, ಲೇಬಲ್ ನಿಯಮಗಳನ್ನು ಅನುಸರಿಸುವುದು ಹಾಗೂ ಸೂಕ್ತ ದಾಖಲೆಗಳನ್ನು ನಿರ್ವಹಿಸುವುದು ಕಾನೂನುಬದ್ಧವಾಗಿ ಅತ್ಯಗತ್ಯ ಎಂದು ವಿವರಿಸಿದರು.ಇದೇ ವೇಳೆ ಕೃಷಿ ಅಧಿಕಾರಿಗಳು ಕೈಗೊಳ್ಳುವ ಪರಿಕರಗಳ ಮಾದರಿ ಸಂಗ್ರಹ ಮತ್ತು ಸಂಗ್ರಹಣಾ ವಿಧಾನಗಳ ತಾಂತ್ರಿಕ ಅಂಶಗಳ ಕುರಿತು ಹಾಗೂ ರೈತರಿಗೆ ಸರಿಯಾದ ಮಾರ್ಗದರ್ಶನ ನೀಡುವ ಬಗ್ಗೆ ಅವರು ವಿತರಕರಿಗೂ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ವಿತರಕರು ತಂತ್ರಾಂಶದ ಬಳಕೆಯಲ್ಲಿ ಎದುರಿಸುತ್ತಿರುವ ತಾಂತ್ರಿಕ ಸವಾಲುಗಳು ಹಾಗೂ ಗೊಂದಲಗಳಿಗೆ ಪ್ರಾಯೋಗಿಕ ಪರಿಹಾರಗಳನ್ನು ಒದಗಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಹಾತ್ಮಾ ಗಾಂಧಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಸಹಾಯಕ ನಿರ್ದೇಶಕರು (ತರಬೇತಿ) ಆಗಿರುವ ಡಾ. ಅಬ್ದುಲ್ ಅಜೀಜ್ ಮುಲ್ಲಾ ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ 300ಕ್ಕೂ ಹೆಚ್ಚು ಕೃಷಿ ಪರಿಕರ ವಿತರಕರು, ಕೃಷಿ ಅಧಿಕಾರಿಗಳು ಹಾಗೂ ಕೃಷಿ ಇಲಾಖೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಆರಂಭದಲ್ಲಿ ಸ್ಫೂರ್ತಿ ಜಿ.ಎಸ್. ಸ್ವಾಗತಿಸಿದರು. ಮುಂಡರಗಿ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ ನಿರೂಪಿಸಿದರು.