ಸುಸೂತ್ರ ಮತದಾನಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ: ಚುನಾವಣಾಧಿಕಾರಿ

KannadaprabhaNewsNetwork |  
Published : Apr 08, 2026, 02:00 AM IST
ಕ್ಯಾಪ್ಷನ7ಕೆಡಿವಿಜಿ62 ದಾವಣಗೆರೆಯಲ್ಲಿ ಚುನಾವಣಾಧಿಕಾರಿ ಸಂತೋಷ ಕುಮಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಏ.9ರಂದು ನಡೆಯಲಿರುವ ಮತದಾನಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಮತ್ತು ಚುನಾವಣಾ ಆಯೋಗ ಎಲ್ಲಾ ರೀತಿ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ ಎಂದು ಚುನಾವಣಾಧಿಕಾರಿ ಸಂತೋಷ್‌ ಕುಮಾರ್‌ ತಿಳಿಸಿದ್ದಾರೆ.

- ಒಟ್ಟು 2,31,072 ಸಾಮಾನ್ಯ ಮತದಾರರು । 284 ಮತಗಟ್ಟೆ ಸ್ಥಾಪನೆ । 229 ಹಿರಿಯ ನಾಗರಿಕರು, ವಿಕಲಚೇತನರಿಂದ ಅಂಚೆ ಮತದಾನ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಏ.9ರಂದು ನಡೆಯಲಿರುವ ಮತದಾನಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಮತ್ತು ಚುನಾವಣಾ ಆಯೋಗ ಎಲ್ಲಾ ರೀತಿ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ ಎಂದು ಚುನಾವಣಾಧಿಕಾರಿ ಸಂತೋಷ್‌ ಕುಮಾರ್‌ ತಿಳಿಸಿದರು.

ಅವರು ಮಂಗಳವಾರ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣಾ ಸಂಬಂಧ ಮಹಾನಗರ ಪಾಲಿಕೆ ಕಚೇರಿಯ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷಿಯಲ್ಲಿ ಮಾಧ್ಯಮದವರನ್ನು ಕುರಿತು ಮಾತನಾಡಿದರು. ನಂ-107 ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ 1,13,399 ಪುರುಷರು , 1,17,690 ಮಹಿಳೆಯರು ಹಾಗೂ 43 ಇತರರು ಒಟ್ಟು 2,31,072 ಸಾಮಾನ್ಯ ಮತದಾರಿದ್ದಾರೆ, ಇವರಲ್ಲಿ 1,494-ಪುರುಷರು, 1,376-ಮಹಿಳೆಯರು ಒಟ್ಟು 2,870 ಯುವ ಮತದಾರರು, 1,375 ಪುರುಷರು , 1,137-ಮಹಿಳೆಯರು ಒಟ್ಟು 2,512 ವಿಕಲಚೇತನ **(PWD)** ಮತದಾರರು , 891 ಪುರುಷರು 1,083-ಮಹಿಳೆಯರು ಒಟ್ಟು 1974 ಮತದಾರರು 85+ ವರ್ಷ ಮೇಲ್ಪಟ್ಟವರು , 8 ಪುರುಷರು , 20-ಮಹಿಳೆಯರು ಒಟ್ಟು 28 ಮತದಾರರು 100+ ವರ್ಷ ಮೇಲ್ಪಟ್ಟವರು ಮತ್ತು 34-ಪುರುಷರು , 1–ಮಹಿಳೆಯರು ಒಟ್ಟು 35 ಸೇವಾ ಮತದಾರರು ಇದ್ದಾರೆ. ಎಲ್ಲರಿಗೂ ಮತದಾನದ ಹಕ್ಕನ್ನು ಚಲಾಯಿಸಲು ಅನುಕೂಲ ಮಾಡಿಕೊಡಲಾಗಿದೆ ಎಂದರು.

