ವಿದ್ಯಾದಾಸ ಬಾಬಾ ನೇಮಿಸಿದ ಸಿಬ್ಬಂದಿ ಹೊರಗೆ ಹಾಕಿದ ಜಿಲ್ಲಾಡಳಿತ
ಗಂಗಾವತಿ: ಹನುಮ ಜನಿಸಿದ ಸ್ಥಳ, ತಾಲೂಕಿನ ಅಂಜನಾದ್ರಿ ಬೆಟ್ಟದ ದೇಗುಲ ಈಗ ಮತ್ತೆ ಅರ್ಚಕ ವಿದ್ಯಾದಾಸ ಬಾಬಾ ಅವರಿಂದ ಕೊಪ್ಪಳ ಜಿಲ್ಲಾಡಳಿತ ತನ್ನ ಸುಪರ್ದಿಗೆ ತೆಗೆದುಕೊಂಡಿದೆ.
ಉಚ್ಚ ನ್ಯಾಯಾಲಯ ತನ್ನ ಪರವಾಗಿ ಆದೇಶ ನೀಡಿದೆ ಎಂಬ ಕಾರಣಕ್ಕೆ ವಿದ್ಯಾದಾಸ ಬಾಬಾ ಅವರು ಜಿಲ್ಲಾಡಳಿತ ನೇಮಕ ಮಾಡಿದ್ದ ಸಿಬ್ಬಂದಿಯನ್ನು ಹೊರಹಾಕಿದ್ದಲ್ಲದೆ, ಕಚೇರಿಗೆ ಬೀಗ ಹಾಕಿ ದೇಗುಲವನ್ನು ತಮ್ಮ ನಿಯಂತ್ರಣಕ್ಕೆ ಪಡೆದಿದ್ದರು. ಅ. 13ರಂದು ದೇಗುಲಕ್ಕೆ ಅಪರ ಜಿಲ್ಲಾಧಿಕಾರಿ ಭೇಟಿ ನೀಡಿ, ನ್ಯಾಯಾಲಯ ಸೂಚನೆ ಪಾಲಿಸುವಂತೆ ಬಾಬಾ ಅವರಿಗೆ ತಿಳಿಸಿದ್ದರು. ಆದರೂ ಬಾಬಾ ಅವರು ದೇಗುಲ ಪ್ರವೇಶಿಸಿ ಅಲ್ಲಿರುವ 20ಕ್ಕೂ ಹೆಚ್ಚು ಸಿಬ್ಬಂದಿಯನ್ನು ಹೊರಹಾಕಿ ಕಚೇರಿಗೆ ಬೀಗ ಹಾಕಿದ್ದರು.ವಿದ್ಯಾದಾಸ ಬಾಬಾ ನ್ಯಾಯಾಲಯ ಸೂಚನೆ ಪಾಲಿಸಿಲ್ಲ ಎಂದು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ತಹಸೀಲ್ದಾರ್ ಪ್ರಕರಣ ದಾಖಲಿಸಿದ್ದರು.
ವಾಗ್ವಾದ: ವಿದ್ಯಾದಾಸ ಬಾಬಾ ನೇಮಕ ಮಾಡಿದ್ದ ಸಿಬ್ಬಂದಿಯನ್ನು ಹೊರಹಾಕಲು ಹೋಗಿದ್ದ ಅಧಿಕಾರಿಗಳ ಜತೆ ಬಾಬಾ ವಾಗ್ವಾದ ನಡೆಸಿದರು. ಉಚ್ಚ ನ್ಯಾಯಾಲಯ ಆದೇಶದಂತೆ ಸರ್ಕಾರ ನೇಮಕ ಮಾಡಿದ ಸಿಬ್ಬಂದಿ ಕಾರ್ಯ ನಿರ್ವಹಿಸಬೇಕು ಮತ್ತು ಕೇವಲ ನೀವು ಪೂಜೆ ಮತ್ತು ವಸತಿ ಸೌಕರ್ಯಕ್ಕೆ ಅರ್ಹರಿದ್ದೀರಿ ಎಂದು ಹೇಳುತ್ತಿದ್ದಂತೆಯೆ ಅಧಿಕಾರಿಗಳ ವಿರುದ್ಧ ಬಾಬಾ ಅಕ್ರೋಶ ವ್ಯಕ್ತಪಡಿಸಿದರು. .
ನಿಮಗೆ ಕೇವಲ ಪೂಜಾ ಕೈಂಕರ್ಯ ಮತ್ತು ವಸತಿ ವ್ಯವಸ್ಥೆಗೆ ಅವಕಾಶ ನೀಡಿದೆ ಎಂದು ತಿಳಿಸಿದ್ದಾರೆ. ಮೊದಲು ನೀಡಿದ ಉಚ್ಚ ನ್ಯಾಯಾಲಯ ಆದೇಶ ಪಾಲಿಸಬೇಕು ಮತ್ತು ನೀವು ನೇಮಕ ಮಾಡಿದ ಸಿಬ್ಬಂದಿಯನ್ನು ಹೊರಗೆ ಕಳುಹಿಸುವಂತೆ ತಿಳಿಸಿದ್ದಾರೆ.