ಧಾರವಾಡ: ಆಕಾಶವಾಣಿ ಪ್ರಾದೇಶಿಕ ಸುದ್ದಿ ವಿಭಾಗವನ್ನು ಬೆಂಗಳೂರಿಗೆ ಸ್ಥಳಾಂತರಿಸುವ ಪ್ರಸ್ತಾವನೆಯನ್ನು ಹೋರಾಟದ ಮೂಲಕ ತಡೆದಿರುವ ಧಾರವಾಡದ ಜನಕ್ಕೆ ಮತ್ತೊಂದು ಆತಂಕ ಶುರುವಾಗಿದೆ. ಇಲ್ಲಿಯ ರೈಲ್ವೆ ಮೇಲ್ ಸೇವೆ (ಆರ್‌ಎಂಎಸ್) ಕಚೇರಿಯನ್ನು ಧಾರವಾಡದಿಂದ ಹುಬ್ಬಳ್ಳಿಗೆ ಸ್ಥಳಾಂತರಿಸುತ್ತಿದ್ದು, ಇದಕ್ಕಾಗಿ ಮತ್ತೊಂದು ಹೋರಾಟ ಶುರುವಾಗುವ ಸಾಧ್ಯತೆ ಹೆಚ್ಚಿದೆ.
ಏನಿದರ ಮಹತ್ವ?
ಈಗ ಧಾರವಾಡದಲ್ಲಿ ಸ್ವಂತ ಕಟ್ಟಡವಿದ್ದು ಆರ್‌ಎಂಎಸ್ ಸೇವೆ ಉತ್ತಮ ಮಟ್ಟದಲ್ಲಿದೆ. ಅಲ್ಲದೆ ಅಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕೆಲಸವಿದೆ. ಈ ಕಚೇರಿಯನ್ನು ಹುಬ್ಬಳ್ಳಿಗೆ ಸ್ಥಳಾಂತರಿಸುವುದರಿಂದ ಧಾರವಾಡ ಮತ್ತು ಧಾರವಾಡಕ್ಕೆ ಸಮೀಪದಲ್ಲಿರುವ ಉತ್ತರ ಕನ್ನಡ ಜಿಲ್ಲೆಯ ಕೆಲವು ಪ್ರದೇಶಗಳ ಪತ್ರ ತಡವಾಗಿ ತಲುಪಲಿವೆ. ಆರ್ಥಿಕವಾಗಿ ಹಾನಿಯೂ ಉಂಟಾಗಬಹುದಲ್ಲದೆ, ಜನರಲ್ಲಿ ಕೆಟ್ಟ ಅಭಿಪ್ರಾಯಗಳೂ ಮೂಡುತ್ತವೆ. ಧಾರವಾಡವು ಜಿಲ್ಲಾ ಕೇಂದ್ರವಾಗಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರದ ಕೆಲವು ಮುಖ್ಯ ಕಚೇರಿ, ಉಚ್ಚ ನ್ಯಾಯಾಲಯ, ವಿಶ್ವವಿದ್ಯಾಲಯ, ಕರ್ನಾಟಕ ರಾಜ್ಯದ ಶೈಕ್ಷಣಿಕ ಕೇಂದ್ರಸ್ಥಳವಾಗಿ ಕೋಚಿಂಗ್ ಸೆಂಟರ್‌ಗಳು ಇಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಧಾರವಾಡದ ಜನರು ಆರ್‌ಎಂಎಸ್ ಕಚೇರಿಯನ್ನು ಬಹುವಾಗಿ ಉಪಯೋಗಿಸುತ್ತಿದ್ದು, ಕಚೇರಿ ಸ್ಥಳಾಂತರವು ಆಘಾತಕರವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.ಆರ್‌ಎಂಎಸ್‌ನಲ್ಲಿ ರಾತ್ರಿ 10.30ರ ವರೆಗೆ ಸೇವೆ ಲಭ್ಯವಿದ್ದು ಅದು ಎಲ್ಲರಿಗೂ ಅತ್ಯಂತ ಅನುಕೂಲಕರ. ಈಗ ಅದನ್ನು ಬಂದ್ ಮಾಡಿದರೆ ಪೋಸ್ಟಿನ ಆದಾಯ ಕಡಿಮೆ ಆಗುವುದಲ್ಲದೆ ಜನರು ಪೋಸ್ಟ್ ವ್ಯವಸ್ಥೆಯಿಂದ ದೂರ ಹೋಗಿ ಬೇರೆ ಸೇವೆಗಳಿಗೆ ಮೊರೆ ಹೋಗಬೇಕಾಗುತ್ತದೆ. ಈ ಕಚೇರಿಯನ್ನು ಒಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಇಲ್ಲಿಯೇ ಉಳಿಸಬೇಕೆಂದು ಆಗ್ರಹಿಸಲಾಗಿದೆ.
ನಿಯೋಗದಲ್ಲಿ ವಸಂತ ಅರ್ಕಾಚಾರಿ, ಉದಯ ಯಂಡಿಗೇರಿ, ಡಾ. ಚಂದ್ರಮೌಳಿ ನಾಯ್ಕರ್, ಬಸವರಾಜ ಅಕ್ಕಿ, ಸುಭಾಸ ಆಕಳವಾಡಿ ಇದ್ದರು. ಧಾರವಾಡದ ಆರ್‌ಎಂಎಸ್ ಕಚೇರಿ ಸ್ಥಳಾಂತರಿಸುವ ಪ್ರಕ್ರಿಯೆ ಇದು ಮೊದದಲ್ಲ. ಈ ಮೊದಲು ನಡೆದಿತ್ತು. ಆಗ, ಧಾರವಾಡ ಜನತೆಯ ಹೋರಾಟ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಪ್ರಭಾವದಿಂದ ಧಾರವಾಡದಲ್ಲಿಯೇ ಉಳಿದಿತ್ತು. ಇದೀಗ ಮತ್ತೆ ಅದೇ ರೀತಿ ಆತಂಕ ಶುರುವಾಗಿದ್ದು, ಆಕಾಶವಾಣಿ ಪ್ರಾದೇಶಿಕ ಸುದ್ದಿ ವಿಭಾಗ ಉಳಿಸಿಕೊಂಡಂತೆ ಆರ್‌ಎಂಎಸ್ ಕಚೇರಿಯನ್ನು ಸಹ ಉಳಿಸಿಕೊಳ್ಳುತ್ತಾರೆಯೇ ಕಾದು ನೋಡಬೇಕಿದೆ.