ಬಳ್ಳಾರಿ: ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯಿಂದ ನಗರದ ಎಪಿಎಂಸಿ ಆವರಣದಲ್ಲಿನ ಉಚಿತ ಆಸ್ಪತ್ರೆ ಮುಂಭಾಗ ಮೇ 26 ರಂದು ಬೃಹತ್ ರೈತಮೇಳ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಅವ್ವಾರು ಮಂಜುನಾಥ ಹಾಗೂ ಗೌರವ ಕಾರ್ಯದರ್ಶಿ ಕೆ.ಸಿ.ಸುರೇಶ ಬಾಬು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮೇಳದ ಕುರಿತು ವಿವರಿಸಿದ ಅವರು, ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ ಹಾಗೂ ವೈಜ್ಞಾನಿಕ ಬಿತ್ತನೆ ಕುರಿತು ಜಾಗೃತಿ ಮೂಡಿಸುವ ಮುಖ್ಯ ಆಶಯದಿಂದ ಜಿಲ್ಲಾಡಳಿತ, ಜಿಪಂ, ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ನೀರಾವರಿ, ಪಶು ಸಂಗೋಪನೆ, ಬಳ್ಳಾರಿ ಜಿಲ್ಲಾ ಕಾಟನ್ ಅಸೋಸಿಯೇಷನ್, ಕೃಷಿ ಪರಿಕರಗಳ ಮಾರಾಟಗಾರರ ಸಂಘ, ಎಪಿಎಂಸಿ ವರ್ತಕರ ಸಂಘ, ದಲ್ಲಾಲಿ ವರ್ತಕರ ಸಂಘ ಹಾಗೂ ವಿವಿಧ ರೈತ ಸಂಘಟನೆಗಳ ಸಹಕಾರದಲ್ಲಿ ರೈತ ಮೇಳ ಆಯೋಜನೆಗೊಳಿಸಲಾಗಿದೆ.
ಮೇಳದಲ್ಲಿ ಕೃಷಿ ವಿಜ್ಞಾನಿಗಳು, ಪರಿಣಿತ ಸಂಪನ್ಮೂಲ ವ್ಯಕ್ತಿಗಳಿಂದ ವಿವಿಧ ಬೆಳೆ ಪದ್ಧತಿ ಕುರಿತು ಉಪನ್ಯಾಸಗಳು ಜರುಗಲಿವೆ. ಕೃಷಿ ಪರಿಕರಗಳು, ಗುಣಮಟ್ಟದ ಪ್ರಮಾಣೀಕೃತ ಬೀಜಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ. ಬೆಳಿಗ್ಗೆ 9 ಗಂಟೆಗೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ರೈತ ಮೇಳಕ್ಕೆ ಚಾಲನೆ ನೀಡುವರು.
ರಾಯಚೂರು ಕೃಷಿ ವಿವಿಯ ಕುಲಪತಿ ಡಾ.ಎಂ.ಹನುಮಂತಪ್ಪ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಮೇಳ ಶುರು ಮುನ್ನ ನಗರೇಶ್ವರಸ್ವಾಮಿ ದೇವಸ್ಥಾನದಿಂದ ಕಾರ್ಯಕ್ರಮ ಜರುಗುವ ಎಪಿಎಂಸಿ ಆವರಣದವರೆಗೆ ರೈತರ ಮೆರವಣಿಗೆ ನಡೆಯಲಿದೆ. ಮೆರವಣಿಗೆಯಲ್ಲಿ ಜೋಡೆತ್ತಿನಬಂಡಿಗಳು, ವಿವಿಧ ಜಾನಪದ ಕಲಾ ತಂಡಗಳು ಭಾಗವಹಿಸಲಿವೆ. ಮೇಳ ಕುರಿತು ಈಗಾಗಲೇ ಸಾಕಷ್ಟು ಪ್ರಚಾರ ಕೈಗೊಳ್ಳಲಾಗಿದೆ.ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಎಸ್.ದೊಡ್ಡನಗೌಡ, ಸೋಂತ ಗಿರಿಧರ್, ಪಾಲಣ್ಣ, ಜಂಟಿ ಕಾರ್ಯದರ್ಶಿಗಳಾದ ಡಾ.ಮರ್ಚೇಡ್ ಮಲ್ಲಿಕಾರ್ಜುನಗೌಡ, ವಿ.ರಾಮಚಂದ್ರಪ, ಸಂಸ್ಥೆಯ ಮಾಜಿ ಅಧ್ಯಕ್ಷ ಸಿ.ಶ್ರೀನಿವಾಸ ರಾವ್, ಖಜಾಂಚಿ ಸಿ.ಎಸ್.ಸತ್ಯನಾರಾಯಣ, ಡಿ.ತಿಪ್ಪೇಸ್ವಾಮಿ, ಟಿ.ಚಿದಾನಂದಪ್ಪ ಮತ್ತಿತರರಿದ್ದರು.