ಕ್ಷೇತ್ರದಲ್ಲಿ ಒಟ್ಟು 284 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇದರಲ್ಲಿ ನಗರ ವ್ಯಾಪ್ತಿಯಲ್ಲಿ 234 ಮತ್ತು ಗ್ರಾಮೀಣ ವ್ಯಾಪ್ತಿಯಲ್ಲಿ 50 ಮತಗಟ್ಟೆಗಳು ಸೇರಿವೆ. ಪ್ರತಿಯೊಂದು ಮತಗಟ್ಟೆಯಲ್ಲಿ ಕಾಯ್ದಿರಿಸಿದ ಕೊಠಡಿ, ಕುಡಿಯುವ ನೀರು, ರ‍್ಯಾಂಪ್ ವ್ಯವಸ್ಥೆ, ಶೌಚಾಲಯ, ನೆರಳು ಮತ್ತು ಕ್ಯೂ ಮ್ಯಾನೇಜ್‌ಮೆಂಟ್ ಫಿಡಿಂಗ್‌ ಕೊಠಡಿ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. 229 ಮಂದಿ ಹಿರಿಯ ನಾಗರಿಕರು ಮತ್ತು ವಿಕಲಚೇತನರು ಅಂಚೆ ಪತ್ರದ ಮೂಲಕ ಮನೆಯಿಂದಲೇ ಮತದಾನ ಮಾಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ ಎಂದು ತಿಳಿಸಿದರು.

ಪಾರದರ್ಶಕ ಮತದಾನಕ್ಕೆ ತಂತ್ರಜ್ಞಾನದ ಬಳಕೆ:

ಚುನಾವಣಾ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಲು 284 ಮತಗಟ್ಟೆಗಳಲ್ಲೂ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದ್ದು, ಮತದಾನದ ದಿನದಂದು ನೇರ ಪ್ರಸಾರ ಇರಲಿದೆ. ಸ್ಟ್ರಾಂಗ್ ರೂಮ್‌ಗಳಲ್ಲಿ ಇವಿಎಂ, ಕಂಟ್ರೋಲ್ ಯೂನಿಟ್ ಮತ್ತು ವಿವಿಪ್ಯಾಟ್ ಯಂತ್ರಗಳನ್ನು ಕಮಿಷನಿಂಗ್ ಮಾಡಿ ಸಜ್ಜುಗೊಳಿಸಲಾಗಿದೆ. ತಾಂತ್ರಿಕ ತೊಂದರೆ ಎದುರಾದರೆ ತಕ್ಷಣ ಬದಲಿಸಲು ''''''''ರಿಸರ್ವ್ ಯಂತ್ರಗಳನ್ನು'''''''' ಸೆಕ್ಟರ್ ಅಧಿಕಾರಿಗಳ ಬಳಿ ಇರಿಸಲಾಗಿದೆ ಎಂದರು.

ಬಿಗಿ ಪೊಲೀಸ್ ಬಂದೋಬಸ್ತ್ ಮತ್ತು ಕಣ್ಗಾವಲು:

ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ವ್ಯಾಪಕ ಭದ್ರತೆ ನಿಯೋಜಿಸಲಾಗಿದೆ. ಸುಮಾರು 1,000ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದ್ದು, ಇದರಲ್ಲಿ ಸಿಎಪಿಎಫ್ **(CAPF)**, ಎಎಸ್ಐ, ಎಚ್‌ಸಿ ಮತ್ತು ಪಿಸಿ ಸಿಬ್ಬಂದಿ ಸೇರಿದ್ದಾರೆ.

ಸೂಕ್ಷ್ಮ ಮತಗಟ್ಟೆಗಳು:

76 ಮತಗಟ್ಟೆಗಳನ್ನು ''''''''ಸೂಕ್ಷ್ಮ'''''''' (Critical) ಎಂದು ಗುರುತಿಸಲಾಗಿದ್ದು, ಅಲ್ಲಿ ಹೆಚ್ಚುವರಿ ಕೇಂದ್ರ ಸಶಸ್ತ್ರ ಪಡೆಗಳನ್ನು ನಿಯೋಜಿಸಲಾಗಿದೆ. ಮುಂದಿನ 48 ಗಂಟೆಗಳ ಕಾಲ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳಲು ಫ್ಲೈಯಿಂಗ್ ಸ್ಕ್ವಾಡ್ **(SST)**, ಅಕೌಂಟಿಂಗ್ ಟೀಮ್ ಮತ್ತು ಸೆಕ್ಟರ್ ಅಧಿಕಾರಿಗಳು ಹಗಲಿರುಳು ಕಾರ್ಯನಿರ್ವಹಿಸಲಿದ್ದಾರೆ.

