ಗದಗ: ಗದುಗಿನ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ದಿ. ಕೆ.ಎಚ್. ಪಾಟೀಲರ ಹೆಸರನ್ನು ನಾಮಕರಣ ಮಾಡಲು ಸರ್ಕಾರ ಕ್ರಮ ವಹಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿರುವುದು ತೀರಾ ಖಂಡನೀಯ ಎಂದು ಬಿಜೆಪಿ ಗದಗ ಜಿಲ್ಲಾಧ್ಯಕ್ಷ ತೋಟಪ್ಪ (ರಾಜು) ಕುರುಡಗಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಈ ಹಿಂದೆ ಬಿ. ಶ್ರೀರಾಮುಲು ಗದಗ ಉಸ್ತುವಾರಿ ಮಂತ್ರಿಗಳಾಗಿದ್ದಾಗ ಮಹಾತ್ಮ ಗಾಂಧಿ ಪುತ್ಥಳಿ, ವೀರರಾಣಿ ಕಿತ್ತೂರ ರಾಣಿ ಚೆನ್ನಮ್ಮ ಪುತ್ಥಳಿ, ಕೆ.ಎಚ್. ಪಾಟೀಲರ ಪುತ್ಥಳಿ, ಡಾ.ಪಂ.ಪುಟ್ಟರಾಜ ಗವಾಯಿಗಳ ಪುತ್ಥಳಿ, ಹುಯಿಲಗೋಳ ನಾರಾಯಣರಾವ್ ಪುತ್ಥಳಿ, ಜಗಜ್ಯೋತಿ ಬಸವೇಶ್ವರರ ಪುತ್ಥಳಿ, ಕುಮಾರವ್ಯಾಸರ ಪುತ್ಥಳಿ ಈ ರೀತಿಯಾಗಿ ಅನೇಕ ಮಹನೀಯರ ಪುತ್ಥಳಿಗಳನ್ನು ಸ್ಥಾಪಿಸಲಾಗಿತ್ತು.ಈ ಹಿಂದೆ ಜಗದೀಶ ಶೆಟ್ಟರ್ ಮುಖ್ಯಮಂತ್ರಿಗಳಾಗಿದ್ದಾಗ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಕ್ಯಾಬಿನೆಟ್ ಅನುಮತಿ ನೀಡಿದರು. ನಂತರ ಬಂದ ಬಿಜೆಪಿ ಸರ್ಕಾರದಲ್ಲಿ ನೂರಾರು ಕೋಟಿ ಅನುದಾನ ನೀಡಿ ಗದಗ ವೈದ್ಯಕೀಯ ವಿದ್ಯಾ ಸಂಸ್ಥೆ ನಿರ್ಮಿಸಿದೆ.
ದಿ. ಕೆ.ಎಚ್. ಪಾಟೀಲರ ಬಗ್ಗೆ ಎಲ್ಲರಿಗೂ ಗೌರವವಿದೆ, ಆದರೆ ಕೆ.ಎಚ್. ಪಾಟೀಲರ ಹೆಸರನ್ನು ಈಗಾಗಲೇ ಗದಗ ನಗರದ ಜಿಲ್ಲಾ ಕ್ರೀಡಾಂಗಣಕ್ಕೆ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣ ಅಂತಾ ನಾಮಕರಣ ಮಾಡಲಾಗಿದೆ. ರೈತರಿಂದ ವಸೂಲಿ ಮಾಡಿದ ತೆರಿಗೆ ಹಣದಲ್ಲಿ ಕಟ್ಟಿದ ರೈತ ಭವನಕ್ಕೆ ಕೂಡಾ ಕೆ.ಎಚ್. ಪಾಟೀಲ ಸಭಾಭವನ ಅಂತಾ ನಾಮಕರಣ ಮಾಡಲಾಗಿದೆ. ವೀರಶೈವ ಲೈಬ್ರರಿ ಎದುರಿಗೆ ಕೆ.ಎಚ್. ಪಾಟೀಲ್ ವೃತ್ತ ಅಂತಾ ಮಾಡಲಾಗಿದೆ. ಎಪಿಎಂಸಿ ಯಾರ್ಡ್‌ನಲ್ಲಿ ಹಾಗೂ ಕಾಟನ್‌ಸೆಲ್ ಸೊಸೈಟಿಯಲ್ಲಿ ಕೆ.ಎಚ್. ಪಾಟೀಲರ ಮೂರ್ತಿ ಪ್ರತಿಷ್ಠಾಪಿಸಲಾಗಿದೆ.3500 ಮನೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದಲ್ಲಿ ಕಟ್ಟುತ್ತಿರುವ ಹೊಸ ಬಡಾವಣೆಗೆ ಕೆ.ಎಚ್. ಪಾಟೀಲರ ಹೆಸರನ್ನು ಇಡಲು ನಗರಸಭೆಯಿಂದ ಠರಾವ್ ಪಾಸ್ ಮಾಡಲಾಗಿದೆ. ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರ, ಕೆ.ಎಚ್.ಪಾಟೀಲ ಆಸ್ಪತ್ರೆ ಹಾಗೂ ಕೆ.ಎಚ್. ಪಾಟೀಲರ ಹೆಸರಿನಲ್ಲಿ ಇನ್ನೂ ಅನೇಕ ರಸ್ತೆಗಳಿಗೆ ಕಾಲನಿಗಳಿಗೆ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ. ಈಗಾಗಲೇ ಸಾಕಷ್ಟು ಕಡೆ ಕೆ.ಎಚ್. ಪಾಟೀಲರ ಹೆಸರನ್ನು ನಾಮಕರಣ ಮಾಡಲಾಗಿದೆ. ಒಂದು ವೇಳೆ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ನಾಮಕರಣ ಮಾಡುವುದಾದರೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್, ಡಾ. ಪಂಡಿತ ಪುಟ್ಟರಾಜ ಗವಾಯಿಗಳ ಹೆಸರನ್ನಾಗಲಿ, ಪಂ. ಭೀಮಸೇನ್ ಜೋಶಿ ಹೆಸರನ್ನಾಗಿ ಇಟ್ಟರೆ ಅದಕ್ಕೆ ಒಂದು ಶೋಭೆ ಬರುತ್ತದೆ.
ಸಚಿವ ಎಚ್.ಕೆ. ಪಾಟೀಲರು ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದು ತಮ್ಮ ತಂದೆಯವರ ಹೆಸರನ್ನು ಇಡಲು ಆಯಕಟ್ಟಿನ ಜಾಗವಾದ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಕೆ.ಎಚ್. ಪಾಟೀಲರ ಹೆಸರು ನಾಮಕರಣ ಮಾಡಲು ಹೊರಟಿದ್ದು, ಖೇದಕರ ಸಂಗತಿಯಾಗಿದೆ. ಎಲ್ಲ ಪ್ರಮುಖ ಸ್ಥಳಗಳಿಗೆ ತಮ್ಮ ತಂದೆಯವರ ಹೆಸರನ್ನೇ ಇಡುತ್ತಾ ಹೋದರೆ ಜನರು ಸಹನೆ ಕಳೆದುಕೊಳ್ಳುವರು ಎಂದು ಎಚ್.ಕೆ. ಪಾಟೀಲರ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.