ಧಾರವಾಡ: ಇಲ್ಲಿಯ ಮರಾಠಾ ವಿದ್ಯಾಪ್ರಸಾರಕ ಮಂಡಳದ ಕಾಲೇಜು ಆವರಣದಲ್ಲಿ ಶನಿವಾರ ಉತ್ತರ ಕರ್ನಾಟಕದ ಗ್ರಾಮೀಣ ಸೊಗಡಿನ ''''''''''''''''ಹಳ್ಳಿ ಹಬ್ಬ'''''''''''''''' ಹೆಸರಿನ ಜಾನಪದ ಜಾತ್ರೆಯು ಜನಮನ ಸೆಳೆಯಿತು.
ಎತ್ತು-ಚಕ್ಕಡಿ ಮೆರವಣಿಗೆ:
ಜಾತ್ರೆಯ ಪ್ರಮುಖ ಆಕರ್ಷಣೆ ಸಾಂಪ್ರದಾಯಿಕ ಎತ್ತು-ಚಕ್ಕಡಿಗಳ ಮೆರವಣಿಗೆ. ಶೃಂಗಾರಗೊಂಡ ಎತ್ತು, ಗಂಟೆಯ ನಾದ ಹಾಗೂ ಸಾಲಾಗಿ ಸಾಗುತ್ತಿದ್ದ ಚಕ್ಕಡಿಗಳು ಕಾಲೇಜು ಆವರಣಕ್ಕೆ ಗ್ರಾಮೀಣ ಕಳೆಯನ್ನು ತಂದುಕೊಡುವಲ್ಲಿ ಯಶಸ್ವಿಯಾದವು.ಒಂದೆಡೆ ಹಳೆಯ ಚಕ್ಕಡಿಗಳಿದ್ದರೆ, ಇನ್ನೊಂದೆಡೆ ಇಂದಿನ ಆಧುನಿಕ ಕೃಷಿಯ ಸಂಕೇತವಾದ ಟ್ರ್ಯಾಕ್ಟರ್‌ಗಳು ಜಾನಪದ ಜಾತ್ರೆಗೆ ಹೊಸ ವೇಗ ನೀಡಿದವು. ಟ್ರ್ಯಾಕ್ಟರ್‌ಗಳ ಡಿಜೆ ಶಬ್ದದ ಅಬ್ಬರಕ್ಕೆ ಯುವಕರು ಮತ್ತು ಯುವತಿಯರು ಹೆಜ್ಜೆ ಹಾಕಿದರು. ಜಾನಪದ ಗೀತೆ ಮತ್ತು ಡೊಳ್ಳಿನ ಪದಗಳ ರಿಮಿಕ್ಸ್‌ಗೆ ಇಡೀ ಆವರಣವೇ ಧೂಳೆಬ್ಬಿಸಿತು. ಹಳೇ ಬೇರು ಹೊಸ ಚಿಗುರು ಎಂಬಂತೆ ಗ್ರಾಮೀಣ ಮತ್ತು ಆಧುನಿಕತೆಯ ಸಮ್ಮಿಲನ ಇಲ್ಲಿ ಕಂಡುಬಂತು.
ಈ ಇಡೀ ಜಾನಪದ ಜಾತ್ರೆಗೆ ಅಸಲಿ ಮೆರುಗು ನೀಡಿದ್ದು ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಅರಬಗೊಂಡದ ಪ್ರಸಿದ್ಧ ''''''''''''''''ಬಣಕಾರ ಹುಲಿ'''''''''''''''' (ಪಿಪಿ ಹೋರಿ). ''''''''''''''''ಬಣಕಾರ ಹುಲಿ'''''''''''''''' ಕಾಲೇಜು ಅಂಗಳಕ್ಕೆ ಬಂದಾಕ್ಷಣ ವಿದ್ಯಾರ್ಥಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತು. ತಲೆಗೆ ಕಟ್ಟಿದ ಬಣ್ಣ ಬಣ್ಣದ ರಿಬ್ಬನ್‌ಗಳು, ಕೊರಳಿನ ಗೆಜ್ಜೆ ಸರ, ಬೆನ್ನಿನ ಮೇಲಿನ ಅಲಂಕಾರಿಕ ಜೂಲಾವಳಿಗಳೊಂದಿಗೆ ಗಂಭೀರವಾಗಿ ಹೆಜ್ಜೆ ಹಾಕಿದ ಈ ಹೋರಿ, ಜಾತ್ರೆಯ ಅಸಲಿ ಕಳೆ ಹೆಚ್ಚಿಸಿತು.