ಇವಿಎಂ ವಿವರ:

**BU:** 568, **CU:** 284, **VVPAT:** 284. ಮೀಸಲು **(Reserve): BU:** 169, **CU:** 70, **VVPAT:** 100.

ಸಾರಿಗೆ ಮತ್ತು ವಿತರಣಾ ಕೇಂದ್ರ:

ಮತದಾನದ ಸಾಮಗ್ರಿಗಳನ್ನು ವಿತರಿಸಲು ಮತ್ತು ಸ್ವೀಕರಿಸಲು ಡಿ.ಆರ್.ಆರ್ **(DRR)** ಸಂಸ್ಥೆಯ ಶಾಲೆಯನ್ನು ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ಕೇಂದ್ರವನ್ನಾಗಿ ಮಾಡಲಾಗಿದೆ. ಮತದಾನದ ನಂತರ ಇವಿಎಂಗಳನ್ನು ಇದೇ ಕೇಂದ್ರದ ಸ್ಟ್ರಾಂಗ್ ರೂಮ್‌ನಲ್ಲಿ ಇರಿಸಲಾಗುವುದು. ಚುನಾವಣಾ ಸಿಬ್ಬಂದಿ ಮತ್ತು ಸಾಮಗ್ರಿಗಳ ಸಾಗಾಟಕ್ಕಾಗಿ 28 ಕೆಎಸ್ಆರ್‌ಟಿಸಿ ಬಸ್‌ಗಳು, 39 ಮಿನಿ ಬಸ್‌ಗಳು ಹಾಗೂ 5 ಜೀಪ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದರು.

ಮೇ 4ರಂದು ಡಿ.ಆರ್.ಆರ್. ಶಾಲೆಯಲ್ಲಿಯೇ ಮತ ಎಣಿಕೆ ಕಾರ್ಯ ನಡೆಯಲಿದೆ. ಸಾರ್ವಜನಿಕರು ಶಾಂತಿಯುತವಾಗಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಜಿಲ್ಲಾಡಳಿತ ಮನವಿ ಮಾಡುತ್ತದೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆ ಮುಕ್ತ, ನ್ಯಾಯಸಮ್ಮತ ಮತ್ತು ಶಾಂತಿಯುತವಾಗಿ ನಡೆಸಲು ಪೊಲೀಸ್ ಇಲಾಖೆ ಸಂಪೂರ್ಣ ಸಜ್ಜಾಗಿದೆ ಎಂದರು.

ಹೊರಗಿನವರಿಗೆ ನಿರ್ಬಂಧ:

ಮಂಗಳವಾರ ಸಂಜೆ 5:30ಕ್ಕೆ ಬಹಿರಂಗ ಪ್ರಚಾರ ಅಂತ್ಯಗೊಂಡು, ಪ್ರಚಾರಕ್ಕಾಗಿ ಬಂದಿರುವ ಹೊರಗಿನ ವ್ಯಕ್ತಿಗಳು ತಕ್ಷಣವೇ ಕ್ಷೇತ್ರವನ್ನು ತೊರೆಯಬೇಕು. ಇದಕ್ಕಾಗಿ ಪೊಲೀಸರು ಹೋಟೆಲ್‌ಗಳು, ರೆಸಾರ್ಟ್‌ಗಳು, ಕಲ್ಯಾಣ ಮಂಟಪಗಳು ಮತ್ತು ಲಾಡ್ಜ್‌ಗಳಲ್ಲಿ ತಪಾಸಣೆ ನಡೆಸಲಿದ್ದಾರೆ. ಯಾವುದೇ ರಾಜಕೀಯ ಪಕ್ಷ ಅಥವಾ ಧಾರ್ಮಿಕ ಸಂಸ್ಥೆಗಳು ಮುಂದಿನ 48 ಗಂಟೆಗಳ ಕಾಲ ಮೆರವಣಿಗೆ ಅಥವಾ ಪ್ರತಿಭಟನೆ ನಡೆಸುವಂತಿಲ್ಲ ಎಂದ ಅವರು, ಮಾರಕಾಸ್ತ್ರಗಳು, ಕತ್ತಿ, ಈಟಿ ಅಥವಾ ದೈಹಿಕ ಹಿಂಸೆಗೆ ಪ್ರಚೋದಿಸುವ ಯಾವುದೇ ವಸ್ತುಗಳನ್ನು ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ ಎಂದರು.

ಚೆಕ್ ಪೋಸ್ಟ್ ತಪಾಸಣೆ:

ದಾವಣಗೆರೆ ನಗರದ ವಿವಿಧ ಚೆಕ್ ಪೋಸ್ಟ್‌ಗಳಲ್ಲಿ ತಪಾಸಣೆ ಚುರುಕುಗೊಳಿಸಲಾಗಿದ್ದು, ಈಗಾಗಲೇ ₹15.37 ಲಕ್ಷ ನಗದು ಮತ್ತು 233.49 ಲೀಟರ್‌ ಅಂದರೆ ₹133849 ಗಳಷ್ಟು ಮದ್ಯ ವಶಪಡಿಸಿಕೊಳ್ಳಲಾಗಿದೆ. ಮತದಾರರಿಗೆ ಆಮಿಷ ಒಡ್ಡಲು ಕುಕ್ಕರ್, ಸೀರೆ ಮುಂತಾದ ವಸ್ತುಗಳನ್ನು ಹಂಚುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಫ್ಲೈಯಿಂಗ್ ಸ್ಕ್ವಾಡ್‌ಗಳು ತಕ್ಷಣವೇ ಕ್ರಮ ಕೈಗೊಳ್ಳುತ್ತಿವೆ. ಹಲವೆಡೆ ಈಗಾಗಲೇ ಎಫ್‌ಐಆರ್ ದಾಖಲಿಸಲಾಗಿದೆ ಎಂದರು.

ಸೋಷಿಯಲ್ ಮೀಡಿಯಾ ಮೇಲೆ ಹದ್ದಿನಕಣ್ಣು:

ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಐಡಿ ಸೃಷ್ಟಿಸಿ ಅಭ್ಯರ್ಥಿಗಳ ಪರ ಅಥವಾ ವಿರುದ್ಧ ಅಪಪ್ರಚಾರ ನಡೆಸುವವರ ಮೇಲೆ ಸೈಬರ್ ಪೊಲೀಸ್ ತಂಡ ನಿಗಾ ಇರಿಸಿದೆ. ಎಂ.ಸಿ.ಸಿ (ಮಾದರಿ ನೀತಿ ಸಂಹಿತೆ) ಉಲ್ಲಂಘಿಸುವ ಪೋಸ್ಟ್‌ಗಳನ್ನು ಹಾಕುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ ಎಂದರು.

ಮತದಾನದ ದಿನದ ವಿಶೇಷ ವ್ಯವಸ್ಥೆಗಳು:

ಮತದಾನದ ಸಮಯ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. ಸಂಜೆ 6 ಗಂಟೆಯ ಒಳಗೆ ಮತಗಟ್ಟೆಗೆ ಬಂದು ಸಾಲಿನಲ್ಲಿ ನಿಂತಿರುವ ಮತದಾರರಿಗೆ ಟೋಕನ್ ನೀಡಲಾಗುವುದು. ಟೋಕನ್ ಪಡೆದ ಪ್ರತಿಯೊಬ್ಬರಿಗೂ ಮತದಾನಕ್ಕೆ ಅವಕಾಶವಿದೆ. ಮತದಾನದ ದಿನ ಬೆಳಗ್ಗೆ 5:30 ರಿಂದ 7 ಗಂಟೆಯವರಿಗೆ ಅಭ್ಯರ್ಥಿಗಳ ಏಜೆಂಟರ ಸಮ್ಮುಖದಲ್ಲಿ ''''''''ಮಾಕ್ ಪೋಲ್'''''''' ನಡೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಚುನಾವಣಾ ಸಿಬ್ಬಂದಿ ಹಾಜರಿದ್ದರು.

- - -

-7ಕೆಡಿವಿಜಿ62:

ದಾವಣಗೆರೆಯಲ್ಲಿ ಚುನಾವಣಾಧಿಕಾರಿ ಸಂತೋಷ ಕುಮಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಪಕದನದ ಬಹಿರಂಗ ಪ್ರಚಾರ ಅಂತ್ಯ
ಇಂದಿನಿಂದ ಗ್ರಾಮದೇವತೆ ಶ್ರೀಪಟ್ಟಲದಮ್ಮನ ಜಾತ್ರಾ ಮಹೋತ್ಸವ